ರಾಷ್ಟ್ರೀಯ

ದೇಶದಲ್ಲಿ ಕೋವಿಡ್-19 ಸೋಂಕಿನಿಂದ 85 ಲಕ್ಷ ಮಂದಿ ಗುಣಮುಖ: ಚೇತರಿಕೆ ಪ್ರಮಾಣ ಶೇ 93.68ಕ್ಕೆ ಏರಿಕೆ

ದೇಶದಲ್ಲಿ ಕೋವಿಡ್-19 ಸೋಂಕಿನಿಂದ 85 ಲಕ್ಷ ಮಂದಿ ಗುಣಮುಖ:  ಚೇತರಿಕೆ ಪ್ರಮಾಣ ಶೇ 93.68ಕ್ಕೆ ಏರಿಕೆ

ನವದೆಹಲಿ, ನವೆಂಬರ್ 23: ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತೊಂದು ಮಹತ್ತರ ಮೈಲಿಗಲ್ಲು ಸ್ಥಾಪಿಸಿದ್ದು, ಇದುವರೆಗೆ ದೇಶದಲ್ಲಿ 85 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಗುಣಮುಖರಾಗುವುದರೊಂದಿಗೆ ಚೇತರಿಕೆಯ ಪ್ರಮಾಣ ಶೇಕಡ 93.68ಕ್ಕೆ ಏರಿದೆ.

ಒಟ್ಟು 85 ಲಕ್ಷ 62 ಸಾವಿರ ಸೋಂಕಿತರು ಚೇತರಿಸಿಕೊಳ್ಳುವುದರೊಂದಿಗೆ ಚೇತರಿಕೆಯ ಪ್ರಕರಣಗಳು ಸಕ್ರಿಯ ಪ್ರಕರಣಗಳಿಗಿಂತ 20 ಪಟ್ಟು ಹೆಚ್ಚಾಗಿವೆ.

ಕಳೆದ 24 ತಾಸಿನಲ್ಲಿ 41 ಸಾವಿರ ಸೋಂಕಿತರು ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಇದೇ ಅವಧಿಯಲ್ಲಿ ದೇಶಾದ್ಯಂತ ಸುಮಾರು 44 ಸಾವಿರ ಹೊಸ ಪ್ರಕರಣಗಳು ವರದಿಯಾಗಿವೆ.

ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳಿಗಿಂತ ಶೇಕಡ 5ಕ್ಕಿಂತ ಕಡಿಮೆಯಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷದ 43 ಸಾವಿರದ 486ರಷ್ಟಿದೆ.

ದೇಶದ 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 20 ಸಾವಿರಕ್ಕೂ ಕಡಿಮೆ ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಪ್ರಮಾಣ ಶೇಕಡ 1.46ರಷ್ಟಿದೆ.

ಸುದ್ದಿ ಓದಿ