ರಾಷ್ಟ್ರೀಯ

ಸೌರ ವಿದ್ಯುತ್ ಕ್ಷೇತ್ರ: ಜಗತ್ತಿನಲ್ಲಿ ಭಾರತ 5ನೇ ಸ್ಥಾನದಲ್ಲಿ - ಮೋದಿ

ಸೌರ ವಿದ್ಯುತ್ ಕ್ಷೇತ್ರ: ಜಗತ್ತಿನಲ್ಲಿ ಭಾರತ 5ನೇ ಸ್ಥಾನದಲ್ಲಿ - ಮೋದಿ

ನವದೆಹಲಿ, ಅ 24 : ಸೌರ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಉತ್ತಮ ಸಾಧನೆ ಮಾಡುತ್ತಿದ್ದು, ಇಡೀ ಜಗತ್ತಿನಲ್ಲಿ 5ನೇ ಸ್ಥಾನಕ್ಕೇರಿದೆ. ಕೃಷಿ ವಲಯದಲ್ಲಿ ಸೌರ ವಿದ್ಯುತ್ ಸೌಲಭ್ಯ ಕಲ್ಪಿಸಿ ರೈತರ ಆದಾಯ ದ್ವಿಗುಣಗೊಳಿಸಲು ಆದ್ಯತೆ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.ವಿಡಿಯೋ ವೇದಿಕೆ ಮೂಲಕ ಗುಜರಾತ್ ನಲ್ಲಿ ಕಿಸಾನ್ ಸೂರ್ಯೋದಯ, ಮಕ್ಕಳ ಹೃದ್ರೋಗ ಆಸ್ಪತ್ರೆ, ಗಿರ್ನಾರ್ ರೋಪ್ ವೇ ಸೇರಿ ಹಲವು ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ವಿದ್ಯುತ್ ದೊರಕಿಸಿಕೊಡಲು ಸುರ್ಯೋದಯ ಯೋಜನೆ ಸಹಕಾರಿಯಾಗಿದೆ.

ಈ ಯೋಜನೆ ರೈತರ ಬದುಕಿನಲ್ಲಿ ಬೆಳಕುಮೂಡಿಸುತ್ತದೆ ಎಂದರು.  ದೇಶದಲ್ಲಿ ರೈತರ ಪಂಪ್ ಸೆಟ್ ಗಳಿಗೆ ರಾತ್ರಿಯ ವೇಳೆ ಮಾತ್ರ ವಿದ್ಯುತ್ ದೊರೆಯುತ್ತಿದೆ. ಹಗಲು ವೇಳೆಯಲ್ಲಿ ವಿದ್ಯುತ್ ಲಭ್ಯವಾದರೆ ಕೃಷಿ ಕ್ಷೇತ್ರ ಮತ್ತಷ್ಟು ಸುಧಾರಣೆ ಕಾಣಲಿದೆ. ರೈತರ ಮೊಗದಲ್ಲಿ ಸಂತಸದ ಹೊನಲು ಹರಿಯಲಿದೆ ಎಂದು ಹೇಳಿದರು.ಕಳೆದ ಆರು ವರ್ಷಗಳಲ್ಲಿ ದೇಶ ಸೌರ ವಿದ್ಯುತ್ ಉತ್ಪಾದನೆಯಲ್ಲಿ ವಿಶ್ವದಲ್ಲಿ 5ನೇ ಸ್ಥಾನ ಪಡೆದು ವೇಗವಾಗಿ ಮುಂದೆ ಸಾಗಿದೆ. ರೈತರ ಆದಾಯ ಎರಡು ಪಟ್ಟು ಮಾಡಲು, ಕೃಷಿ ಉತ್ಪಾದನಾ ವೆಚ್ಚ ತಗ್ಗಿಸಲು, ಮತ್ತು ರೈತರ ಶ್ರಮ ತಗ್ಗಿಸಲು ಬದಲಾಗುತ್ತಿರುವ ಕಾಲಘಟ್ಟಕೆ ಅನುಗುಣವಾಗಿ ಸರ್ಕಾರ ತನ್ನ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ತಿಳಿಸಿದರು. ಒನ್ ಡ್ರಾಪ್ ಮೋರ್ ಕ್ರಾಪ್ ಯೋಜನೆ ರೈತರಿಗೆ ಸಹಕಾರಿಯಾಗಿದೆ. ರೈತರ ಅನುಕೂಲಕ್ಕಾಗಿ ನೀರಾವರಿ ಸೌಲಭ್ಯ, ಸಮರ್ಪಕ ವಿದ್ಯುತ್ ಪೂರೈಕೆ, ಬೆಳೆ ವಿಮಾ ಯೋಜನೆ, ತಮ್ಮ ಇಚ್ಛಾನುಸಾರ ಲಾಭದಾಯಕ ಬೆಲೆಗೆ ತಮ್ಮ ಉತ್ಪನ್ನ ಮಾರಾಟ ಮಾಡುವ ಅವಕಾಶ, ಮಣ್ಣಿನ ಫಲವತ್ತತೆ ಹೆಚ್ಚಿಸುವ ಯೋಜನೆಗಳು ಸಹಕಾರಿಯಾಗಿವೆ ಎಂದು ಹೇಳಿದರು. 

 

ಸುದ್ದಿ ಓದಿ