ರಾಣೆಬೆನ್ನೂರ

ರೈಲ್ವೆ ಮೇಲ್ಸೇತುವೆ ನಿರ್ಮಾಣ ನಾಲ್ಕು ತಿಂಗಳಲ್ಲಿ ಪ್ರಾರಂಭದ ಭರವಸೆ: ರಾಣೇಬೆನ್ನೂರು ಬಂದ್ ವಾಪಾಸ್

ರೈಲ್ವೆ ಮೇಲ್ಸೇತುವೆ ನಿರ್ಮಾಣ  ನಾಲ್ಕು ತಿಂಗಳಲ್ಲಿ ಪ್ರಾರಂಭದ ಭರವಸೆ: ರಾಣೇಬೆನ್ನೂರು ಬಂದ್ ವಾಪಾಸ್


ಲೋಕದರ್ಶನ ವರದಿ 

ರಾಣೇಬೆನ್ನೂರು 26: ಇದೇ 28 ರಂದು ನಡೆಯಬೇಕಿದ್ದ ಎಲ್ಲರ ಗಮನ ಸೆಳೆದಿದ್ದ ರೈಲ್ವೆ  ಮೇಲ್ಸೇತುವೆ ನಿರ್ಮಾಣದ ರಾಣೇಬೆನ್ನೂರು ಬಂದ್ ಮತ್ತು ರೈಲು ರೋಖೊ ಚಳುವಳಿ ಇಂದು ಜಿಲ್ಲಾಡಳಿತ ಮತ್ತು ಈ ಭಾಗದ ಲೋಕಸಭಾ ಸದಸ್ಯರ ಇಚ್ಚಾಶಕ್ತಿಯ ಮೇರೆಗೆ ಹಾವೇರಿಯ ಅಪಾರ ಜಿಲ್ಲಾಧಿಕಾರಿ ಡಾಽಽ ಎನ್‌. ತಿಪ್ಪೇಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಮತ್ತು  ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್‌. ಹನುಮಂತರಾಯ ಹಾಗೂ ರೈಲ್ವೆ ಇಲಾಖೆಯ ಮುಖ್ಯ ಇಂಜೀನೀಯರ ಅಜೇಯ ಗುಪ್ತಾ,  ಅಡಿಶಿನಲ್ ಎಸ್‌.ಪಿ. ವಿಜಯಕುಮಾರ ಸಂತೋಷ, ಸುಪರೆಂಟ್‌ಡೆಂಟ್ ಇಂಜೀನೀಯರ್ ಮಂಜುನಾಥ, ಡಿ.ಎಸ್‌.ಪಿಗಳಾದ ಟಿ.ವಿ. ಸುರೇಶ, ಎಂ.ಎಸ್‌. ಪಾಟೀಲ, ತಹಶೀಲ್ದಾರ್ ಜಿ.ಎಸ್‌. ಶಂಕರ, ಸಿ.ಪಿ.ಐ ಶ್ರೀಶೈಲ ಚೌಗಲಾ, ಪಿ.ಎಸ್‌.ಐ ನಾಗರಾಜ ಎಚ್‌.ಎನ್‌. ಮತ್ತು ರೈಲ್ವೆ ಮೇಲ್ಸುತುವೆ ನಿರ್ಮಾಣ ಹೋರಾಟ ಸಮಿತಿಯ ನೇತೃತ್ವದಲ್ಲಿ ಇಂದು ಬೆಳಗ್ಗೆ 12-30 ಕ್ಕೆ ನಗರದ ಮಿನಿವಿಧಾನಸೌದದ ಸಭಾಂಗಣದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸುಮಾರು 2 ತಾಸುಗಳ ವರೆಗೆ ನಡೆದ ಗದ್ದಲ, ಗಲಾಟೆ ರೈಲ್ವೆ ಇಲಾಖೆಯ ಅಧಿಕಾರಿಗಳ ಮೇಲೆ ಆರೋಪಗಳ ಸುರಿಮಳೆಯಿಂದ ಪ್ರಾರಂಭವಾದ ಸಭೆ ಅಪರ ಜಿಲ್ಲಾಧಿಕಾರಿ  ಡಾಽಽ ಎನ್‌. ತಿಪ್ಪೇಸ್ವಾಮಿ ಮತ್ತು ಎಸ್‌.ಪಿ. ಎಚ್‌. ಹನುಮಂತರಾಯ ಸಲಹೆ ಮೇರೆಗೆ ಅವರು ರೇಲ್ವೆ ಇಲಾಖೆಯವರಿಗೆ ನಿರ್ದೇಶಿಸಿದ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ಇನ್ನೂ ನಾಲ್ಕು ತಿಂಗಳ ಒಳಗಾಗಿ ಈ ರೈಲ್ವೆ ಮೇಲ್ಸುತುವೆ ನಿರ್ಮಾಣ ಕಾರ್ಯ ಪ್ರಾರಂಭಿಸುತ್ತೇವೆಂದು ಅಧಿಕಾರಿಗಳು ಲಿಖಿತವಾಗಿ ಜಿಲ್ಲಾಡಳಿತಕ್ಕೆ ನೀಡಿದ ಭರವಸೆ ಹಿನ್ನಲೆಯಲ್ಲಿ ಇದೇ 28 ರಂದು ನಡೆಯಬೇಕಿದ್ದ ರೈಲು ರೋಖೊ ಮತ್ತು ರಾಣೇಬೆನ್ನೂರು ಬಂದ್ ಕರೆಯನ್ನು ಹೋರಾಟಗಾರರ ಅಭಿಪ್ರಾಯದ ಮೇರೆಗೆ ಮತ್ತು ಜಿಲ್ಲಾಡಳಿತದ ಮನವಿ ಮೇರೆಗೆ ವಾಪಾಸ್ ಪಡೆಯಲಾಯಿತು. 28 ರ ಸೋಮವಾರ ವಾಣಿಜ್ಯ ನಗರಿ ರಾಣೇಬೆನ್ನೂರು ಬಂದ್‌ನಿಂದ ರೈಲು ರೋಖೊ ಚಳುವಳಿಯಿಂದ ಏನಾಗುತ್ತದೊ, ಏನೊ ಎಂಬ ದುಗಡ ನಾಗರಿಕರಲ್ಲಿ ಆವರಿಸಿದ್ದು ಗುಡುಗು ಮಿಂಚಿನಿಂದ ಆರ್ಭಟಿಸಿ ಮಳೆ ಬಂದು ನಿಂತಮೇಲೆ ಆಗುವ ವಾತವರಣ ಇಂದು ಆದುದ್ದು ವಿಷೇಶವಾಗಿತ್ತು.   

