ಸೌಂದತ್ತಿ

ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸೇವೆ ಶ್ಲಾಘನೀಯ: ರೇಣುಕಾ ಪದಕಿ

ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸೇವೆ ಶ್ಲಾಘನೀಯ: ರೇಣುಕಾ ಪದಕಿ

ಲೋಕದರ್ಶನ ವರದಿ

ಸವದತ್ತಿ 23: ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯು ನಿರಂತರವಾಗಿ 26 ವರ್ಷಗಳಿಂದ ಮಾಡಿಕೊಂಡು ಬಂದಿರುವಂತ ಸೇವೆ ಶ್ಲಾಘನೀಯವಾದುದು ಎಂದು ರೇಣುಕಾ ಪಾಟೀಲ ಪದಕಿ ಹೇಳಿದರು.

ಸ್ಥಳೀಯ ದೇಸಾಯಿ ಕೋಟೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ ನವದೆಹಲಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಹಾಗೂ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಪರಸಗಡ ನಾಟಕೋತ್ಸವ-2023ಕ್ಕೆ ಡೋಲು ಬಾರಿಸುವ ಮೂಲಕ ವಿದ್ಯುಕ್ತ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.

ಪರಸಗಡ ನಾಟಕೋತ್ಸವದ ಸಂದರ್ಭದಲ್ಲಿ ದೇಸಾಯಿ ಕೋಟೆಯ ಚಿತ್ರಣವನ್ನೇ ಬದಲಾಯಿಸಿ ಅದನ್ನು ರಂಗಭೂಮಿಯನ್ನಾಗಿಸುವ ಕಾರ್ಯ ಮೆಚ್ಚುವಂತಿದೆ ಎಂದರು.

ರತ್ನಾ ಆನಂದ ಮಾಮನಿ ಮಾತನಾಡಿ, ರಂಗ ಕಲೆಯನ್ನು ಪ್ರೋತ್ಸಾಹಿಸುವಂತ ಕಾರ್ಯ ಪ್ರತಿಯೊಬ್ಬರದಾಗಬೇಕಿದ್ದು, ಆಧುನಿಕ ತಂತ್ರಜ್ಞಾನದಲ್ಲಿ ಮಕ್ಕಳನ್ನು ಮೊಬೈಲ್ದಿಂದ ದೂರವಿಡುವಂತ ಕೆಲಸವನ್ನು ಪಾಲಕರು ಮಾಡಬೇಕೆಂದರು. ಮಕ್ಕಳಿಗೆ ರಂಗ ಕಲೆಯ ಅಭಿರುಚಿಯನ್ನು ಬೆಳೆಸುವ ಮೂಲಕ ಈ ಕಲೆಯು ನಿರಂತರವಾಗಿ ಉಳಿಯಲು ಸಹಕರಿಸಬೇಕೆಂದರು.

ದಿ.ಚಂದ್ರಶೇಖರ ಮಾಮನಿಯವರ ಸ್ಮರಣಾರ್ಥ ನೀಡಲಾಗುವ ರಂಗ ಚಂದ್ರಮಾ ಪ್ರಶಸ್ತಿಯನ್ನು ನಾಟಕಕಾರ, ಧಾರವಾಡ ಆಕಾಶವಾಣಿಯ ಉದ್ಘೋಷಕ ಡಾ.ಶಶಿಧರ ನರೇಂದ್ರರವರಿಗೆ ನೀಡಿ ಗೌರವಿಸಲಾಯಿತು.

ರಂಗ ಆರಾಧನಾ ಸಂಸ್ಥೆಗೆ ನಿರಂತರವಾಗಿ ಸಹಾಯ ಸಹಕಾರ ನೀಡುತ್ತಿದ್ದ ಅಗಲಿದ ಗಣ್ಯರಾದ ದಿ.ಆನಂದ ಮಾಮನಿ, ಶ್ರೀ ಶಿವಬಸವ ಸ್ವಾಮೀಜಿ, ಶ್ರೀ ಮನೋಹರ ಮಲ್ಹಾರ ದೀಕ್ಷೀತ, ಬಿ.ಬಿ.ಗೊರವನಕೊಳ್ಳ, ಅನಸೂಯಾ ಕಿಟದಾಳ, ಕಾಶಮ್ಮ ಪುರದಗುಡಿ, ಅಕ್ಷಯ ಕಡೇಮನಿ, ಸುರೇಶ ಜುಂಜರವಾಡ ಇವರಿಗೆ ಶೃದ್ದಾಂಜಲಿ ಸಲ್ಲಿಸಲಾಯಿತು.

ಶಶಿರೇಖಾ ಕಬ್ಬಿಣ, ಸ್ವಾತಿ ವಡಿಯರ, ಸೋಭಾ ಸುಳ್ಳದ, ವಿದ್ಯಾ ವಟ್ನಾಳ, ಸುನೀತಾ ದ್ಯಾಮನಗೌಡರ, ಪರವಿನಬಾನು ಪಟಾದ, ಗೀತಾ ಸರದಾರ, ಪ್ರಭಾವತಿ ಧನ್ಯಾಳ, ಭಾರತಿ ಕಡೇಮನಿ ಉಪಸ್ಥಿತರಿದ್ದರು.

ಝಕೀರ ನದಾಫ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಾ ವಕ್ಕುಂದ ನಿರೂಪಿಸಿದರು. ಶಿವಾನಂದ ತಾರಿಹಾಳ ವಂದಿಸಿದರು.

ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯಿಂದ ಝಕೀರ ನದಾಫ ರಚಿಸಿ ನಿರ್ದೇಶಿಸಿದ ನಮ್ದು ಹಳೇ ಕಥಿ ನಾಟಕ ಪ್ರದರ್ಶನಗೊಂಡಿತು. 

ಜ.23ರಂದು ವಾತ್ಸಲ್ಯ ವಿಚಾರ ವೇದಿಕೆ ಬನಹಟ್ಟಿಯವರಿಂದ ಬಿ.ಆರ್.ಪೊಲೀಸ್ ಪಾಟೀಲ ರಚಿಸಿದ, ಹುಲಗಪ್ಪ ಕಟ್ಟಿಮನಿ ನಿರ್ದೇಶನದ ನಾನಾನೆಂಬುದು ನಾನಲ್ಲ ನಾಟಕ ಪ್ರದರ್ಶನಗೊಳ್ಳಲಿದೆ 

ಸುದ್ದಿ ಓದಿ