ರಾಷ್ಟ್ರೀಯ

ಕೇಂದ್ರ ತಂಡದಿಂದ ತಮಿಳುನಾಡು,ಪುದುಚೇರಿಯಲ್ಲಿ ಚಂಡಮಾರುತದಿಂದ ಉಂಟಾದ ಹಾನಿ ಪರಿಶೀಲನೆ

ಕೇಂದ್ರ ತಂಡದಿಂದ ತಮಿಳುನಾಡು,ಪುದುಚೇರಿಯಲ್ಲಿ ಚಂಡಮಾರುತದಿಂದ ಉಂಟಾದ ಹಾನಿ ಪರಿಶೀಲನೆ

ನವದೆಹಲಿ, ಡಿಸೆಂಬರ್ 5: ನಿವಾರ್’ ಚಂಡಮಾರುತದಿಂದ ಉಂಟಾದ ಹಾನಿಯನ್ನು ಖುದ್ದು ಪರಿಶೀಲಿಸಲು ಅಂತರ ಸಚಿವಾಲಯದ ಕೇಂದ್ರ ತಂಡ, ತಮಿಳುನಾಡು ಮತ್ತು ಪುದುಚೇರಿಯ ನಾಲ್ಕು ದಿನಗಳ ಪ್ರವಾಸವನ್ನು ಶನಿವಾರದಿಂದ ಆರಂಭಿಸಲಿದೆ. 

ಎಂಟು ಸದಸ್ಯರ ತಂಡದ ನೇತೃತ್ವವನ್ನು ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಶುತೋಷ್ ಅಗ್ನಿಹೋತ್ರಿ ವಹಿಸಿದ್ದಾರೆ. ತಂಡವನ್ನು ಕೃಷಿ, ಹೆದ್ದಾರಿ, ಹಣಕಾಸು, ವಿದ್ಯುತ್, ಗ್ರಾಮೀಣಾಭಿವೃದ್ಧಿ, ಮೀನುಗಾರಿಕೆ ಮತ್ತು ಜಲ ಸಂಪನ್ಮೂಲ ಸಚಿವಾಲಯಗಳು ಪ್ರತಿನಿಧಿಸುತ್ತವೆ

ನಿವಾರ್ ಚಂಡಮಾರುತ ಕಳೆದ ನ 25 ಮತ್ತು 26 ರ ನಡುವೆ ಉತ್ತರ ತಮಿಳುನಾಡು ಕರಾವಳಿ ಮತ್ತು ಪುದುಚೇರಿಗೆ ಸಮೀಪ ಕರಾವಳಿಯನ್ನು ದಾಟಿ ಕೃಷಿಭೂಮಿ ಮತ್ತು ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿತ್ತು.

 ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರೊಂದಿಗೆ ಶನಿವಾರ ಚರ್ಚೆ  ನಡೆಸಲಿರುವ ಅಂತರ ಸಚಿವಾಲಯದ ಕೇಂದ್ರ ತಂಡ ಇಂದು ಮಧ್ಯಾಹ್ನ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಶೀಲನಾ ಕಾರ್ಯ ಆರಂಭಿಸುವ ನಿರೀಕ್ಷೆಯಿದೆ. ತಂಡದ ಸದಸ್ಯರು ಚೆನ್ನೈ, ಚೆಂಗಲ್ಪಟ್ಟು , ಕಾಂಚಿಪುರಂ, ತಿರುವಳ್ಳೂರು, ಕಡಲೂರು,, ವಿಲ್ಲುಪುರಂ ವೆಲ್ಲೂರು ಮತ್ತು ತಿರುಪತ್ತೂರು ಸೇರಿದಂತೆ ಎಂಟು ಜಿಲ್ಲೆಗಳ ಅನೇಕ ಪ್ರದೇಶಗಳಿಗೆ ಸೋಮವಾರದವರೆಗೆ ಭೇಟಿ ನೀಡುವ ನಿರೀಕ್ಷೆಯಿದೆ.

ಮಂಗಳವಾರ ಚೆನ್ನೈಗೆ ಮರಳಿದ ನಂತರ ತಂಡವು ಪರಿಶೀಲನೆ ನಡೆಸಿದ ಮಾಹಿತಿಯೊಂದಿಗೆ ರಾಜ್ಯ ಸರ್ಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. ಪ್ರವಾಸವನ್ನು ಮುಗಿಸುವ ಮುನ್ನ ಮುಖ್ಯಮಂತ್ರಿಯೊಂದಿಗೆ ಸಭೆ ನಡೆಸಿ ದೆಹಲಿಗೆ ತೆರಳಲಿರುವ ತಂಡ, ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ.  

ಸುದ್ದಿ ಓದಿ