ಈ ಸಂದರ್ಭದಲ್ಲಿ ರೇಲ್ವೆ ಮೇಲ್ಸುತುವೆಯ ಅವಶ್ಯಕತೆ ಮತ್ತು ಈಗ ಅವೈಜ್ಞಾನಿಕವಾಗಿ ರೈಲ್ವೆ ಇಲಾಖೆ ಅಧಿಕಾರಿಗಳು ನಿರ್ಮಿಸಿರುವ ರೇಲ್ವೆ ಕಳೆಸೇತುವೆಯಿಂದ ಸಾರ್ವಜನಿಕರಿಗೆ ದಿನನಿತ್ಯ ಆಗುತ್ತಿರುವ ತೊಂದರೆ ಮತ್ತು ಈ ಬೇಡಿಕೆ ಕುರಿತು ಕಳೆದು 3 ವರ್ಷಗಳಿಂದ ನಡೆಯುತ್ತಿರುವ ಚಳುವಳಿಯ ಬಗ್ಗೆ, ಮತ್ತು ಮಳೆಗಾಲದಲ್ಲಿ ಈ ರೇಲ್ವೆ ಕೆಳಸೇತುವೆಯಲ್ಲಿ ನಿಲ್ಲುತ್ತಿರುವ ಆಳೆತ್ತರದ ನೀರಿನಿಂದ 70 ಜನ ಪ್ರಯಾಣಿಕರಿದ್ದ ಬಸ್ ಮುಳಗಡೆ ಆದ ಬಗ್ಗೆ, ಮಕ್ಕೆಜೋಳ ತುಂಬಿದ ರೈತನೊಬ್ಬನ ಟ್ಯಾಕ್ಟ್ರರ್ ಪಲ್ಟಿಯಾದ ಬಗ್ಗೆ, ದಂಪತಿಗಳಿಬ್ಬರು ಚಿಕ್ಕ ಮಗುವಿನೊಂದಿಗೆ ಕೆಳ ಸೇತುವೆ ಗುಂಡಿಯಲ್ಲಿ ಬೈಕಿನಿಂದ ಜಾರಿ ಬಿದ್ದಾಗಿನ ಘಟನೆಯ ಬಗ್ಗೆ ಹೀಗೆ ಜರುಗಿದ ಹತ್ತು ಹಲವಾರು ದುರ್ಘಟನೆಗಳ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯುವಂತೆ ವಿವರಿಸಿದ ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರಗೌಡ ಎಫ್‌. ಪಾಟೀಲ, ಯಾವುದೇ ಪರಿಸ್ಥಿತಿಯಲ್ಲಿ ರಾಣೇಬೆನ್ನೂರು ಬಂದ್  ಹಿಂದಕ್ಕೆ ಪಡೆಯಲ್ಲ ಎಂದು ಪಟ್ಟುಹಿಡಿದಾಗ ಹೋರಾಟ ಸಮಿತಿ ಮತ್ತು ಬೆಂಬಲ ನೀಡಿದ ಸಂಘ ಸಂಸ್ಥೆಗಳ ಮುಖಂಡರು ಇದಕ್ಕೆ ಬೆಂಬಲ ಸೂಚಿಸಿ ಗದ್ದಲ ಎಬ್ಬಿಸಿದರು. ನಂತರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್‌. ಹನುಮಂತರಾಯ, ಅಪರ ಜಿಲಾಧಿಕಾರಿ ಡಾಽಽ ಎನ್‌. ತಿಪ್ಪೇಸ್ವಾಮಿ ವಾತವರಣವನ್ನು ಶಾಂತಗೊಳಿಸಿ ಪರಿಸ್ಥಿತಿಯ ಸೂಕ್ಷ್ಮತೆಯ ಬಗ್ಗೆ ಗಮನ ಸೆಳೆದರು. ಡಿ.ಎಸ್‌.ಪಿ. ಟಿ.