ಕಾರವಾರ

ಹೊರ ರಾಜ್ಯ , ಗಡಿ ಜಿಲ್ಲೆಯಿಂದ ಬರುವವರ ಕೋವಿಡ್ ನೆಗಟಿವ್ ವರದಿ ಕಡ್ಡಾಯ ;

ಹೊರ ರಾಜ್ಯ , ಗಡಿ ಜಿಲ್ಲೆಯಿಂದ ಬರುವವರ  ಕೋವಿಡ್ ನೆಗಟಿವ್ ವರದಿ ಕಡ್ಡಾಯ  ;

ಧಾರ್ಮಿಕ, ಪ್ರವಾಸಿ ಸ್ಥಳಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಯ ಪರೀಶೀಲನೆಗೆ ಜಿಲ್ಲಾಧಿಕಾರಿ ಸೂಚನೆ 

ಕಾರವಾರ 04 : ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದೇವಸ್ಥಾನ ಹಾಗೂ ಧಾರ್ಮಿಕ ಸ್ಥಳ, ಮದುವೆ ಕಾರ್ಯಕ್ರಮ, ಪ್ರವಾಸಿ ತಾಣ ಹಾಗೂ ಬೀಚ್‌ಗಳು ಸೇರಿದಂತೆ ಜನ ದಟ್ಟಣೆಯಿರುವ ಪ್ರದೇಶಗಳಲ್ಲಿ ಕೋವಿಡ್‌-19 ಮಾರ್ಗಸೂಚಿಗಳು ಪಾಲನೆಯಾಗುತ್ತಿರುವ ಬಗ್ಗೆ ತಹಶಿಲ್ದಾರರು, ಇಒ ಹಾಗೂ ಪಿಡಿಒ ಸೇರಿದಂತೆ ಪೊಲೀಸರು ಸೂಕ್ತವಾಗಿ ಪರೀಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್  ಸೂಚನೆ ನೀಡಿದ್ದಾರೆ. 

ಮಾಧ್ಯಮದವರೊಂದಿಗೆ ಬುಧವಾರ ನಡೆಸಿದ ಗೂಗಲ್ ಮೀಟ್‌ನಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕಿನ ಪರಿಣಾಮಕಾರಿ ನಿಯಂತ್ರಣಕ್ಕಾಗಿ ಕೆಲವು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ದೇವಸ್ಥಾನ ಹಾಗೂ ಇತರೆ ಧಾರ್ಮಿಕ ಸ್ಥಳಗಳಲ್ಲಿ ಸೇವಾ ಕಾರ್ಯಗಳಿಗೆ ಅವಕಾಶವಿರುವುದಿಲ್ಲ. ಇಂತಹ ಸ್ಥಳಗಳಲ್ಲಿ ಕೋವಿಡ್ ಮಾರ್ಗಸೂಚಿಯ ಪಾಲನೆಯು ಕಡ್ಡಾಯವಾಗಿದ್ದು, ಅದರ ನಿರ್ವಹಣೆ ಆಯಾ ಆಡಳಿತ ಮಂಡಳಿಗಳ ಜವಾಬ್ದಾರಿಯಾಗಿದೆ. ಜೋತೆಗೆ ದೇವಸ್ಥಾನ/ಧಾರ್ಮಿಕ ಸ್ಥಳಗಳಲ್ಲಿ ದಿನಕ್ಕೆ ಒಂದು ಬಾರಿ ಕಡ್ಡಾಯವಾಗಿ ಸ್ಯಾನಿಟೈಸೇಷನ್ ಮಾಡಬೇಕು. ಜಿಲ್ಲೆಯಲ್ಲಿ ಮದುವೆ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಕೇವಲ 50 ಜನರಿಗೆ ಮಾತ್ರ ಅವಕಾಶವಿದೆ. ಕಡ್ಡಾಯವಾಗಿ ಆಯಾ ತಹಶಿಲ್ದಾರರಿಂದ ಪೂರ್ವಾನುಮತಿ ಪಡೆಯಬೇಕು. ಮದುವೆ ಕಾರ್ಯಕ್ರಮಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಯ ಬಗ್ಗೆ ಆಯಾ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿ, ಪಿಡಿಓ ಹಾಗೂ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಮದುವೆ ಕಾರ್ಯಕ್ರಮದಲ್ಲಿ ಹಾಜರಿದ್ದವರ ವಿವರಗಳನ್ನು ಮೊಬೈಲ್ ಸಂಖ್ಯೆಯೊಂದಿಗೆ ಸಂಗ್ರಹಿಸಬೇಕು. ಒಂದುವೇಳೆ ಮದುವೆಯಲ್ಲಿ ಹಾಜರಿದ್ದವರು ಇದೇ ಜಿಲ್ಲೆಯವರಾಗಿದ್ದಲ್ಲಿ ಎರಡು ದಿನಗಳ ಒಳಗಾಗಿ ಅವರನ್ನು ಕೋವಿಡ್ ಪರೀಕ್ಷೆ ಒಳಪಡಿಸಬೇಕು ಎಂದರು. 

