ಸತತ ಮಳೆ, ಬೆಳೆ ಜಲಾವೃತ: ಪರಿಹಾರಕ್ಕೆ ಪಾಟೀಲ ಆಗ್ರಹ
ಲೋಕದರ್ಶನ ವರದಿ
ರಾಣೇಬೆನ್ನೂರ 21: ಸತತವಾಗಿ ಸುರಿದ ಮಳೆಯಿಂದ ತಾಲೂಕಿನ ಕುಮದ್ವತಿ ನದಿ ತುಂಬಿ ಹರಿಯುತ್ತಿದ್ದು ಕುಮದ್ವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮತ್ತು ಬ್ಯಾರೇಜ್ ರೈತರ ಹಿತದೃಷ್ಟಿಯಿಂದ ಕಟ್ಟಲಾಗಿದ್ದು, ಹವಾಮಾನ ಇಲಾಖೆಯವರು ಭಾರಿ ಮಳೆಯ ಸೂಚನೆ ನೀಡಿದ್ದರೂ ಸಹ ಎಚ್ಚತ್ತುಕೊಳ್ಳದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಎಲ್ಲಾ ವ್ಯಾಪ್ತಿಯ ಸೇತುವೆ ಕಂ ಬ್ಯಾರೇಜುಗಳಿಗೆ ಕದ ಹಾಕಿದ್ದಾರೆ, ಪರಿಣಾಮವಾಗಿ ನದೀನೀರು ಸರಳವಾಗಿ ಸಾಗದೆ ಶೇಖರಣೆಗೊಂಡು ಪಕ್ಕದ ರೈತರ ಹೊಲಗಳಿಗೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿ ಅಪಾರ ನಷ್ಟ ಸಂಭವಿಸಿದೆ ಕೊಡಲೇ ಪರಿಹಾರಕ್ಕೆ ಪರಿಗಣಿಸಲು ಮುಂದಾಗಬೇಕು ಎಂದು ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಆಗ್ರಹಿಸಿದ್ದಾರೆ.
ಈ ಕುರಿತು ಶನಿವಾರ ಮಾಧ್ಯಮ ಪ್ರಕಟಣೆ ನೀಡಿರುವ ಅವರು ಇಲಾಖೆಯವರು ಮಾಡಿದ ಆವಾಂತರದಿಂದ ಮಲಕನ ಹಳ್ಳಿಯ ರೇವಣಗೌಡ ಪಾಟೀಲ ಹೊಲಕ್ಕೆ ನೀರು ನುಗ್ಗಿ ಹೊಲದಲ್ಲಿದ್ದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ರೈತರು ಇತ್ತೀಚಿಗಷ್ಟೇ ಸೇತುವೆಯ ಎಲ್ಲ ಬಾಗಿಲುಗಳನ್ನು ತೆಗೆಯಲು ಮನವಿ ಮಾಡಿದ್ದರೂ ಸಹ ನೀರ್ಲಕ್ಷ ಮಾಡಿದ್ದಾರೆ. ಇದರಿಂದ ನದಿ ಪಾತ್ರದಲ್ಲಿರುವ ಮುಷ್ಟೂರು, ಮಣಕೂರು, ಲಿಂಗದಹಳ್ಳಿ, ಹಿರೇಮಾಗನೂರು, ಚಿಕ್ಕಮಾಗನೂರು, ಗೂಡಿಹಾಳ, ಯಲಬಡಗಿ, ಸೇರಿದಂತೆ ಮುಂತಾದ ಗ್ರಾಮಗಳ ವ್ಯಾಪ್ತಿಯ ಜಮೀನುಗಳಿಗೆ ನೀರು ನುಗ್ಗಿ ಫಲವತ್ತಾದ ಬೆಳೆ ಹಾನಿಗೂಂಡು ಅಪಾರ ಪ್ರಮಾಣದ ನಷ್ಟ ಸಂಭವಿಸಿದ್ದು ಇದಕ್ಕೆ ನೇರವಾಗಿ ನೀರಾವರಿ ಇಲಾಖೆಯ ಅಧಿಕಾರಿಗಳು ಕಾರಣರಾಗಿದ್ದಾರೆ. ಬೆಳೆನಷ್ಟವನ್ನು ವೈಜ್ಞಾನಿಕ ರೀತಿಯಲ್ಲಿ ಇಲಾಖೆಯಿಂದಲೇ ಭರಿಸಬೇಕು ಎಂದು ಆಗ್ರಹಿಸಿದ್ದಾರೆ.