ಅಥಣಿ

ಸತತ ಮಳೆ: ಭೂಮಿಯಲ್ಲೇ ಮೊಳಕೆಯೊಡೆದ ಶೇಂಗಾ

ಸತತ ಮಳೆ: ಭೂಮಿಯಲ್ಲೇ ಮೊಳಕೆಯೊಡೆದ ಶೇಂಗಾ

 ಸಂತೋಷ ಕುಮಾರ್ ಕಾಮತ್ 

ಮಾಂಜರಿ೧೦: ಕೆಲವು ದಿನಗಳಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಚಿಕ್ಕೋಡಿ  ತಾಲೂಕಿನ ವಿವಿಧ ಭಾಗಗಳಲ್ಲಿ ಕೊಯ್ಲಿಗೆ ಬಂದಿದ್ದ ಶೇಂಗಾ ಭೂಮಿಯಲ್ಲೇ ಮೊಳಕೆಯೊಡೆಯುತ್ತಿದೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲವಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಪ್ರತಿನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ಜಮೀನು ಸಂಪೂರ್ಣ ತೇವವಾಗಿದ್ದು, ಶೇಂಗಾ ಕೊಯ್ಲು ಮಾಡಲು ಆಗದೇ ರೈತರು ಪರದಾಡುವಂತಾಗಿದೆ. ಹಸಿ ಹೆಚ್ಚಾಗಿರುವುದರಿಂದ ಶೇಂಗಾ ಮೊಳಕೆ ಒಡೆಯಲಾರಂಭಿಸಿದೆ.

'ಗಿಡವೊಂದಕ್ಕೆ 50ರಿಂದ 60 ಕಾಯಿ ನಿರೀಕ್ಷಿಸಲಾಗಿತ್ತು. ಆದರೆ, ಈಗ ಮೊಳಕೆಯೊಡೆದ ಕಾಯಿಗಳನ್ನು ಹೊರತುಪಡಿಸಿ ಗರಿಷ್ಠ 10 ಕಾಯಿ ಕೈಗೆಟುಕುವುದೂ ಕಷ್ಟ. 15 ದಿನ ಮೊದಲೇ ಶೇಂಗಾ ಕೀಳಬೇಕಿತ್ತು. ಮಳೆಯಿಂದಾಗಿ ಅದು ಸಾಧ್ಯವಾಗಲಿಲ್ಲ' ಎಂದು ತಾಲ್ಲೂಕಿನ ಇಂಗಳಿ ಗ್ರಾಮದ ರೈತ ರಾಜಾರಾಮ ಮಾನೆ ಅಳಲು ತೋಡಿಕೊಂಡರು.

ಈಗಾಗಲೇ ಗಿಡಗಳಲ್ಲಿನ ಶೇ 25ರಷ್ಟು ಕಾಯಿಗಳು  ಮೊಳಕೆಯೊಡೆದಿವೆ. ಈ ಹಿಂದೆ 1 ಎಕರೆ ಭೂಮಿಯಲ್ಲಿ 10 ಕ್ವಿಂಟಲ್ ಶೇಂಗಾ ಸಿಗುತ್ತಿತ್ತು. ಈ ಬಾರಿ 5 ಕ್ವಿಂಟಲ್ ಸಿಗುವುದೂ ಕಷ್ಟವಾಗಿದೆ. ಮಳೆಯಿಂದಾಗಿ ಜಮೀನಿನಲ್ಲಿ ಆವರಿಸಿಕೊಂಡಿಡಿರುವ ಕೆಸರಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರು ಯಾರೂ ಮುಂದೆ ಬರುತ್ತಿಲ್ಲ.

ಬಂದರೂ ಕೆಲಸ ಮಾಡುವುದು ಸುಲಭವಲ್ಲ ಎಂಬ ಸ್ಥಿತಿ ಇದೆ. ಶೇಂಗಾದಲ್ಲಿ ಮಣ್ಣು ಜೊತೆಗೆ ಹುಲ್ಲು ಹೆಚ್ಚಾಗಿದ್ದು, ಪ್ರತಿನಿತ್ಯ ಕೊಯ್ಲ ಮಾಡಲು 6ರಿಂದ 7 ಜನ ಕಾರ್ಮಿಕರು ಬೇಕಾಗುತ್ತದೆ. ಕಿತ್ತಿರುವ ಶೇಂಗಾವನ್ನು ಮನೆಯತ್ತ ಸಾಗಿಸುವ ಬಗ್ಗೆಯೂ ಸಹ ಯೋಚಿಸುವಂತಾಗಿದೆ' ಎಂದು ಅವರು ಹೇಳುತ್ತಾರೆ.

