ರಾಣೆಬೆನ್ನೂರ

ಸಮಗ್ರ ನಗರ ನೀರು ನಿರ್ವಹಣೆ ಜಲಸಿರಿ ಯೋಜನೆ ಸಭೆ

ಸಮಗ್ರ ನಗರ ನೀರು ನಿರ್ವಹಣೆ ಜಲಸಿರಿ ಯೋಜನೆ ಸಭೆ

ರಾಣೇಬೆನ್ನೂರು 30:  ನಾಗರೀಕತೆ ಬೆಳೆದಂತೆ ತಂತ್ರಜ್ಞಾನ ಬೆಳೆದಿದೆ. ಜನಸಂಖ್ಯೆ ಹೆಚ್ಚಾದಂತೆ ಮೂಲಭೂತ ಸೌಲಭ್ಯಗಳೂ ಸಹ ಹೆಚ್ಚಾಗಬೇಕಾಗುತ್ತದೆ. ಅದಕ್ಕನುಗುಣವಾಗಿ ನಗರದಲ್ಲಿ ಕೇಂದ್ರ ಪುರಸ್ಕ್ರುತ ಅಮೃತ್‌ಸಿಟಿ ಯೋಜನೆಯಡಿ  ಜಾರಿಗೆ ಬಂದಿದೆ. ಅದರಲ್ಲಿ ವಿಶೇಷವಾಗಿ ದಿನದ 24ತಾಸುಗಳ ಕಾಲ ಶುದ್ದ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು ನಾಗರೀಕರು ಇದರ ಸಂಪೂರ್ಣ ಪ್ರಯೋಜನ ಪಡೆಯುವುದರ ಮೂಲಕ, ಯೋಜನೆ ಯಶಸ್ವಿಯ ಜೊತೆಗೆ ಸಮಗ್ರ ನಗರ  ಅಭಿವೃದ್ದಿಗೆ ಸಹಕಾರಿಯಾಗಬೇಕು. ಎಂದು ನಗರಸಭಾ ಸದಸ್ಯ, ವರ್ತಕ ಶೇಖಪ್ಪ ಹೊಸಗೌಡ್ರ ಹೇಳಿದರು.  

ಅವರು ಶನಿವಾರ ಇಲ್ಲಿನ ಮಾರುತಿ ನಗರದ ಶ್ರೀರಾಮಮಂದಿರದಲ್ಲಿ ನೀಡ್ಸ್‌ ಸಂಸ್ಥೆ ಆಯೋಜಿಸಿದ್ದ  ಕರ್ನಾಟಕ ಸರ್ಕಾರ ನಗರ ನೀರು ನಿರ್ವಹಣೆ ಮತ್ತು ಬಂಡವಾಳ ಹೂಡಿಕೆ ಜಲಸಿರಿ ಯೋಜನೆಯ ಕುರಿತು ನಡೆದ ವಾರ್ಡ್‌ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾರುತಿ ನಗರದ ಸಮಗ್ರ ಅಭಿವೃದ್ದಿಗಾಗಿ ತಾವು ಕಳೆದ 20 ವರ್ಷಗಳಿಂದ ಪ್ರಯತ್ನಿಸಲಾಗಿದೆ. ಅದರಲ್ಲಿ ಸಾಕಷ್ಟು ಯಶಸ್ವಿಯು ಕಂಡಿದ್ದೇವೆ. ನಗರ ಬೆಳೆದಂತೆ ವಾರ್ಡ್‌ಗಳ ಸಂಖ್ಯೆಯು ಹೆಚ್ಚಳವಾಗಿದೆ. ಅಭಿವೃದ್ದಿಗಾಗಿ ಪ್ರತಿಯೊಬ್ಬ ಸದಸ್ಯರು ಮುಂದಾಗಬೇಕು. ಅದರಿಂದ ಮತ್ತಷ್ಟು ಅಭಿವೃದ್ದಿ  ಕಾಣಲು ಸಾಧ್ಯವಾಗುತ್ತದೆ ಎಂದರು. 

