ಬೈಲಹೊಂಗಲ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಸಂಪಗಾಂವ್, ಬೈಲವಾಡ ಗ್ರಾಮಗಳಿಗೆ ಆಯೋಗ ಭೇಟಿ: ಸಮೀಕ್ಷೆ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ  ಸಂಪಗಾಂವ್, ಬೈಲವಾಡ ಗ್ರಾಮಗಳಿಗೆ ಆಯೋಗ ಭೇಟಿ: ಸಮೀಕ್ಷೆ

ಲೋಕದರ್ಶನ ವರದಿ 

ಬೈಲಹೊಂಗಲ 06: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಪಂಚಮಸಾಲಿ ಕೂಡಲಸಂಗಮದ ಪ್ರಥಮ ಜಗದ್ಗುರುಗಳಾದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಕಳೆದ ವರ್ಷ ಪಾದಯಾತ್ರೆಯ ಮೂಲಕ ಹತ್ತು ಲಕ್ಷಕ್ಕೂ ಹೆಚ್ಚು ಜನ ಬೆಂಗಳೂರು ಅರಮನೆ ಮೈದಾನದಲ್ಲಿ ಸೇರುವ ಮೂಲಕ ಸರಕಾರದ ಗಮನ ಸೆಳೆದು ಸಮಾಜಕ್ಕೆ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದ ನಂತರ  ಸರ್ಕಾರ ಪಂಚಮಸಾಲಿಗಳು ವಾಸ್ತವಿಕ ಸ್ಥಿತಿಯನ್ನು ಅರಿತುಕೊಳ್ಳಲು ಹಿಂದುಳಿದ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗಡೆಯವರ ಅಧ್ಯಕ್ಷತೆಯಲ್ಲಿ ಸಮೀಕ್ಷೆ ನಡೆಸಲು ರಚಿಸಿದ ಆಯೋಗದ ಸದಸ್ಯರಾದ ಬಿ.ಎಸ್‌.ರಾಜಶೇಖರ, ಎಚ್‌.ಎಸ್‌.ಕಲ್ಯಾಣಕುಮಾರ್, ಅರುಣಕುಮಾರ, ಆಯೋಗ ಬುಧವಾರ ಸಂಪಗಾಂವ್ ಮತ್ತು ಬೈಲವಾಡ ಗ್ರಾಮಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದರು. 

  ತಾಲೂಕಿಗೆ ಆಗಮಿಸಿದ ಹಿಂದುಳಿದ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮಗಳಲ್ಲಿ ಸಂಚರಿಸಿ ಅನೇಕ ಮನೆಗಳಿಗೆ ಭೇಟಿ ನೀಡಿ ಪ್ರತ್ಯೇಕವಾಗಿ ಮಾಹಿತಿ ಪಡೆದರು. ಅಲ್ಲದೆ ಪಂಚಮಸಾಲಿ ಸಮಾಜದ ಸಂಸ್ಕೃತಿ, ಆಚಾರ ವಿಚಾರಗಳು ಪಂಚಮಸಾಲಿ ಸಮಾಜದ ಅನುಸರಿಸುವ ಧಾರ್ಮಿಕ ವಿಧಿವಿಧಾನಗಳನ್ನು ಹಾಗೂ ಶೈಕ್ಷಣಿಕ ಆರ್ಥಿಕ ಸಮೀಕ್ಷೆಯನ್ನು ನಡೆಸಿ ಪ್ರತಿಯೊಂದು ಅಂಶಗಳನ್ನು ದಾಖಲಿಸಿಕೊಳ್ಳುವುದರ ಮೂಲಕ ಪಂಚಮಸಾಲಿ ಸಮಾಜದ ವಾಸ್ತವಿಕತೆ ತಿಳಿದುಕೊಂಡರು. ಮೀಸಲಾತಿ ನೀಡುವ ವಿಚಾರದಲ್ಲಿ ಆಯೋಗದ ವಿಚಾರಣೆ ಬಹಳಷ್ಟು ಮಹತ್ವ ಪಡೆದಿದೆ. 

 ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಮಾಧ್ಯಮದವರ ಜೊತೆ ಮಾತನಾಡಿ, ಸರಕಾರದ ಮುಂದೆ ಪಂಚಮಸಾಲಿ ಸಮಾಜ ಶೈಕ್ಷಣಿಕ ಮತ್ತು ಆರ್ಥಿಕ ಮೀಸಲಾತಿ ನೀಡಲು ಮನವಿ ಮಾಡಿದರೆ ಅನೇಕ ಹಿಂದುಳಿದ ವರ್ಗದ ಸಮಾಜವು ಮೀಸಲಾತಿ ಹೆಚ್ಚಿಸುವ ಕುರಿತು ಹಾಗೂ ಮೀಸಲಾತಿ ವರ್ಗವನ್ನು ಬದಲಾಯಿಸಲು ಹಾಗೂ ಮೀಸಲಾತಿಯಿಂದ ಹೊರಗೆ ಉಳಿದಿರುವ ಸಣ್ಣ ಸಣ್ಣ ಸಮಾಜಗಳು ಮೀಸಲಾತಿ ವ್ಯಾಪ್ತಿಗೆ ಒಳಪಡಿಸುವಂತೆ ಮನವಿಗಳು ಬಂದಿದ್ದು ಆ ಮನವಿಗಳ ಪ್ರಕಾರ ಸಮಾಜದ ವಾಸ್ತವಿಕ ಸ್ಥಿತಿಯನ್ನು ಅಭ್ಯಾಸ ಮಾಡಿಕೊಂಡು ಸರಕಾರಕ್ಕೆ ವರದಿ ಸಲ್ಲಿಸುವ ಗುರುತರ ಜವಾಬ್ದಾರಿ ಹಿಂದುಳಿದ ಆಯೋಗಕ್ಕೆ ಇರುವದರಿಂದ ಪ್ರತಿಯೊಂದು ಗ್ರಾಮಗಳಲ್ಲಿ ಅನೇಕ ವರ್ಗಗಳ ಸ್ಥಿತಿಗತಿಗಳನ್ನು ತೆಗೆದುಕೊಂಡು ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು. ಪಂಚಮಸಾಲಿ ಸಮಾಜದ ಮುಖಂಡರಾದ ಶ್ರೀಶೈಲ್ ಬೊಳನ್ನವರ್, ಎಮ್‌.ವಾಯ್‌. ಸೋಮಣ್ಣನವರ, ರೋಹಿಣಿ ಪಾಟೀಲ್, ಎಪ್‌.ಎಸ್‌. ಸಿದ್ದನಗೌಡರ, ಮಹೇಶ್ ಹರಕುಣಿ, ವೀರೇಶ್ ಹಲಕ್ಕಿ, ಸಂಜಯ್ ಗೀರೆಪ್ಪಗೌಡರ, ರಮೇಶ್ ಯಲ್ಲಪ್ಪಗೌಡ್ರು, ಸುನಿಲ್ ಮರಕುಂಬಿ, ಮಂಜು ಉಳವಿ, ರಾಜೇಶ್ವರಿ ಬೆಳಗಾವಿ, ಸುಭಾಷ್ ತುರುಮರಿ ಹಾಗೂ ಅನೇಕ ಸಮಾಜದ ಮುಖಂಡರು ಪಂಚಮಸಾಲಿಗಳು ವಾಸ್ತವಿಕ ಸ್ಥಿತಿಯನ್ನು ಹಾಗೂ ಮೀಸಲಾತಿಗೆ ಒಳಪಡಿಸಲು ಪೂರಕವಾದ ಸಂಗತಿಗಳನ್ನು ಆಯೋಗದ ಮುಂದೆ ಹೇಳಿದರು. ಜಿಲ್ಲಾ ಹಿಂದುಳಿದ ಕಲ್ಯಾಣ ಇಲಾಖೆಯ ಅಧಿಕಾರಿ ಗೌರಿಶಂಕರ ಕಡೆಸುರ, ಶಾಂತಾ ಮರಿಗೌಡರ ಇದ್ದರು. 


ಸುದ್ದಿ ಓದಿ