ರಾಣೆಬೆನ್ನೂರ

ಗ್ರಾಮಗಳು ಅಭಿವೃದ್ಧಿಯಾದರೆ ದೇಶವು ಪ್ರಗತಿ ಕಾಣಲು ಸಾಧ್ಯ

ಗ್ರಾಮಗಳು ಅಭಿವೃದ್ಧಿಯಾದರೆ ದೇಶವು ಪ್ರಗತಿ ಕಾಣಲು ಸಾಧ್ಯ
ತಾಲೂಕಿನ ಹರನಗಿರಿ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು-ಅಂಗನವಾಡಿ ಕಾರ್ಯಕರ್ತೆಯರಿಗೆ ಸೀರೆ ವಿತರಿಸಿ ಸನ್ಮಾನಿಸಿ ಗೌರವಿಸಲ

ರಾಣೇಬೆನ್ನೂರು 16:  ಗ್ರಾಮಗಳು ಅಭಿವೃದ್ಧಿಯಾದರೆ ಮಾತ್ರ ದೇಶವು ಪ್ರಗತಿ ಕಾಣಲು ಸಾಧ್ಯ ಎನ್ನುವ ಮಹಾತ್ಮಾ ಗಾಂಧೀಜಿಯವರ ಪರಿಕಲ್ಪನೆಯಲ್ಲಿ ಎಲ್ಲರೂ ಕೈಜೋಡಿಸಿದರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ಗ್ರಾ.ಪಂ. ಅಧ್ಯಕ್ಷ ಬಸವರಾಜ ಮೇಲ್ಮುರಿ ಹೇಳಿದರು. 

ತಾಲೂಕಿನ ಹರನಗಿರಿ ಗ್ರಾಮ ಪಂಚಾಯ್ತಿ ವತಿಯಿಂದ ಆಯೋಜಿಸಿದ್ದ 75 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಸೀರೆ ವಿತರಣೆ ಮಾಡುವ ಮೂಲಕ ಸನ್ಮಾನಿಸಿ  ಮಾತನಾಡಿದರು. 

ಇಂದಿನ ದಿನಮಾನಗಳಲ್ಲಿ ನಾವು ನಿರ್ಭಿಡೆಯಿಂದ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ನಮಗೆ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರ ತ್ಯಾಗ ಬಲಿದಾನವೇ ಕಾರಣ ಅದನ್ನು ನಾವು ಯಾವತ್ತೂ ಮರೆಯಬಾರದು. ಸೈನಿಕರನ್ನು ಪ್ರತಿನಿತ್ಯ ನಾವು ನೆನೆಯಲೇ ಬೇಕು. ಅವರು ದೇಶದ ರಕ್ಷಣೆಗೆ ಗಡಿ ಭಾಗದಲ್ಲಿ ತಮ್ಮ ಕುಟುಂಬವನ್ನೇ ತೊರೆದು ಹಗಲಿರುಳು ಶ್ರಮಿಸುತ್ತಿದ್ದಾರೆ ಅಂಥಹವರನ್ನು ಗೌರವ ಭಾವನೆಯಿಂದ ಕಾಣಬೇಕೆಂದರು. 