ವಿ. ಸುರೇಶ ಅವರು ಮಾತನಾಡಿ ಕೊರೊನಾ ಲಾಕ್‌ಡೌನ್‌ನಿಂದ ವ್ಯಾಪಾರಸ್ಥರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಪದೆ ಪದೇ ಬಂದ್‌ನಿಂದ ಎಲ್ಲರಿಗೂ ತೊಂದರೆಯಾಗಬಾರದೆಂದು ಮನವಿ ಮಾಡಿದರು. ಹೋರಾಟ ಸಮಿತಿಯ ಕಾನೂನು ಸಲಹೆಗಾರರಾದ ಎಸ್‌.ಡಿ. ಹಿರೇಮಠರವರು ವ್ಯಾಪಾರಸ್ಥರ ಮತ್ತು ಸಣ್ಣ ಸಣ್ಣ ಉದ್ಯಮಿದಾರರ ಹಿತದೃಷ್ಟಿಯಿಂದ ಬಂದ್ ವಾಪಾಸ್ ಪಡೆಯುತ್ತೇವೆ. ಆದರೆ ರೈಲ್ವೆ ಇಲಾಖೆಯ ಮುಖ್ಯ ಇಂಜೀನಿಯರ್ ಮಂಜುನಾಥ ಮತ್ತು ಗುಪ್ತಾರವರಿಂದ ಮೇಲ್ಸೇತುವೆ ನಿರ್ಮಾಣದ ಕಾರ್ಯ ಪ್ರಾರಂಭವಾಗುವ ಕಾಲಮಿತಿಗೊಳಪಡಿಸಿ ಅಧಿಕೃತವಾಗಿ ಪತ್ರ ಬರೆಯಿಸಿಕೊಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ಆಗ ಅಧಿಕಾರಿಗಳು ರೈಲ್ವೆ ಅಧಿಕಾರಿಗಳಿಂದ ಲಿಖಿತವಾಗಿ ಬರೆದುಕೊಡುವಂತೆ ತಿಳಿಸಿ, ಯಾವುದೇ ಪರಿಸ್ಥಿತಿಯಲ್ಲಿ ಕೊಟ್ಟ ಭರವಸೆ ಹುಸಿಯಾಗಬಾರದೆಂದು ಎಚ್ಚರಿಕೆ ನೀಡಿದರು.  ಈ ಸಂದರ್ಭದಲ್ಲಿ ಪ್ರಭುಸ್ವಾಮಿ ಕರ್ಜಿಗಿಮಠ, ರುಕ್ಮಣಿಬಾಯಿ ಸಾಹುಕಾರ, ಅರೇಮಲ್ಲಾಪುರದ ಶರಣಬಸವೇಶ್ವರ ಮಠದ ಪ್ರಣವಾನಂದಸ್ವಾಮಿಗಳು, ರೈತ ಮುಖಂಡ ಈರಣ್ಣ ಹಲಗೇರಿ, ಉಮೇಶಣ್ಣಾ ಹೊನ್ನಾಳಿ, ಮಂಜುನಾಥ ಗೌಡಶಿವಣ್ಣನವರ, ನಿತ್ಯಾನಂದ ಕುಂದಾಪುರ, ಸುರೇಶ ಮಲ್ಲಾಪುರ, ದಿನೇಶ ಪಾಟೀಲ, ಹಾಲಪ್ಪ ಕುಲಕರ್ಣಿ, ತುಕ್ಕೆಪ್ಪ ಲಮಾಣಿ, ವರ್ತಕರ ಸಂಘದ ಅಧ್ಯಕ್ಷರಾದ ಸದಾನಂದ ಉಪ್ಪಿನ, ನೆಹರೂ ಮಾರುಕಟ್ಟೆಯ ಅಧ್ಯಕ್ಷರಾದ ಅಶೋಕ ಗಂಗನಗೌಡ್ರ, ಶಿವಪುತ್ರ​‍್ಪ ಮಲ್ಲಾಡದ, ಹನುಮಂತಪ್ಪ ಕಬ್ಬಾರ, ಜಿ.ಎನ್‌. ಗುರಲಿಂಗಪ್ಪಗೌಡ್ರ, ಕೊಟ್ರೇಶಪ್ಪ ಎಮ್ಮಿ, ಬಸವಾರಜ ಕೊಂಗಿಯವರ ಮುಂತಾದವರು ಹಾಜರಿದ್ದರು.  

