ಗ್ರಾಮದೇವಿ ಜಾತ್ರಾಮಹೋತ್ಸವ ಸ್ಥಳಕ್ಕೆ ಸಮಿತಿ ಅಧ್ಯಕ್ಷ ಕುನ್ನೂರ ಭೇಟಿ
ಶಿಗ್ಗಾವಿ 20: ಫೆ.20 ರಿಂದ ಮಾ. 1ರವರೆಗೆ ವಿಜೃಂಭಣೆಯಿಂದ ನಡೆಯಲಿರುವ ಶ್ರೀ ಗ್ರಾಮದೇವಿ ಜಾತ್ರಾಮಹೋತ್ಸವದ ಸಮಾರಂಭಕ್ಕೆ ಸಿದ್ಧಗೊಳ್ಳುತ್ತಿರುವ ಮುಖ್ಯ ವೇದಿಕೆ ಸ್ಥಳಕ್ಕೆ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಮಂಜುನಾಥ ಕುನ್ನೂರ ಭೇಟಿ ನೀಡಿ ಪರೀಶೀಲಿಸಿದರು.
ಪಟ್ಟಣದ ಹುಲಗೂರ ರಸ್ತೆಯಲ್ಲಿರುವ ಪಾದಗಟ್ಟೆಯಲ್ಲಿನ ಶ್ರೀ ದೇವಿಯ ಮುಂಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಲಂಕಾರಿಕ ಮಂಟಪ ಮುಖ್ಯ ವೇದಿಕೆ, ಗಣ್ಯರ ವಾಹನ ನಿಲುಗಡೆ ಹಾಗೂ ಸಂಚಾರ ವ್ಯವಸ್ಥೆ, ಪ್ರಸಾದ ವಿತರಣೆ ಸ್ಥಳ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸಮಾರಂಭ ಮಾರ್ಗದ ಪ್ರಮುಖ ಬೀದಿಗಳಲ್ಲಿ ದೀಪಾಲಂಕಾರ ವ್ಯವಸ್ಥೆ ಸೇರಿದಂತೆ ವಿವಿಧ ಸಿದ್ಧತೆಗಳನ್ನು ವೀಕ್ಷಿಸಿ ವ್ಯವಸ್ಥಿತವಾಗಿ ಕೈಗೊಳ್ಳುವಂತೆ ಸೂಕ್ತ ನಿರ್ದೇಶನ ನೀಡಿದರು.
ಬಳಿಕ ಮಾತನಾಡಿದ ಅವರು, ಶ್ರೀ ಗಾಮದೇವಿ ಜಾತ್ರಾಮಹೋತ್ಸವಕ್ಕೆ ಸಂತರ ನಾಡು ಶಿಗ್ಗಾಂವ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಸಕಲ ಸಿದ್ಧತೆಗಳು ಬರದಿಂದ ಸಾಗಿವೆ. ಜಾತ್ರೆಗೆ ಆಗಮಿಸುವ ಭಕ್ತ ಸಮೂಹಕ್ಕೆ ಅನುಕೂಲವಾಗುವಂತೆ ಒಂಬತ್ತು ದಿನಗಳವರೆಗೆ ಅನ್ನ ಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗಿದೆ ಅಲ್ಲದೇ ಪ್ರತಿ ಐದು ವರ್ಷಕೊಮ್ಮೆ ನಗರದಲ್ಲಿ ನಡೆಯುವ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸುವ ಮೂಲಕ ಶ್ರೀದೇವಿ ಕೃಪೆಗೆ ಪಾತ್ರರಾಬೇಕು ಎಂದರು.
ಈ ಸಂದರ್ಭದಲ್ಲಿ ಸಿದ್ಧಾರ್ಥಗೌಡ ಪಾಟೀಲ, ಶಿವಪ್ರಸಾದ ಸುರಗೀಮಠ, ಫಕ್ಕೀರಜ್ಜ ಯಲಿಗಾರ, ಜಯಣ್ಣ ಹೆಸರೂರ, ಟಿ.ವಿ.ಸುರಗಿಮಠ, ಭರಮಜ್ಜ ನವಲಗುಂದ, ಕೊಟ್ರ್ಪ ನಡೂರ, ಚಂದ್ರು ಜವಳಿ, ಶಿವಪುತ್ರ್ಪ ಜಕ್ಕಣ್ಣವರ, ರವಿ ಮಹಾಂತಶೆಟ್ಟರ ಹಾಗೂ ಮೊದಲಾದವರು ಇದ್ದರು.