 ದೇಶವು ಕರೋನಾ ಮಹಾಮಾರಿಯಿಂದ ತಲ್ಲಣಗೊಂಡಿದ್ದು ಯಾರೂ ಆತಂಕಕ್ಕೆ ಒಳಗಾಗಬಾರದು. ಭಯವೇ ಕರೋನಾ, ಧೈರ್ಯವೇ ಲಸಿಕೆ ತತ್ವದಡಿ ಸರ್ಕಾರದ ನಿಯಮಗಳನ್ನು ಪಾಲಿಸಿ ಮುನ್ನಡೆದರೆ ಅಂದು ಬ್ರಿಟೀಷರನ್ನು ಹೊಡೆದೋಡಿಸಿದಂತೆ ಇಂದು ಕರೋನಾ ಮಹಾಮಾರಿಯ ನಿರ್ಮೂಲನೆಗೊಳಿಸಲು ಸಾಧ್ಯ ಅದಕ್ಕೆ ಗ್ರಾಮಸ್ಥರು ಪಕ್ಷ ಬೇಧ ಮರೆತು ಸಹಕರಿಸಬೇಕು. ಗ್ರಾಮ ಪಂಚಾಯ್ತಿ ವತಿಯಿಂದ ಮುಂದಿನ ಕೆಲವೇ ದಿನಗಳಲ್ಲಿ ಕುದರಿಹಾಳ ಗ್ರಾಮಗಳಲ್ಲಿ ನಿಗಧಿ ಪಡಿಸಿದ ಜಾಗೆಯಲ್ಲಿ ಸೂರಿಲ್ಲದ ಕಡು ಬಡವ 24 ಫಲಾನುಭವಿಗಳಿಗೆ ಶೀಘ್ರವಾಗಿ ನಿವೇಶನದ ಹಕ್ಕು ಪತ್ರ ವಿತರಿಸಲಾಗುವುದು ಎಂದು ಸ್ಪಷ್ಠಪಡಿಸಿದರು. 

ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಮುರಗೇಶಪ್ಪ ಕೋರಿಶೆಟ್ಟರ್ ಮಾತನಾಡಿ, ದೇಶ-ನಾಡು-ಗ್ರಾಮಗಳ ಬಗ್ಗೆ ಯುವಕರು ಆತ್ಮಾಭಿಮಾನ ಬೆಳೆಸಿಕೊಂಡು ಕಾರ್ಯೋನ್ಮುಖರಾಗಬೇಕಾಗಿದೆ. ಪಾಲಕರಾದವರು ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ತುಂಬಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಈ ದೇಶದ ಋಣ ತೀರಿಸಲು ಮತ್ತು ಸನ್ಮಾರ್ಗದತ್ತ ಸಾಗಲು ಪ್ರೋತ್ಸಾಹಿಸಿ ಅಂದಾಗ ಮಾತ್ರ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗಲು ಸಾಧ್ಯ ಎಂದರು. 

ಗ್ರಾ.ಪಂ ಉಪಾಧ್ಯಕ್ಷೆ ಅಕ್ಕಮ್ಮ ಹಳ್ಳಿ, ಪಿಡಿಓ ರಂಗಪ್ಪ ಕೊರಕಲಿ, ಮುಖಂಡರಾದ ನಿಂಗಣ್ಣ ನಗರದ, ಶಿವಪ್ಪ ಹಳ್ಳಿಯವರ, ಹನುಮಂತಪ್ಪ ಬಾನಿ, ಪ್ರಭುಗೌಡ ಪಾಟೀಲ, ಶೇಖಪ್ಪ ತೋಪಿನವರ, ಶ್ರೀಕಾಂತ ಪುಟ್ಟಕ್ಕನವರ, ಮಂಜುನಾಥ ರಂಗಣ್ಣನವರ, ನಿಂಗಪ್ಪ ಹಂಶಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಶೇಖಪ್ಪ ತೋಪಿನ, ಭರಮಪ್ಪ ಕುದರಿಹಾಳ, ಗಂಗಾಧರ ಐರಣಿ, ಪೂರ್ಣಿಮಾ ವಿಭೂತಿ, ನಾಗರತ್ನಾ ಹಳ್ಳಳ್ಳಿ, ರೇಣುಕಾ ಅಂತರವಳ್ಳಿ, ನಿರ್ಮಲಾ ಅಣ್ಣಿಗೇರಿ, ರೇಣುಕಾ ಪುಟ್ಟಪ್ಪನವರ, ಭರಮಪ್ಪ ಹರನಗಿರಿ, ಮಹೇಶ ಎರೇಶಿಮಿ, ಹನುಮಪ್ಪ ದೊಡ್ಡಮನಿ, ಹೊನ್ನವ್ವ ಬಾಣಿ ಸೇರಿದಂತೆ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.   

ಸುದ್ದಿ ಓದಿ