ಬಾರಿ ಸದ್ದು ಮಾಡಿದ್ದ 28 ರ ರಾಣೇಬೆನ್ನೂರು ಬಂದ್ ಮತ್ತು ರೈಲು ರೋಖೊ ಚಳುವಳಿ ಹೋರಾಟಗಾರರ ಮತ್ತು ಬೆಂಬಲ ಸೂಚಿಸಿದ್ದ 65 ಕ್ಕೂ ಹೆಚ್ಚು ಸಂಘಟನೆಗಳ ಬಾರಿ ಒತ್ತಡದ ಫಲವಾಗಿ ರೈಲ್ವೆ ಇಲಾಖೆ ಮತ್ತು ಜಿಲ್ಲಾಡಳಿತ ಎಚ್ಚೆತ್ತು ಅಂದು ಆಗಬಹುದಾದ ಅನಾಹುತಗಳನ್ನು ತಡೆಯಲು ಹೋರಾಟಗಾರರ ಒತ್ತಡಕ್ಕೆ ಮಣಿದು ಮೇಲ್ಸೇತುವೆ ನಿರ್ಮಾಣದ ಬಗ್ಗೆ ರೈಲ್ವೆ ಇಲಾಖೆಯವರಿಗೆ ಪರಿಸ್ಥಿತಿಯ ಸೂಕ್ಷ್ಮತೆಯನ್ನು ತಿಳಿಸಿ ಯೋಜನೆಯ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದು ಸ್ಪಷ್ಟವಾಗಿತ್ತು.  

ಈ ಸಂದರ್ಭದಲ್ಲಿ ಈ ಹೋರಟಕ್ಕೆ ಬೆಂಬಲ ಸೂಚಿಸಿ ಸ್ವಾಭಿಮಾನ ಮೆರೆದಿದ್ದ 65 ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಗೆ, ಸಭೆ ನಡೆಸಲು ಮುತವರ್ಜಿ ವಹಿಸಿ ಶಾಂತ ರೀತಿಯಿಂದ ಸಭೆ ನಡೆಸಿದ ಜಿಲ್ಲಾಡಳಿತಕ್ಕೆ  ಈರಣ್ಣ ಹಲಗೇರಿ ಅಭಿನಂದನೆಗಳನ್ನು ಸಲ್ಲಿಸಿದರು. 


ಸುದ್ದಿ ಓದಿ