72 ತಾಸಿನೊಳಗಿನ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗಟಿವ್ ವರದಿ ಕಡ್ಡಾಯ : 

ಜಿಲ್ಲೆಯ ಗಡಿಭಾಗಗಳಲ್ಲಿ, ರೈಲ್ವೆ ಸ್ಟೇಷನ್‌ಗಳಲ್ಲಿ ಹೊರರಾಜ್ಯದಿಂದ ಬಂದಂತಹ ಜನರ ಮೇಲೆ ಹೆಚ್ಚು ನಿಗಾವಹಿಸುವುದರ ಜೊತೆಗೆ ರಜಿಸ್ಟರ್‌ಗಳನ್ನು ನಿರ್ವಹಿಸಬೇಕು. ವಿಷೇಶವಾಗಿ ಕೇರಳಾ ಹಾಗೂ ಮಹಾರಾಷ್ಟ್ರದಿಂದ ಬರುವಂತಹ ಜನರು ಕೋವಿಡ್ ಲಸಿಕೆ ಪಡೆದರೂ, ಪಡೆಯದಿದ್ದರೂ 72 ಗಂಟೆಯೊಳಗಿನ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಜಿಲ್ಲೆಯ ಪ್ರವಾಸಿ ತಾಣಗಳು/ಬೀಚ್‌ಗಳಲ್ಲಿ ಕೋವಿಡ್ ಮಾರ್ಗಸೂಚಿಯ ಪಾಲನೆಯ ಖಚಿತತೆಗೆ ಪ್ರತಿ ಪ್ರವಾಸಿ ತಾಣಕ್ಕೆ 2 ಜನ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ಕೋವಿಡ್ ಮಾರ್ಗಸೂಚಿಯ ಕಟ್ಟುನಿಟ್ಟಿನ ಪಾಲನೆಯ ಜವಾಬ್ದಾರಿಯನ್ನು ಆಯಾ ಪೊಲೀಸ್ ವೃತ್ತ ನೀರೀಕ್ಷಕರಿಗೆ ವಹಿಸಲಾಗಿದೆ ಎಂದರು. 

ಮಾಸ್ಕ ಕಡ್ಡಾಯ : ಜಿಲ್ಲೆಯ ಸಾರ್ವಜನಿಕರು ಕೋವಿಡ್ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರವನ್ನು ಪಾಲಿಸಬೇಕು. ಈ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು. ಒಂದುವೇಳೆ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಸರಕಾರ ಹಾಗೂ ಜಿಲ್ಲಾಡಳಿತದಿಂದ ಸೂಚಿಸಿದ ಕೋವಿಡ್ ಮಾರ್ಗಸೂಚಿಗಳನ್ನು ಮತ್ತು ಆದೇಶವನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005ರ ಭಾಗ 51 ರಿಂದ 60 ರನ್ವಯ, ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ರನ್ವಯ ಹಾಗೂ ಸಾಂಕ್ರಾಮಿಕ ರೋಗ ಕಾಯ್ದೆ 2020ರ ವಿಭಾಗ 4,5 ಮತ್ತು 10 ರಂತೆ ಕ್ರಮ ಜರುಗಿಸಲಾಗುತ್ತದೆ ಎಂದರು.  ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣ ಮೂರ್ತಿ ಹೆಚ.ಕೆ. ಉಪಸ್ಥಿತರಿದ್ದರು. 


ಸುದ್ದಿ ಓದಿ