ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರಂತರ ಕೆಲಸ: ಉಮೇಶ್ ಮನಗೂಳಿ
ಲೋಕದರ್ಶನ ವರದಿ
ಗೋಕಾಕ, 29: ತಾಲ್ಲೂಕಿನ ಬಡಿಗವಾಡ ಗ್ರಾಮದಲ್ಲಿ ದುಡಿಯುವ ಕೈಗಳಿಗೆ ನಿರಂತರವಾಗಿ ಕೆಲಸ ಒದಗಿಸುವುದರ ಜೊತೆಗೆ, ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ಕೂಲಿ ನೀಡಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್ ಮನಗೂಳಿ ಹೇಳಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಆಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.
ಜುಲೈ 1ರಿಂದ ಪ್ರತಿಯೊಬ್ಬ ಕಾರ್ಮಿಕರಿಗೆ ದಿನಕ್ಕೆ ?382 ಕೂಲಿ ನೀಡಲಾಗುತ್ತಿದ್ದು, ಪ್ರತಿ ಕುಟುಂಬಕ್ಕೆ 125 ಮಾನವ ದಿನಗಳ ಉದ್ಯೋಗ ಒದಗಿಸಲಾಗುತ್ತಿದೆ. ಗ್ರಾಮೀಣ ಭಾಗದ ಎಲ್ಲರೂ ಯೋಜನೆಯ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಅವರು ಹೇಳಿದರು.
ಸೆಪ್ಟೆಂಬರ್ 15ರವರೆಗೆ ಜಾಬ್ ಕಾರ್ಡ್ ಮೇಳ ಆಯೋಜಿಸಲಾಗಿದ್ದು, ಅರ್ಹರಿಗೆ ಜಾಬ್ ಕಾರ್ಡ್ ವಿತರಿಸಿ ಉದ್ಯೋಗ ಒದಗಿಸಲಾಗುತ್ತಿದೆ. ಕಾರ್ಮಿಕರಿಗೆ ನಿರಂತರವಾಗಿ ಕೆಲಸ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸೂಚಿಸಿದರು.
ಈ ವೇಳೆ ಐಸಿಎಸ್ ಸಂಯೋಜಕ ಶಂಕರ ಗುಜನಟ್ಟಿ ಮಾತನಾಡಿ, ಯೋಜನೆಯಡಿ ಕೈಗೊಳ್ಳಬಹುದಾದ ವಿವಿಧ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಕಾರ್ಯದರ್ಶಿಗಳಾದ ಚಂದ್ರು ಕರಗಾವಿ, ರಾಮಪ್ಪ ಪಿಡಿಒ, ಯಲ್ಲಾಲಿಂಗ, ಹಾರೂಗೇರಿ ರಾಜು, ಹಾರೂಗೇರಿ ವಾಣಿ, ಮಲ್ಲಾಪೂರ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.