ವಿಜಯಪುರ

ಮುದ್ದೇಬಿಹಾಳದಲ್ಲಿ ಆಗಸ್ಟ್‌ 8ರಿಂದ ಶ್ರೀ ವಿದ್ಯಾ ಕಣ್ವವಿರಾಜ ತೀರ್ಥರ 7ನೇ ಚಾತುರ್ಮಾಸ್ಯ ವ್ರತಾರಂಭ

ಮುದ್ದೇಬಿಹಾಳದಲ್ಲಿ ಆಗಸ್ಟ್‌ 8ರಿಂದ ಶ್ರೀ ವಿದ್ಯಾ ಕಣ್ವವಿರಾಜ ತೀರ್ಥರ 7ನೇ ಚಾತುರ್ಮಾಸ್ಯ ವ್ರತಾರಂಭ

ವಿಜಯಪುರ, ಆ.7: ಹುನಸಿಹೊಳಿಯ ಕಣ್ವ ಮಠದ ಪೀಠಾಧಿಪತಿ ಶ್ರೀ ವಿದ್ಯಾ ಕಣ್ವವಿರಾಜ ತೀರ್ಥ ಶ್ರೀಪಾದರು ಮುದ್ದೇಬಿಹಾಳದ ಮಾರುತಿ ನಗರದ ಶ್ರೀ ಶಿವ ಚಿದಂಬರ ದೇವಸ್ಥಾನದಲ್ಲಿ ಆಗಸ್ಟ್‌ 8ರಿಂದ ಸೆಪ್ಟೆಂಬರ್ 26ರವರೆಗೆ 7ನೇ ಚಾತುರ್ಮಾಸ್ಯ ವ್ರತ ಆಚರಿಸಲಿದ್ದಾರೆ ಎಂದು ಕಣ್ವ ಮಠದ ಕಾರ್ಯಾಧ್ಯಕ್ಷ ರಾಗವೇಂದ್ರ ಆಲಗೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಮುದ್ದೇಬಿಹಾಳ ಬ್ರಾಹ್ಮಣ ಸಮುದಾಯದ ಆಹ್ವಾನದ ಮೇರೆಗೆ ಈ ಬಾರಿ ಚಾತುರ್ಮಾಸ್ಯ ವ್ರತ ಮುದ್ದೇಬಿಹಾಳದಲ್ಲಿ ನಡೆಯಲಿದೆ. ಆಗಸ್ಟ್‌ 8ರಂದು ಬೆಳಿಗ್ಗೆ ಯಲಗೂರದ ಕೃಷ್ಣಾ ನದೀತೀರದಲ್ಲಿ ದಂಡೋದಕ ಸ್ನಾನ ನೆರವೇರಿದ ಬಳಿಕ ಸಂಕಲ್ಪಪೂರ್ವಕವಾಗಿ ಚಾತುರ್ಮಾಸ್ಯ ದೀಕ್ಷೆ ಆರಂಭವಾಗಲಿದೆ.  

ಚಾತುರ್ಮಾಸ್ಯ ಅವಧಿಯಲ್ಲಿ ಪ್ರತಿದಿನ ಶ್ರೀಪಾದ ಪೂಜೆ, ಉಪನ್ಯಾಸ, ಭಜನೆ, ಶ್ರೀ ವಿಶ್ವಲಕೃಷ್ಣ ಸಂಸ್ಥಾನ ಪೂಜೆ, ಗುರುಗಳಿಗೆ ಹಸ್ತೋದಕ, ಭಿಕ್ಷೆ, ತೊಟ್ಟಿಲು ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.  

ಈ ಅವಧಿಯಲ್ಲಿ ನಿತ್ಯೋಪಕ್ರಮಗಳು, ಶ್ರೀ ವಿದ್ಯಾಭೂಷಣ ತೀರ್ಥ ಶ್ರೀಪಾದರ ಮಧ್ಯಾರಾಧನೆ, ಶ್ರೀಕೃಷ್ಣ ಜನ್ಮಾಷ್ಟಮಿ, ಶ್ರೀ ವಿದ್ಯಾಸಂಪೂರ್ಣ ತೀರ್ಥ ಹಾಗೂ ಶ್ರೀ ವಿದ್ಯಾವಿರಾಜ ತೀರ್ಥ ಶ್ರೀಪಾದರ ಮಧ್ಯಾರಾಧನೆ, ಶ್ರೀ ಅನಂತ ಪದ್ಮನಾಭ ವ್ರತ ಸೇರಿದಂತೆ ಹಲವು ವಿಶೇಷ ಧಾರ್ಮಿಕ ಆಚರಣೆಗಳು ನಡೆಯಲಿವೆ.  

ಸೆಪ್ಟೆಂಬರ್ 27ರಂದು ಸೀಮೋಲ್ಲಂಘನ ಕಾರ್ಯಕ್ರಮದೊಂದಿಗೆ ಚಾತುರ್ಮಾಸ್ಯ ವ್ರತದ ಸಮಾರೋಪ ನೆರವೇರಲಿದೆ.  ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು-ಮನ-ಧನಗಳಿಂದ ಸೇವೆ ಸಲ್ಲಿಸಿ ಶ್ರೀಗಳ ಅನುಗ್ರಹಕ್ಕೆ ಪಾತ್ರರಾಗುವಂತೆ ಆಯೋಜಕರು ಮನವಿ ಮಾಡಿದ್ದಾರೆ.  

ಚಾತುರ್ಮಾಸ್ಯ ವ್ರತ ಸಮಿತಿಯಲ್ಲಿ ಶಾಸಕ ಸಿ.ಎಸ್‌. ನಾಡಗೌಡ ಗೌರವಾಧ್ಯಕ್ಷರಾಗಿದ್ದು, ಡಾ. ಜೋಶಿ, ಶಂಕರಭಟ್ಟ ಜೋತಿ, ವೆಂಕಟೇಶಾಚಾರ್ಯ, ಎಸ್‌.ಆರ್‌. ಕುಲಕರ್ಣಿ, ವಿನಾಯಕರಾವ್ ಬಿ. ಶುಲಕರ್ಣಿ, ವಾಸುದೇವ ಶಾಸ್ತ್ರಿ, ಸತೀಶಚಂದ್ರ ಜಿ. ಕುಲಕರ್ಣಿ, ಶ್ರೀನಿವಾಸಾಚಾರ್ಯ, ಗುರುರಾಜ ಆಚಾರ್ಯ, ಬಾಪುರಾವ್ ದೇಶಾಯಿ ಸೇರಿದಂತೆ ಹಲವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ರಾಗವೇಂದ್ರ ಆಲಗೂರ ತಿಳಿಸಿದ್ದಾರೆ. 


ಸುದ್ದಿ ಓದಿ