 ಇಂದಿನ ಬದಲಾದ ವಾತಾವರಣದಲ್ಲಿ ಎಲ್ಲರೂ ಹೊಸಹೊಸ ಯೋಜನೆಗಳನ್ನು ಸ್ವಾಗತಿಸಬೇಕು ಇದರಿಂದ ಕುಟುಂಬದಲ್ಲಿ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳು ಪಡೆಯಲು ಸಾಧ್ಯವಾಗುವುದು. ಮಹಿಳೆಯರು 24 ತಾಸುಗಳ ಕಾಲ ದೊರೆಯುವ ನೀರನ್ನು ಬೇಕಾಬಿಟ್ಟಿಯಾಗಿ ಪೋಲು ಮಾಡದೆ ಅಗತ್ಯಕ್ಕೆ ತಕ್ಕಂತೆ ಹಿತ ಮತ್ತು ಮಿತವಾಗಿ ಬಳಸಿಕೊಳ್ಳಬೇಕು. ಇದರಿಂದ ಯಾವುದೇ ಆರ್ಥಿಕ ಭಾರವನ್ನು ಬರಲಾರದು. ಯಾರೂ ಈ ಯೋಜನೆಯ ಬಗ್ಗೆ ತಪ್ಪು ಕಲ್ಪನೆ ಇಟ್ಟುಕೊಳ್ಳಬಾರದು. ಸಂಬಂಧಿಸಿದ ಅಧಿಕಾರಿಗಳು ವಾರ್ಡ್‌ಮಟ್ಟದಲ್ಲಿ ಜಾಗೃತಿ ಕುರಿತು ಸಭೆ ನಡೆಸುತ್ತಿದ್ದಾರೆ. ಪಾಲ್ಗೊಂಡು ಸಹಕಾರ ನೀಡಬೇಕು ಎಂದು ಹೊಸಗೌಡ್ರ ಕರೆ ನೀಡಿದರು.  

 ಪ್ರಾಸ್ತಾವಿಕವಾಗಿ ಮಾತನಾಡಿದ ಜಲಸಿರಿ ಯೋಜನೆಯ ಸಹಾಯಕ ಅಭಿಯಂತರ ಶೇಖರ್ ಹಾದಿಮನಿ ಅವರು ನಗರದಲ್ಲಿ ಈ ಯೋಜನೆಯ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿ ಸಾಗಿದ್ದೇವೆ. ಆದಷ್ಟು ಬೇಗನೇ ಪೂರ್ಣಗೊಳಿಸಿ ನಗರದಲ್ಲಿ ಪರಿಪೂರ್ಣವಾಗಿ ದಿನದ 24ತಾಸು ನೀರು ಸರಬರಾಜು ಆಗಲಿದೆ. ನೀರಿಗಾಗಿ ಕಾಯಬೇಕಾಗಿಲ್ಲ. ನಿತ್ಯ ಹಗಲು ರಾತ್ರಿ ಎನ್ನದೆ ದಾಸ್ತಾನು ಇರುತ್ತದೆ. ಮನೆಯಲ್ಲಿ ಸಂಗ್ರಹಿಸುವ ಅಗತ್ಯವಿಲ್ಲ. ಇದರಿಂದ ಸಮಯದ ಉಳಿತಾಯವಾಗುವುದು ಎಂದರು.  

ನಳಕ್ಕೆ ಮೀಟರ್ ಅಳವಡಿಸಲಾಗಿದೆ. ಬಳಸಿದ ನೀರಿಗೆ ಮಾತ್ರ ಶುಲ್ಕ ಆಕರಣೆಯಾಗುತ್ತದೆ. ಶುದ್ದ ಕುಡಿಯುವ ನೀರು ಇದಾಗಿದ್ದರಿಂದ ಯಾವುದೇ ರೋಗ ರುಜಿನಗಳು ಬರುವುದಿಲ್ಲ. ಆರೋಗ್ಯಯುತ ಬದುಕು ಸಾಗಿಸಬಹುದು. ಇದರಿಂದ ವಿದ್ಯುತ್ ವೆಚ್ಚವನ್ನೂ ಸಹ ಉಳಿಸಬಹುದು. ಎಂದು ಸಾಧ್ಯಾಂತವಾಗಿ ವಿವರಿಸಿದ ಹಾದಿಮನಿ ಅವರು ಯಾವುದೇ ಸಮಸ್ಯೆಗಳೂ ಬಂದರೂ ಗ್ರಾಹಕರ ಸೇವಾಕೇಂದ್ರಕ್ಕೆ ದೂರು ಸಲ್ಲಿಸಬೇಕು. (8373297359-ಮೊ. 7795333313) ತಕ್ಷಣವೇ ಸಿಬ್ಬಂದಿ ಧಾವಿಸಿ ಪರಿಹರಿಸುವರು ಎಂದರು.  

