ಸದಾ ದಲಿತರ ಧ್ವನಿಯಾಗಿದೆ ಕಾಂಗ್ರೆಸ್ ಪಕ್ಷ: ಆರ್.ಧರ್ಮಸೇನಾ
ಸದಾ ದಲಿತರ ಧ್ವನಿಯಾಗಿದೆ ಕಾಂಗ್ರೆಸ್ ಪಕ್ಷ: ಆರ್.ಧರ್ಮಸೇನಾ
ಶಿಗ್ಗಾವಿ 30: ಕಾಂಗ್ರೆಸ್ ಪಕ್ಷವು ಸದಾ ದಲಿತರ ಧ್ವನಿಯಾಗಿದ್ದು. ಡಾ. ಬಿಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಗೊಂಡ ಸಂವಿಧಾನದಲ್ಲಿ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ 6 ಜಾತಿಗಳನ್ನು ಮೀಸಲಾತಿ ಮೂಲಕ ಮೇಲಕ್ಕೆತ್ತುವ ಕೆಲಸವನ್ನು ಮಾಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ವಿಪ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಎಸ್ಸಿ ಘಟಕದ ರಾಜ್ಯಾಧ್ಯಕ್ಷ ಆರ್.ಧರ್ಮಸೇನಾ ಹೇಳಿದರು.
ಪಟ್ಟಣದಲ್ಲಿ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಯಾಸಿರಖಾನ್ ಪಠಾಣ್ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ದಲಿತರ ಭವಿಷ್ಯವನ್ನು ರೂಪಿಸುವಲ್ಲಿ ಕಾಂಗ್ರೆಸ್ ಪಕ್ಷವು ನಿರಂತರವಾಗಿ ಶ್ರಮಿಸುತ್ತಿದೆ. ಕರ್ನಾಟಕದಲ್ಲಿ ದೇವರಾಜ್ ಅರಸು ಅವರ ಆಡಳಿತ ಕಾಲದಲ್ಲಿ ಹಾವನೂರು ವರದಿ ಮೂಲಕ 95 ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಿಕೊಂಡು, ಎಲ್ಲ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ದೇವರಾಜ್ ಅರಸು ನೇತೃತ್ವದ ಕಾಂಗ್ರೆಸ್ ಸರ್ಕಾರ ಶ್ರಮಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ರಾಜಕೀಯ ಪಕ್ಷಗಳು ಹಿಂದುಳಿದ ನಾಯಕರಿಗೆ ಹಲವು ಆಮಿಷಗಳನ್ನು ಒಡ್ಡುವ ಮೂಲಕ ಒಂದಾಗಿರುವ ಹಿಂದುಳಿದ ವರ್ಗವನ್ನು ಒಡೆದಾಳುತ್ತಿವೆ ಎಂದರು.
ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 32 ಸಾವಿರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರಿದ್ದು, ಹಿಂದುಳಿದ ವರ್ಗಗಳ ಬೆಂಬಲದಿಂದ ಇಲ್ಲಿ ಆಯ್ಕೆ ಆಗಿರುವ ಜನಪ್ರತಿನಿಧಿಗಳು ರಾಜ್ಯದ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಆದರೆ ಹಿಂದುಳಿದವರ ಭವಿಷ್ಯ ರೂಪಿಸಲು ಪ್ರಯತ್ನಿಸುವುದಿಲ್ಲ ಅವರನ್ನು ಕೇವಲ ವೋಟಿಗಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಆರ್ಥಿಕವಾಗಿ ಸಬಲರಾಗಬೇಕಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ, ಹೀಗಿರುವಾಗ ಸದಾ ತಮ್ಮ ಬೆಂಬಲವನ್ನು ಕಾಂಗ್ರೆಸ್ ಪಕ್ಷಕ್ಕೆ ವ್ಯಕ್ತಪಡಿಸಿ ಎದುರಾಗಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಮುಂದಾಗಬೇಕೆಂದು ಕರೆಕೊಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ, ಎಫ್ ಎಚ್ ಜಕ್ಕಪ್ಪನವರ, ಶೇಖಪ್ಪ ಮನಕಟ್ಟಿ, ದುರಗಪ್ಪ ನೀರಲಗಿ, ನಾಗರಾಜ ನಾಯ್ಕ, ಬಸವರಾಜ ಹುಬ್ಬಳ್ಳಿ, ಬಸವರಾಜ ಹೇಡಿಗೊಂಡ, ಬಿಸಿ ಪಾಟೀಲ, ಪರಮೆಶಪ್ಪ ಮಾದರ, ಮಲ್ಲೇಶಪ್ಪ ಹರಿಜನ, ಸುಧೀರ ಲಮಾಣಿ , ಲಕ್ಷ್ಮಣ ಕನವಳ್ಳಿ, ಶಿವಪ್ಪ ವಡ್ಡರ ಸರಿದಂತೆ ಇತರರಿದ್ದರು.