ದೇಶದಲ್ಲಿ ಕೋವಿಡ್ ಚೇತರಿಕೆ ಪ್ರಮಾಣ ಶೇ 85ಕ್ಕೆ ಏರಿಕೆ ; ಸಕ್ರಿಯ ಪ್ರಕರಣಗಳಿಗಿಂತ 48 ಲಕ್ಷಕ್ಕೂ ಹೆಚ್ಚು ಜನ ಗುಣಮುಖ
ನವದೆಹಲಿ,ಅಕ್ಟೋಬರ್ 7: ಕೋವಿಡ್ ನ ರಾಷ್ಟ್ರೀಯ ಚೇತರಿಕೆ ಪ್ರಮಾಣ ಬುಧವಾರ ಶೇ 85 ಕ್ಕೆ ತಲುಪುವದರೊಂದಿಗೆ, ಕಳೆದ ಕೆಲ ವಾರಗಳಲ್ಲಿ ನಿರಂತರವಾಗಿ ಹೆಚ್ಚಿನ ಸಂಖ್ಯೆಯ ಚೇತರಿಕೆ ಪ್ರಮಾಣದಿಂದ ಭಾರತ, ಮಹತ್ವದ ಮೈಲಿಗಲ್ಲನ್ನು ದಾಟಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 82,203 ಮಂದಿ ಸೋಂಕಿನಿಂದ ಗುಣಮುಖರಾಗಿದ್ದರೆ, ಈ ಅವಧಿಯಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 72,049 ರಷ್ಟಿದೆ. ಗುಣಮುಖರಾದವರ ಒಟ್ಟು ಸಂಖ್ಯೆ 57,44,693 ಕ್ಕೆ ತಲುಪಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
72,049 ಪ್ರಕರಣಗಳ ಪೈಕಿ ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವರದಿಯಾದ ಪ್ರಕರಣಗಳು ಶೇ 78 ರಷ್ಟಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಚೇತರಿಸಿಕೊಂಡ ಪ್ರಕರಣಗಳು, ಮತ್ತೆ ಹೊಸ ಪ್ರಕರಣಗಳನ್ನು ಮೀರಿದ್ದರಿಂದ ಗರಿಷ್ಠ ಸಂಖ್ಯೆಯ ಚೇತರಿಕೆ ಹೊಂದಿರುವ ದೇಶವಾಗಿ ಭಾರತ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.
ಹೆಚ್ಚಿನ ಪ್ರಮಾಣದ ಚೇತರಿಕೆಯಿಂದ ಸಕ್ರಿಯ ಪ್ರಕರಣಗಳು ಮತ್ತು ಗುಣಮುಖರಾದ ಪ್ರಕರಣಗಳ ನಡುವಿನ ಅಂತರ ಹೆಚ್ಚಲು ಕಾರಣವಾಗಿವೆ.
ಚೇತರಿಸಿಕೊಂಡ ಪ್ರಕರಣಗಳು 9,07,883ರಷ್ಟಿರುವ ಸಕ್ರಿಯ ಪ್ರಕರಣಗಳಿಗಿಂತ 48 ಲಕ್ಷ (48,36,810) ಮೀರಿವೆ. ಇದು ಸಕ್ರಿಯ ಪ್ರಕರಣಗಳಿಗಿಂತ 6.32 ಪಟ್ಟು ಹೆಚ್ಚಾಗಿದೆ.
ಹೊಸದಾಗಿ ಚೇತರಿಸಿಕೊಂಡ ಪ್ರಕರಣಗಳ ಪೈಕಿ ಶೇ 75 ರಷ್ಟು 10 ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಉತ್ತರ ಪ್ರದೇಶ, ಒಡಿಶಾ, ಚತ್ತೀಸ್ಗಢ, ಪಶ್ಚಿಮ ಬಂಗಾಳ ಮತ್ತು ದೆಹಲಿಯಿಂದ ವರದಿಯಾಗಿವೆ. ಸುಮಾರು 17,000 ಜನರು ಚೇತರಿಸಿಕೊಳ್ಳುವುದರೊಂದಿಗೆ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕದಲ್ಲಿ 10,000 ಕ್ಕಿಂತ ಹೆಚ್ಚು ಜನರು ಒಂದೇ ದಿನ ಗುಣಮುಖರಾಗಿದ್ದಾರೆ.
ಹೊಸ ಪ್ರಕರಣಗಳ ಪೈಕಿ ಮಹಾರಾಷ್ಟ್ರದಲ್ಲಿ 12,000ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದರೆ, ಸುಮಾರು 10,000 ಪ್ರಕರಣಗಳೊಂದಿಗೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ವರದಿಯಾದ 986 ಸಾವುಗಳ ಪೈಕಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ 83 ಸಾವುಗಳು ಸಂಭವಿಸಿವೆ.
ಮಹಾರಾಷ್ಟ್ರದಲ್ಲಿ ಅತಿಹೆಚ್ಚು 370, ನಂತರದ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 91 ಕೊವಿಡ್ ಸೋಂಕಿತರು ಈ ಅವಧಿಯಲ್ಲಿ ಸಾವನ್ನಪ್ಪಿದ್ದಾರೆ.