ಕಾಂಗ್ರೆಸ್ ಜನತೆಗೆ ಮೋಸ ಮಾಡಿ, ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದಿದೆ : ಜಗದೀಶ ಗುಡಗುಂಟಿ
ಜಮಖಂಡಿ 20: ರಾಜ್ಯದಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರ ಜನತೆಗೆ ಮೋಸ ಮಾಡಿ ಬಂದಿದೆ. ಸುಳ್ಳು ಭರವಸೆ ನೀಡುವ ಮೂಲಕ ಮತದಾರರನ್ನು ಮೋಸ ಮಾಡಿ ಇಂದು ಅಧಿಕಾರಕ್ಕೆ ಬಂದಿದ್ದು, ಹಾಸ್ಯಾಸ್ಪದ ಸಂಗತಿಯಾಗಿದೆಂದು ನೂತನ ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಸಾಕ್ಷಾತ್ಕಾರ ಭವನದಲ್ಲಿ ಸಡೆದ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕುತಂತ್ರ ನೀತಿ ಪಾಲಿಸಿ, ಮತ ಪಡೆದಿದೆ. ಮುಂದಿನ ದಿನಮಾನದಲ್ಲಿ ಜನತೆಗೆ ಕಾಂಗ್ರೆಸ್ನ ಕುತಂತ್ರ ಬುದ್ದಿ ಏನೆಂಬುದು ತಿಳಿಯುತ್ತದೆ. ಮತದಾರ ಅಲ್ಪ ಆಸೆ-ಆಮೀಷಕ್ಕೆ ಬಲಿಯಾಗಿ ಮತ ನೀಡಿದ್ದು, ಕಾಂಗ್ರೆಸ್ ನೀಡಿದ ಭರವಸೆಗಳು ಈಡೇರಿಸಲು ವಿಫಲವಾಗುತ್ತದೆ. ಹಾಗೇನಾದರೂ ಬಿಜೆಪಿ ಪಕ್ಷ ಬೀದಿಗಿಳಿದು ಹೋರಾಟ ಮಾಡಿ ಜನತೆಗೆ ನೀಡಿದ ಭರವಸೆ ನೀಡುವಂತೆ ಒತ್ತಾಯಿಸುತ್ತದೆ. ಅಲ್ಲದೇ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಗಳಿಗೆ ಫಲಾನುಭವಿಗೆ ಯಾವುದೇ ನಿರ್ಭಂಧನೆಗಳನ್ನು ಹಾಕಬಾರದೆಂದು ತಿಳಿಸಿದರು.
ಮಾದರಿ ಕ್ಷೇತ್ರ : ಜಮಖಂಡಿ ಮತಕ್ಷೇತ್ರದ ಮತದಾರ 10 ವರ್ಷಗಳ ಬಳಿಕ ಬಿಜೆಪಿಯನ್ನು ಗೆಲ್ಲುವಂತೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಕ್ಷೇತ್ರದ ಸಂಪೂರ್ಣ ಅಭಿವೃದ್ದಿಗೆ ಹೆಚ್ಚಿನ ಗಮನ ನೀಡಿ, ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಹೊಂದಲಾಗಿದೆ. ಕುಡಿವ ನೀರು, ರಸ್ತೆ, ನೀರಾವರಿ, ಶಿಕ್ಷಣ ಇತರ ಅನೇಕ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ಕೈಕೊಳ್ಳುವುದಾಗಿ ತಿಳಿಸಿದರು.
ನೂತನ ಜಿಲ್ಲೆ : ಬಹು ದಿನಗಳ ಈ ಭಾಗದ ಜನತೆಯ ಬೇಡಿಕೆಯಾಗಿದ್ದ ಜಮಖಂಡಿ ಜಿಲ್ಲಾ ಕೇಂದ್ರವನ್ನಾಗಿಸುವ ಕನಸನ್ನು ನನಸು ಮಾಡಲು ಸರ್ಕಾರದ ಮೇಲೆ ಒತ್ತಡ ತಂದು ಜಮಖಂಡಿ ಜಿಲ್ಲೆ ಹಾಗೂ ಸಾವಳಗಿ ತಾಲೂಕಾ ಕೇಂದ್ರ ಮಾಡಿಸುವಲ್ಲಿ ಸತತ ಪ್ರಯತ್ನ ಮಾಡುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವೈಫಲ್ಯ : ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಬಾರದಕ್ಕೆ ಆಡಳಿತ ವಿರೋಧಿ ಅಲೆಯೂ ಒಂದು ಕಾರಣವಾದರೆ ಕಾಂಗ್ರೆಸ್ ನೀಡಿದ ಪೊಳ್ಳು ಭರವಸೆಗೆ ಮತದಾರ ಮೋಸ ಹೋಗಿದ್ದು, ಗುಜರಾತ ಮಾದರಿ ಟಿಕೇಟ್ ಹಂಚಿಕೆಯೂ ವೈಫಲ್ಯಕ್ಕೆ ಕಾರಣವಾಗಿರಬಹುದೆಂದು ಹೇಳಿದರು.
ಕ್ಷೇತ್ರದ ಮತದಾರ ಹೆಚ್ಚಿನ ಮತ ನೀಡಿ ಗೆಲ್ಲಲು ಸಹಕಾರ ನೀಡಿದ್ದಕ್ಕೆ ಅಭಿನಂದಿಸಿದರು. ಮಾಜಿ ಶಾಸಕ ಶ್ರೀಕಾಮತ ಕುಲಕರ್ಣಿ, ವಿಪ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ಯೋಗಪ್ಪ ಸವದಿ, ಡಾ.ಉಮೇಶ ಮಹಾಬಳಶೆಟ್ಟಿ, ಸಿ.ಟಿ.ಉಪಾಧ್ಯೆ, ಕಾಡು ಮಾಳಿ, ಅಜೇಯ ಕಡಪಟ್ಟಿ, ಮಹಾದೇವ ನ್ಯಾಮಗೌಡ, ನಂದೆಪ್ಪ ದಡ್ಡಿಮನಿ, ಬಸವರಾಜ ಕಲೂತಿ, ಡಾ.ವಿಜಯಲಕ್ಷ್ಮಿ ತುಂಗಳ, ನಗರಸಭೆ ಸದಸ್ಯೆ ಪೂಜಾ ವಾಳ್ವೇಕರ, ವಿಜಯಲಕ್ಷ್ಮಿ ಉಕುಮನಾಳ, ಯಮನೂರ ಮೂಲಂಗಿ, ಶಂಕರ ಕಾಳೆ, ನಾಗಪ್ಪ ಸನದಿ, ಗಣೇಶ ಶಿರಗನ್ನವರ, ಸದಾಗೌಡ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.