ರಾಣೆಬೆನ್ನೂರ

ಶರೀಫ್ ಮಾಕಪ್ಪನವರ ಸಂಗಡಿಗರಿಂದ ಪ್ರತಿಬಿಂಬಿಸಿದ ಸುಗಮ ಸಂಗೀತ

ಶರೀಫ್ ಮಾಕಪ್ಪನವರ ಸಂಗಡಿಗರಿಂದ ಪ್ರತಿಬಿಂಬಿಸಿದ ಸುಗಮ ಸಂಗೀತ

ರಾಣೇಬೆನ್ನೂರು:  ಇಲ್ಲಿನ ಜೆ.ಹೆಚ್‌.ಪಟೇಲ್ ನಗರದ ವಿನಾಯಕ ದೇವಸ್ಥಾನದ ಆವರಣದಲ್ಲಿ ಶ್ರೀ ವಿನಾಯಕ ದೇವಸ್ಥಾನದ ವಾರ್ಷಿಕ ಸಂಪ್ರದಾಯದ ಮಹಾ ಕಾರ್ತಿಕೋತ್ಸವ ಧಾರ್ಮಿಕ ಕಾರ್ಯಕ್ರಮವು ನಡೆಯಿತು. ಮಾತೋಶ್ರೀ ಮಹದೇವಕ್ಕ ಮಂಗಳವಾಧ್ಯ, ಸಂಗೀತ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ಕಾರ್ಯಕ್ರಮವು ನಡೆಯಿತು.  

ಶಿಗ್ಗಾವ್ ನಗರದ ಸಂಸ್ಕೃತಿ ಜನಪದ ಕಲಾ ತಂಡದ ಶರೀಫ್ ಮಾಕಪ್ಪನವರ ಮತ್ತು ಗಾನಯೋಗಿ ಕಲಾ ತಂಡದ ಕಾವ್ಯ ಎಂ ಚಿಕ್ಕಮಠ ತಂಡದವರಿಂದ ನಡೆದ ಸಾಂಸ್ಕೃತಿಕ ಗಾಯನ ಕಾರ್ಯಕ್ರಮವು ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡ ಅಪಾರ ಭಕ್ತ ಸಮೂಹದ ಗಮನ ಸೆಳೆಯಿತು.  

ಸಂಗೀತ ಕಾರ್ಯಕ್ರಮವು ಮಂಗಳವಾಧ್ಯ  ತರಬೇತಿ ಸಂಸ್ಥೆಯ ಅಧ್ಯಕ್ಷೆ ಮಹದೇವಕ್ಕ ದೇವೆಂದ್ರ​‍್ಪ ಸಾವಕ್ಕನವರ ಅವರು ಉದ್ಘಾಟಿಸಿ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರಸಭಾ ಅಧ್ಯಕ್ಷೆ ರೂಪಾ ಚಿನ್ನಕಟ್ಟಿ ಅವರು ಮಾತನಾಡಿ, ಸಂಸ್ಕೃತಿ ಸಂಸ್ಕಾರ ಬರಬೇಕಾದರೆ ಪ್ರತಿಯೊಬ್ಬರಿಗೂ ಸಾಂಸ್ಕೃತಿಕ ಕಲೆಗಳು ಬದುಕಿನಲ್ಲಿ ಅಳವಡಿಕೆಯಾಗಿರಬೇಕು. ಸಂಗೀತದಿಂದ ಸಂಸ್ಕಾರ, ಸಂಸ್ಕಾರದಿಂದ ಸಂಸ್ಕೃತಿ ದೊರೆಯುತ್ತದೆ. ಯಾವುದೇ ಜಾತ್ರೆ, ಉತ್ಸವ ಹಬ್ಬ ಹರಿದಿನಗಳು ಕಾರ್ತಿಕೋತ್ಸವಗಳಲ್ಲಿ ಇಂತಹ ಸಂಗೀತ ಸಾಹಿತ್ಯ ಸಮ್ಮಿಲನ ಕಾರ್ಯಕ್ರಮದಿಂದ ಎಲ್ಲವೂ ಸುಸುತ್ರವಾಗಿ ಸಂಭ್ರಮ ಪೂರಕವಾಗಿ ನಡೆಯಲಿವೆ. ಅದಕ್ಕಾಗಿಯೇ ವೇದ ಇತಿಹಾಸ ಕಾಲದಿಂದಲೂ ಕಲೆ ಮತ್ತು ಕಲಾವಿದರು ಇದ್ದಾರೆ. ಅವರ ಸೇವೆಯನ್ನು ಪಡೆಯುವುದರ ಮೂಲಕ ಇಂದಿನ ಯುವ ಸಮುದಾಯಕ್ಕೆ ನೈಜ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯ ನಡೆಯಬೇಕಾದ ಅಗತ್ಯವಿದೆ ಎಂದರು.  

ನಗರಸಭಾ ಸದಸ್ಯ ಪ್ರಕಾಶ ಪೂಜಾರ ಅವರು ಭಾರತೀಯ ಸಂಸ್ಕೃತಿಯ ಕಲೆ ಮತ್ತು ಕಲಾವಿದರು, ದೇಶಕ್ಕೆ ನೀಡಿದ ಕೊಡುಗೆ ಕುರಿತು ಸಾಧ್ಯಾಂತವಾಗಿ ಮಾತನಾಡಿದರು. ವೇದಿಕೆಯಲ್ಲಿ ಗಣ್ಯರಾದ ತುಳಜಪ್ಪ ಗುಜ್ಜೇರ, ಬಸಣ್ಣ ಬುಕ್ಕಶೆಟ್ಟರ್, ಕೃಷ್ಣಪ್ಪ ಕಂಬಳಿ, ಮಹೇಶ ಗುಡಗೂರು, ಬಸವರಾಜ ಸಾವಕ್ಕನವರ ಸೇರಿದಂತೆ ಮತ್ತಿತರ ಗಣ್ಯರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮೂರು ತಾಸುಗಳ ಕಾಲ ನಡೆದ ಶಾಸ್ತ್ರೀಯ ಮತ್ತು ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾದ ಶರೀಫ್ ಮಾಕಪ್ಪನವರ, ಕಾವ್ಯ ಚಿಕ್ಕಮಠ ಸಂಗಡಿಗರು ತಮ್ಮಲ್ಲಿರುವ ಅದ್ಭುತ ಗಾಯನ ಕಲೆಯನ್ನು ಪ್ರದರ್ಶಿಸಿ ಸಾರ್ವಜನಿಕರ ಚಪ್ಪಾಳೆ ಗಳಿಸುವಲ್ಲಿ ಯಶಸ್ವಿ ಕಂಡರು. 


ಸುದ್ದಿ ಓದಿ