'ನಿರಂತರ ಮಳೆಯಿಂದಾಗಿ ಜಾನುವಾರು ಸಹ ಕೊಟ್ಟಿಗೆಯಲ್ಲೇ ಉಳಿಯುವಂತಾಗಿದೆ. ಶೇಂಗಾ ಸೊಪ್ಪು ಕೊಳೆಯುತ್ತಿದ್ದು, ಮುಂದೆ ಮೇವು ಸಿಗುವುದೂ ಸಂಶಯ ಎಂಬಂತಿದೆ. ಹೆಚ್ಚಿಗೆ ಆದಾಯ ಪಡೆಯುವುದಿರಲಿ, ಖಚರ್ು ಮಾಡಿರುವಷ್ಟು ಹಣ ಬಂದರೆ ಸಾಕು ಎಂಬ ಸ್ಥಿತಿ ರೈತರದ್ದಾಗಿದೆ' ಎಂದು ಬುರುಡೇಕಟ್ಟೆಯ ರೈತ ರಾಜು ಕೊಳಿ ಹೇಳಿದ್ದಾರೆ.

ಚಿಕ್ಕೋಡಿ ತಾಲೂಕಿನ ಮಾಂಜರಿ ಯಡೂರ ಚಂದೂರ ಇಂಗಳಿ ಅಂಕಲಿ ಮುಂತಾದ ಗ್ರಾಮಗಳ ಸೇರಿದಂತೆ ಹಲವೆಡೆ ಶೇಂಗಾ ಕಾಯಿಯನ್ನೇ ಬಿಟ್ಟಿಲ್ಲ. ಹೀಗಾದರೇ ಪರಿಸ್ಥಿತಿ ಏನು ಎಂಬ ಚಿಂತೆ ರೈತರಿಗೆ ಕಾಡತೊಡಗಿದೆ. ಸರ್ಕಾರ  ಬೆಳೆ ನಷ್ಟ ಪರಿಹಾರವನ್ನು ನೀಡಿದಲ್ಲಿ ಹಿಂಗಾರು ಹಂಗಾಮಿನ ಬೆಳೆ ಬೆಳೆಯಲು ಅನುಕೂಲ ವಾಗಲಿದೆ ಎಂದು ಮಾಂಜರಿ ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಜಮೀನುಗಳಲ್ಲಿ ನೀರು ನಿಂತು, ಶೇಂಗಾ ಬೆಳೆ ಹಾನಿಗೊಳಗಾಗಿರುವ ಪ್ರದೇಶಗಳ ಸಮೀಕ್ಷೆ ನಡೆಸಿ, ಸಕರ್ಾರಕ್ಕೆ ವರದಿ ಸಲ್ಲಿಸಲಾಗಿದೆ. ರೈತರು ಆಯಾ ಗ್ರಾಮ ಲೆಕ್ಕಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು.

-ಮಂಜುನಾಥ ಜನಮಟ್ಟಿ , ಸಹಾಯಕ ಕೃಷಿ ನಿರ್ದೇಶಕ  ಚಿಕ್ಕೋಡಿ 

ಈ ಬಾರಿ ರೈತರ ಉತ್ತಮ ಇಳುವರಿಯ ಕನಸು ಕನಸಾಗಿಯೇ ಉಳಿದಿದೆ. ಮಳೆಯಿಂದಾಗಿ ಹಾನಿಯಾಗಿರುವ ಬೆಳೆಗೆ ಸರ್ಕಾರ  ಪರಿಹಾರ ನೀಡಬೇಕು.

-ರಾಜಾರಾಮ ಮಾನೆ ಇಂಗಳಿ ಗ್ರಾಮದ ರೈತ

 

ಸುದ್ದಿ ಓದಿ