ಸಮಿತಿ ಶಾಲಾ-ಕಾಲೇಜು ಮಾರ್ಗವಾಗಿ ವಂಟಮುರಿಗೆ ಹೊಸ ಬಸ್ ಸಂಚಾರ ಆರಂಭ
ಲೋಕದರ್ಶನ ವರದಿ
ಕಾಗವಾಡ 1: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ಬೆಳಗಾವಿ ಸಿಬಿಟಿಯಿಂದ ಸಮಿತಿ ಶಾಲಾ-ಕಾಲೇಜು ಮಾರ್ಗವಾಗಿ ವಂಟಮುರಿಗೆ ಹೊಸ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು. ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ (ಆರಿಫ್) ಸೇಠ್ ಹಾಗೂ ವಾಕರಸಾ ಸಂಸ್ಥೆಯ ಉಪಾಧ್ಯಕ್ಷ ಸುನೀಲ ಹಣಮಣ್ಣವರ ಬಸ್ಗೆ ಪೂಜೆ ಸಲ್ಲಿಸಿ, ನೂತನ ಮಾರ್ಗದ ಸಂಚಾರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ವಿನೋದ ಪಾಟೀಲ ಮಾತನಾಡಿ, ಹೊಸ ಬಸ್ ಸೇವೆಗೆ ಅನುಮೋದನೆ ನೀಡಿದ ಸಾರಿಗೆ ಸಂಸ್ಥೆ ಹಾಗೂ ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಮಾರ್ಗದಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಈ ಪ್ರದೇಶಕ್ಕೆ ನೂತನ ಬಸ್ ನಿಲ್ದಾಣ ನಿರ್ಮಿಸುವಂತೆ ಶಾಸಕರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಮಹಾವೀರ ಹರದಿ, ಎ.ಬಿ. ಪಾಟೀಲ, ಶರದ್ ಬಾಲಿಕಾಯಿ, ಪ್ರಾಂಶುಪಾಲ ರವಿ ದಂಡಗಿ, ಉಪ ಪ್ರಾಂಶುಪಾಲ ಡಾ. ಭರತ ಅಲಸಂದಿ, ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ವಿ.ಬಿ. ತುರಮರಿ, ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ರೇಖಾ ಕಲಬುರ್ಗಿ, ಬಿಸಿಎ ವಿಭಾಗದ ಅನೀಲ ಹಾಲಬಾವಿ, ಬಿಬಿಎ ವಿಭಾಗದ ಪ್ರಾಂಶುಪಾಲ ಭಾಗ್ಯಶ್ರೀ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.