ಕೋವಿಡ್-19; ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ಪಾರ್ಥನೆಯಲ್ಲಿ ಪಾಲ್ಗೊಂಡಿದ್ದ 24 ಜನರಿಗೆ ಸೋಂಕು
ನವದೆಹಲಿ, ಮಾ 31, ದೆಹಲಿಯ ನಿಜಾಮುದ್ದೀನ್ ಮಸೀದಿಯ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ 24 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಬೆನ್ನಲ್ಲೇ ಅದರಲ್ಲಿ ಕರ್ನಾಟಕದ ಸುಮಾರು 45 ಮಂದಿ ಭಾಗವಹಿಸಿದ್ದ ತಿಳಿದುಬಂದಿದೆ. ಇತ್ತೀಚಿಗೆ ಶಿರಾದಲ್ಲಿ ಮೃತಪಟ್ಟ ವೃದ್ಧ ವ್ಯಕ್ತಿ ಕೂಡ ಮಾ. 10ರಂದು ನಡೆದ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಆದ್ದರಿಂದ ಇತರರಲ್ಲಿ ಕೂಡ ಸೋಂಕು ಹರಡಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಅವರನ್ನು ಪತ್ತೆ ಮಾಡಿ ಪ್ರತ್ಯೇಕವಾಗಿರಿಸುವ ಕೆಲಸ ಆರಂಭಿಸಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಇವರಲ್ಲಿ 13 ಜನರನ್ನು ಈಗಾಗಲೇ 13 ಜನರನ್ನು ಗುರುತಿಸಿ ಪ್ರತ್ಯೇಕೀಕರಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲಿಗೆ ಆಸ್ಟ್ರೇಲಿಯಾ, ಸಿಂಗಾಪುರ, ದುಬೈ, ಸೌದಿ ಅರೆಬಿಯಾ, ಇಂಡೋನೇಷಿಯಾ ಸೇರಿದಂತೆ ಹಲವು ದೇಶಗಳಿಂದ ಪ್ರವಾಸಿಗರು ಆಗಮಿಸಿದ್ದರು. ಅವರನ್ನು ಕೂಡ ಗುರುತಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಲಾಕ್ ಡೌನ್ ಅವಧಿಯಲ್ಲೂ ಇಂತಹ ಪ್ರಾರ್ಥನೆಯಲ್ಲಿ ಪಾಲ್ಗೊಂಡಿರುವುದು ಒಂದು ಕ್ರಿಮಿನಲ್ ಅಪರಾಧ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಎಚ್ಚರಿಕೆ ನೀಡಿದ್ದಾರೆ. ಈ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಒಂಬತ್ತು ಮಂದಿ ಈಗಾಗಲೇ ದೇಶದ ವಿವಿಧೆಡೆಯಲ್ಲಿ ಸಾವನ್ನಪ್ಪಿದ್ದಾರೆ.