ಚಿಕ್ಕೋಡಿ

ಜಿದ್ದಾಜಿದ್ದಿನ ವಿಪ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ : ಯಾರಿಗೆ ವಿಜಯಮಾಲೆ ಕುತೂಹಲಕ್ಕೆ ಇಂದು ತೆರೆ: ಬಿಗಿ ಪೊಲೀಸ್ ಬಂದೋಬಸ್ತ

ಜಿದ್ದಾಜಿದ್ದಿನ ವಿಪ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ : ಯಾರಿಗೆ ವಿಜಯಮಾಲೆ ಕುತೂಹಲಕ್ಕೆ ಇಂದು ತೆರೆ: ಬಿಗಿ ಪೊಲೀಸ್ ಬಂದೋಬಸ್ತ

ಲೋಕದರ್ಶನ ವರದಿ 


ಚಿಕ್ಕೋಡಿ 13: ತೀವ್ರ ಜಿದ್ದಾಜಿದ್ದಿನಿಂದ ಜರುಗಿದ್ದ ಬೆಳಗಾವಿ ವಿಧಾನ ಪರಿಷತ್ ದ್ವಿಸದಸ್ಯ ಚುನಾವಣೆ ಮತಗಳ ಎಣಿಕೆ ಕಾರ್ಯ ಚಿಕ್ಕೋಡಿ ನಗರದ ಆರ್‌.ಡಿ.ಕಾಲೇಜಿನಲ್ಲಿ ಮಂಗಳವಾರ ನಡೆಯಲಿದೆ. ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ನಡುವೆ ನಡೆದ ಹಣಾಹಣಿಯಲ್ಲಿ ಯಾರ ಕೈ ಮೇಲಾಗುವುದು ಎಂಬುದು ಬೆಳಗಾವಿ ಜಿಲ್ಲೆಯ ಜನರು ಕಾತುರದಿಂದ ಕಾಯುತ್ತಿದ್ದಾರೆ. 

ಡಿ.10 ಶುಕ್ರವಾರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಆರು ಜನರು ಸ್ಪರ್ಧೇ ಮಾಡಿದ್ದರು. ಈಗಾಗಲೇ ಮತಪೆಟ್ಟಿಗೆಯಲ್ಲಿ ಭದ್ರವಾಗಿರುವ ಅಭ್ಯರ್ಥಿಗಳ ಭವಿಷ್ಯ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ನಿರ್ಧಾರವಾಗಲಿದೆ. 

ಭಾರತೀ ಜನತಾ ಪಕ್ಷದಿಂದ ಮೂರನೆ ಬಾರಿಗೆ ಸ್ಪರ್ಧೆ ಮಾಡಿರುವ ಮಹಾಂತೇಶ ಕವಟಗಿಮಠ. ಕಾಂಗ್ರೆಸ್ ಪಕ್ಷದಿಂದ ಚನ್ನರಾಜ ಹಟ್ಟಿಹೊಳಿ, ಪಕ್ಷೇತರ ಅಭ್ಯರ್ಥಿ ಲಖನ ಜಾರಕಿಹೊಳಿ, ಆಮ್ ಆದ್ಮಿ ಪಕ್ಷದಿಂದ ಶಂಕರ ಹೆಗಡೆ, ಪಕ್ಷೇತರರಾಗಿ ಕಲ್ಮೇಶ ಕಾಣಗಿ, ಶಂಕರ ಕುಡಸೋಮನ್ನವರ ಒಟ್ಟು ಆರು ಜನರ ಮಧ್ಯೆ ನಡೆದ ಸ್ಪರ್ಧೆಯಲ್ಲಿ ಮತದಾರರ ಭವಿಷ್ಯ ಬರೆದಿದ್ದು, ಯಾರು ಗೆಲ್ಲುತ್ತಾರೆ ಎಂಬುದು ಮಂಗಳವಾರ ಮಧ್ಯಹ್ನದ ಹೊತ್ತಿಗೆ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ. 

ಮತದಾನದ ಫಲಿತಾಂಶಕ್ಕೆ ಚುನಾವಣೆ ಆಯೋಗ ಸಕಲ ಸಿದ್ಧತೆ: ರಾಜ್ಯದ ಗಮನ ಸೆಳೆದಿರುವ ಬೆಳಗಾವಿ ದ್ವಿಸದಸ್ಯ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಅಚ್ಚುಕಟ್ಟಾಗಿ ನಿರ್ವಹಿಸಲು ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ರತಿ ಚುನಾವಣೆ ಫಲಿತಾಂಶ ಬೆಳಗಾವಿ ಕೇಂದ್ರದಲ್ಲಿ ನಡೆಯುತ್ತಿತ್ತು. ಚಳಿಗಾಲ ಅಧೀವೇಶನ ಹಿನ್ನಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಮೊದಲ ಭಾರಿಗೆ ಚಿಕ್ಕೋಡಿಯಲ್ಲಿ ನಡೆಯಲಿದೆ. 

ಎರಡು ಕೊಠಡಿಯಲ್ಲಿ ಮತದಾನದ ಎಣಿಕೆ ಕಾರ್ಯ ನಡೆಯಲಿದೆ. ಒಂದೊಂದು ಕೊಠಡಿಯಲ್ಲಿ ಏಳು ಟೇಬಲದಂತೆ ಎರಡು ಕೊಠಡಿಯಲ್ಲಿ ಒಟ್ಟು 14 ಟೇಬಲದಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಕಾರ್ಯದಲ್ಲಿ ಒಂದು ಟೇಬಲಗೆ ಮೂವರು ಸಿಬ್ಬಂದಿಯಂತೆ ಒಟ್ಟು 42 ಜನ ಸಿಬ್ಬಂದಿ ಜೊತೆಯಲ್ಲಿಯೇ ಹೆಚ್ಚುವರಿಯಾಗಿ ಕೆಲವು ಸಿಬ್ಬಂದಿ ನೇಮಕ ಮಾಡಿಕೊಂಡಿದ್ದು, ಒಟ್ಟು 100 ಜನ ಸಿಬ್ಬಂದಿ ಫಲಿತಾಂಶದ ಕೇಂದ್ರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ಬಿಗಿ ಪೊಲೀಸ್ ಬಂದೋಬಸ್ತ: ಚುನಾವಣೆ ಫಲಿತಾಂಶಕ್ಕೆ ಚಿಕ್ಕೋಡಿ ಪೊಲೀಸ್ ಇಲಾಖೆ ಬೀಗಿ ಬಂದೋಬಸ್ತ ಕಲ್ಪಿಸಿದೆ. 2 ಡಿವೈಎಸ್‌ಪಿ, 5 ಜನ ಸಿಪಿಐ ಹಾಗೂ 15 ಜನ ಪಿಎಸ್‌ಐ ಸೇರಿ ಒಟ್ಟು 250 ಪುರುಷ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಡಿವೈಎಸ್‌ಪಿ ಮನೋಜ ನಾಯಿಕ ತಿಳಿಸಿದರು. 

ಫಲಿತಾಂಶ ಕೇಂದ್ರದಲ್ಲಿ ಪೊಲಿಂಗ್ ಏಜಂಟರು ಪಾಸ್ ಇದ್ದವರಿಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಏಜಂಟರು ಮೊಬೈಲ್, ಗುಟಕಾ ಮತ್ತು ಮಧ್ಯಪಾನದಂತ ಮಾಧಕ ವಸ್ತುಗಳನ್ನು ಕೇಂದ್ರದ ಒಳಗೆ ತೆಗೆದುಕೊಂಡು ಹೋಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. 


ಸುದ್ದಿ ಓದಿ