ಮುಖ್ಯ ಅಥಿತಿಯಾಗಿದ್ದ ನೀಡ್ಸ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್ . ಎಫ್‌. ಅಕ್ಕಿ ಅವರು ಮಾತನಾಡಿ ಈ ಯೋಜನೆಯ ಪರಿಪೂರ್ಣ ಜಾರಿಗಾಗಿ ಹರಿಹರ, ಬ್ಯಾಡಗಿ ಮತ್ತು ರಾಣೇಬೆನ್ನೂರು ಆಯ್ಕೆಮಾಡಿಕೊಂಡಿದ್ದು ಕಾಮಗಾರಿ ಅನುಷ್ಠಾನದ ಪೂರ್ಣತೆಯಲ್ಲಿ ಸಾಗಿದ್ದೇವೆ. ಮಹಿಳೆಯರಿಗಾಗಿ ಸ್ವಸಹಾಯ ತರಬೇತಿ ನೀಡಲಾಗುತ್ತಿದೆ. ಸಂಸ್ಥೆಯು 12 ಜಿಲ್ಲೆಯಲ್ಲಿ ಇಂತಹ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡಿದೆ. ಹಿಂದುಳಿದ ತಾಲೂಕು  ಮತ್ತು ಗ್ರಾಮೀಣ ಪ್ರದೇಶಗಳನ್ನು ಆಯ್ಕೆಮಾಡಿಕೊಂಡು ಜನರಲ್ಲಿ ಅರಿವು ಜಾಗೃತಿ ಮೂಡಿಸಲಾಗುತ್ತಿದೆ. ಶೀಘ್ರದಲ್ಲಿಯೇ ಮಹಿಳಾ ಬ್ಯಾಂಕ್ ಪ್ರಾರಂಭಿಸುವ ಮಹದಾಸೆ ಹೊಂದಿದೆ ಎಂದರು. 

 ಯೋಜನೆ ಕುರಿತು ಮಾಹಿತಿ ನೀಡಿದ ಜಲಸಿರಿ ಯೋಜನೆಯ ಸಮುದಾಯ ಅಭಿವೃದ್ದಿ ಸಹಾಯಕ  ಮಾರುತಿ ಪಾಟೀಲ್ ಅವರು  

ಸರ್ಕಾರದ ಪುರಸ್ಕಾರ ಯೋಜನೆಯಲ್ಲಿ ಬಡವರಿಗೆ 475 ಶೌಚಾಲಯಗಳು ನಿರ್ಮಿಸಲಾಗಿವೆ. ಭವಿಷ್ಯದ ಫಲಾನುಭವಿಗಳನ್ನು ಆಯ್ಕೆಮಾಡಲಾಗಿದ್ದು ಅತೀ ಶೀಘ್ರದಲ್ಲಿಯೇ ಅವರಿಗೂ ಸಹ ಹಣ ಬಿಡುಗಡೆಯಾಗಲಿದೆ. ನೀರು ಸರಬರಾಜು ಬಹುನೀರೀಕ್ಷಿತ ಯೋಜನೆ ಸಂಪೂರ್ಣ ಅನುಷ್ಠಾನಗೊಳ್ಳಲಿದೆ. ಮಹಿಳೆಯರು ಅದರ ಬಗ್ಗೆ ಸಮಗ್ರವಾಗಿ ತಿಳಿದುಕೊಂಡರೆ ಯಾವುದೇ ಶುಲ್ಕ ವೆಚ್ಚ ಭಾರವಾಗುವುದಿಲ್ಲ. ಇತಿಮಿತಿಯಲ್ಲಿ ನೀರು ಬಳಸಿ ಅದಕ್ಕೆ ತಕ್ಕಂತೆ ವೆಚ್ಚವನ್ನುಭರಿಸಬೇಕಾಗುತ್ತದೆ. ತಪ್ಪು ಕಲ್ಪನೆ ಯಾರೂ ಮಾಡಿಕೊಳ್ಳಬಾರದು. ಎಲ್ಲವೂ ಸರಳವಾಗಿದೆ ಎಂದು ವಿವರಿಸಿ ಮಾತನಾಡಿದರು.  

ಕಾರ್ಯಕ್ರಮದಲ್ಲಿ  ನೀಡ್ಸ್‌ ಸಂಸ್ಥೆಯ ಎಮ್‌. ಕರಬಸಪ್ಪ, ಹೆಚ್‌. ಉಮೇಶ್, ಸಂತೋಷ್ ವರವಜ್ಜಿ, ಮನೋಹರ  ಪತ್ರಕರ್ತ ಕೆ. ಎಸ್‌. ನಾಗರಾಜ್ ಸೇರಿದಂತೆ ಮತ್ತಿತರ ಗಣ್ಯರು ಮಾರುತಿ ನಗರದ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