ಸೌಂದತ್ತಿ

ಶೀಘ್ರ ಕಾಂಕ್ರೀಟ್ ರಸ್ತೆಯ ಕಾಮಗಾರಿ ಪೂರ್ಣಗೊಳಿಸಿ: ಶಾಸಕ ವಿಶ್ವಾಸ ವೈದ್ಯ

ಶೀಘ್ರ ಕಾಂಕ್ರೀಟ್ ರಸ್ತೆಯ ಕಾಮಗಾರಿ ಪೂರ್ಣಗೊಳಿಸಿ: ಶಾಸಕ ವಿಶ್ವಾಸ ವೈದ್ಯ

ಸವದತ್ತಿ 26: ಪಟ್ಟಣದ ಪ್ರಮುಖ ರಸ್ತೆಯ ಅಭಿವೃದ್ದಿ ಕಾರ್ಯವು ಕುಂಠಿತಗೊಂಡಿದ್ದು, ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗುವ ಕಾರಣ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕಾಂಕ್ರೀಟ್ ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಶಾಸಕ ವಿಶ್ವಾಸ ವೈದ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 

ಸ್ಥಳೀಯ ತಾ.ಪಂ ಸಭಾಭವನದಲ್ಲಿ ಮಂಗಳವಾರದಂದು ನಡೆದ ತ್ರೈಮಾಸಿಕ ಪ್ರಗತಿ ಪರೀಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಅಭಿವೃದ್ದಿ ಕಾಮಗಾರಿಗಳಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಪಂಧನೆ ನೀಡುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕೆಂದರು. 

ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಕೆಡಿಪಿ ಸಭೆಗೆ ಬರುವಾಗ ಎಲ್ಲ ಇಲಾಖೆಯ ಅಧಿಕಾರಿಗಳು ಸಂಪೂರ್ಣ ಮಾಹಿತಿಯೊಂದಿಗೆ ಆಗಮಿಸಿ ತಮ್ಮ ವರದಿಯನ್ನು ಒಪ್ಪಿಸಬೇಕೆಂದರು. ಕಾಟಾಚಾರಕ್ಕೆ ಕೆಡಿಪಿ ಸಭೆ ನಡೆಯುವದು ಬೇಡವಾಗಿದ್ದು, ವ್ಯವಸ್ಥಿತವಾಗಿ ಸಮಗ್ರ ವಿಷಯಗಳ ಕುರಿತು ಕೆಡಿಪಿ ಸಭೆಯಲ್ಲಿ ಚರ್ಚೆಗೆ ಅವಕಾಶವಿರಲಿ ಎಂದರು.  

ಸವದತ್ತಿಯ ಪ್ರಮುಖ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಪ್ರತಿದಿನ ಧಾರವಾಡದಿಂದ ಬಂದು ಹೋಗುತ್ತಿದ್ದು, ಇದರಿಂದ ಆಯಾ ಇಲಾಖೆಯಲ್ಲಿ ಅಭಿವೃದ್ದಿ ಕೆಲಸಗಳಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಇನ್ನು ಮುಂದೆ ಸವದತ್ತಿ ತಾಲೂಕಿನಲ್ಲಿ ಕಾರ್ಯನಿರ್ವಹಿಸಲು ಆಗಮಿಸುವ ಅಧಿಕಾರಿಗಳು ಸವದತ್ತಿ ಹೆಡ್ ಕ್ವಾರ್ಟರ್‌ದಲ್ಲಿರುವದಾದರೆ ಮಾತ್ರ ಅವರಿಗೆ ಲೆಟರ್ ಕೊಡಿ ಇಲ್ಲವಾದರೆ ಅವರಿಗೆ ಲೆಟರ್ ಕೊಡಬೇಡಿ ಎಂದು ಶಾಸಕ ವಿಶ್ವಾಸ ವೈದ್ಯರವರಿಗೆ ಹೇಳಿದರು. 

ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಆರೋಗ್ಯದಲ್ಲಿ ತೊಂದರೆಯಾಗುವ ಕಾರಣ ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಓಷಧಗಳ ಕೊರತೆಯಾಗದಂತೆ ಆರೋಗ್ಯಾಧಿಕಾರಿಗಳು ನಿಗಾವಹಿಸಬೇಕೆಂದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಂದ ಸಾರ್ವಜನಿಕರಿಗೆ ಸರಿಯಾಗಿ ಕುಡಿಯುವ ನೀರನ್ನು ಪೂರೈಸುವ ಕೆಲಸವನ್ನು ಅಧಿಕಾರಿಗಳು ಜವಾಬ್ದಾರಿಯಿಂದ ನಿರ್ವಹಿಸಬೇಕಿದ್ದು, ಬಡ್ಲಿ, ಕಾತ್ರಾಳ ಮತ್ತು ಸಿಂಗಾರಗೊಪ್ಪ ಗ್ರಾಮಗಳಲ್ಲಿ  ನೀರು ಸರಬರಾಜು ಮಾಡುವಲ್ಲಿ ವ್ಯತ್ಯಾಸ ಕಂಡು ಬರುತ್ತಿರುವದನ್ನು ಅಧಿಕಾರಿಗಳು ಗಮನಿಸಿ ಸಮಸ್ಯೆ ಪರಿಹರಿಸಬೇಕೆಂದರು. 

ಎಲ್ಲೆಡೆ ಮಳೆ ಸುರಿಯುತ್ತಿರುವದರಿಂದ ಶಿಥಿಲಗೊಂಡ ಶಾಲಾ ಕೊಠಡಿಗಳಲ್ಲಿ ಮಕ್ಕಳು ಸೇರದಂತೆ ಆಯಾ ಶಾಲೆಯ ಪ್ರಧಾನ ಗುರುಗಳಿಗೆ ಲಿಖಿತವಾಗಿ ನೋಟೀಸ್ ಹೊರಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು. ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳು ಬಂದಿದ್ದು, ಆದಷ್ಟು ಬೇಗನೆ ಅವುಗಳನ್ನು ಮಕ್ಕಳಿಗೆ ವಿತರಿಸುವಂತ ಕಾರ್ಯಗಳಾಗಬೇಕು. ಅದರಂತೆ ಶಾಲಾ ಮಕ್ಕಳಿಗೆ ಬೂಟ ಖರೀದಿಗೆ ಅನುದಾನ ಬಂದಿದ್ದು, ಸರಕಾರದ ನಿಯಮಾವಳಿಯ ಪ್ರಕಾರ ಗುಣಮಟ್ಟದ ಬೂಟಗಳನ್ನು ಖರೀದಿಸುವಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದರು. ಪ್ರತಿಯೊಂದು ಶಾಲೆಗಳನ್ನು ವೀಕ್ಷಣೆ ಮಾಡಿ ಶಾಲೆಯಲ್ಲಿರುವ ಸಮಸ್ಯೆಗಳನ್ನು ಪರೀಶೀಲಿಸಿ ಕುಡಿಯುವ ನೀರು ಮತ್ತು ಶೌಚಾಲಯಗಳ ಸೌಲಭ್ಯತೆಗಳನ್ನು ಖಡ್ಡಾಯವಾಗಿ ನೀಡಬೇಕೆಂದರು. 

ತಾಲೂಕಿನ ವ್ಯಾಪ್ತಿಯ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ವರದಿಯನ್ನು ಸಭೆಯಲ್ಲಿ ಮಂಡಿಸಿದರು. 

ತಹಸೀಲ್ದಾರ ಜೆ.ಬಿ.ಜಕ್ಕನಗೌಡರ, ಯರಗಟ್ಟಿ ತಹಸೀಲ್ದಾರ ಚಂದ್ರಶೇಖರ ನಾಯಕ, ತಾ.ಪಂ ಆಡಳಿತಾಧಿಕಾರಿ ಸತೀಶಕುಮಾರ ಎಮ್, ತಾ.ಪಂ ಇಓ ಯಶವಂತಕುಮಾರ ಉಪಸ್ಥಿತರಿದ್ದರು. 


ಸುದ್ದಿ ಓದಿ