ಕಾಮನ ಮೂರ್ತಿ ಯನ್ನು ಪ್ರತಿಷ್ಠಾಪಿಸುವ ಮೂಲಕ ಹೋಳಿ ಹಬ್ಬ ಆಚರಣೆಗೆ ಚಾಲನೆ
ಲೋಕದರ್ಶನ ವರದಿ
ವೀರೇಶ ಈ ಸ್ಟಾಂಪಿನ
ಯಲಬುಗರ್ಗಾ 05: ಪಟ್ಟಣದ ವಿವಿಧೆಡೆ ಕಾಮನ ಮೂರ್ತಿ ಯನ್ನು ಪ್ರತಿಷ್ಠಾಪಿಸುವ ಮೂಲಕ ಹೋಳಿ ಹಬ್ಬ ಆಚರಣೆಗೆ ಚಾಲನೆ ದೊರೆತಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುವ ಹೋಳಿ ಹಬ್ಬ ನೋಡಲು ವಿವಿಧ ಗ್ರಾಮಗಳ ಜನರು ಇಲ್ಲಿಗೆ ತಂಡೋಪ ತಂಡವಾಗಿ ಬರುತ್ತಾರೆ. ಶುಕ್ರವಾರ ರಾತ್ರಿ ಕಾಮನ ಮೂತರ್ಿಯನ್ನು ಪ್ರತಿಷ್ಠಾಪಿಸುವ ಮೂಲಕ ಆರಂಭಗೊಂಡ ಹೋಳಿ ಹಬ್ಬ ಮಾ.8ರಂದು ಬೆಳಗ್ಗೆ ಕಾಮದಹನ, ಅಂದು ಮಧ್ಯಾಹ್ನ ಬಣ್ಣದೋಕುಳಿ ನಡೆದು ನಂತರ ಅಂತ್ಯಗೊಳ್ಳಲಿದೆ. ಸರಕಾರಿ ಕಾಮ, ಗಾಳಿಯರ್ ಕಾಮ, ಕಂಡೇರ್ ಕಾಮ ಹಾಗೂ ದೈವದ ಕಾಮ ಹೀಗೆ ಪಟ್ಟಣದ ನಾಲ್ಕು ಕಡೆಗಳಲ್ಲಿ ಪ್ರತಿಷ್ಠಾಪಿಸಲ್ಪಡುವ ಕಾಮನನ್ನು ನೆಲ್ಲುಹುಲ್ಲಿನಿಂದ ತಯಾರಿಸಿ ಅದಕ್ಕೆ ವಸ್ತ್ರ ಹಾಗೂ ಆಭರಣಗಳಿಂದ ಅಲಂಕರಿಸುತ್ತಾರೆ.
ಬಣ್ಣದ ಮುಖವಾಡ ಇಟ್ಟು ಕೂಡಿಸಿರುತ್ತಾರೆ. ಅಲ್ಲದೇ ಪಕ್ಕದಲ್ಲಿ ರತಿದೇವಿ ಹಾಗೂ ಭೀಮನನ್ನು ಕೂರಿಸುವ ಪದ್ಧತಿ ಇದೆ.ಮಾ. 5-00ರ ಸಂಜೆಯಿಂದ ಮಾ. 7-00ರ ಬೆಳಗಿನ ಜಾವದವರೆಗೂ ಕಳಬೇಡನ ನರ್ತನ ನೋಡುಗರನ್ನು ಆಕರ್ಷಿಸುತ್ತದೆ. ಪ್ರತಿಯೊಂದು ಕಾಮದವರು ಸರದಿ ಪ್ರಕಾರ ಕಳಬೇಡ ಎನ್ನುವ ರಾಕ್ಷಸ ವೇಷಧರಿಸಿ ತಮ್ಮದೇ ಶೈಲಿಯಲ್ಲಿ ಹೆಜ್ಜೆ ಕುಣಿತದಿಂದ ಜನರನ್ನು ರಂಜಿಸುತ್ತಾರೆ. ಇದರ ಹಿಂದೆ ಕೆಲ ಕಾಮದ ಕಡೆಅವರು ಹೆಣದ ಬಂಡಿ ಮಾಡಿ ಪುರುಷರು ಹೆಣ್ಣು ವೇಷಧಾರಿಯಾಗಿ ಅಳುತ್ತಾ ಸಾಗುವುದು ಇಲ್ಲಿಯ ಸಂಪ್ರದಾಯವಾಗಿದೆ.
ಕಾಮದಹನ: ಮಾ.8ರಂದು ಬೆಳಗ್ಗೆ 6-00 ರಿಂದ 7-30 ರ ಹೊತ್ತಿಗೆ ನಾಲ್ಕು ಕಾಮದವರು ತಂತಮ್ಮ ಕಾಮಣ್ಣರ ಸಮೇತ ಮೊದಲಿಗೆ ದೈವದ ಕಾಮನನ್ನು ಸುಡಲು ಅದರ ಅಧಿಕೃತ ಸ್ಥಳಕ್ಕೆ (ಉಸುಕಿನ ಕಟ್ಟೆ) ಬಂದು ಸೇರುತ್ತಾರೆ. ಆಗ ದೈವದ ಕಾಮದವರು ಕದ್ದು ಹಾಕಿರುವ ಕಟ್ಟಿಗೆ ಹಾಗೂ ಕುಳ್ಳುಗಳ ರಾಶಿಯನ್ನು 5 ಸುತ್ತು ಹಾಕಿ ಕಾಮನ ಮುಖವಾಡವನ್ನು ತೆಗೆದು ಆ ಜಾಗಕ್ಕೆ ಗಡಿಗೆಯನ್ನು ಇಡುತ್ತಾರೆ. ತಕ್ಷಣವೇ ಕಾಮಣ್ಣನಿಗೆ ಬೆಂಕಿ ಇಡುತ್ತಾರೆ. ಇದಾದ ನಂತರವೇ ಉಳಿದ ಕಾಮದವರು ತಂತಮ್ಮ ಸ್ಥಳಕ್ಕೆ ಹೋಗಿ ಅಲ್ಲಿಯೂ ಕೂಡಾ ಇದೇ ಪದ್ಧತಿ ಅನುಸರಿಸಿ ಕಾಮನನ್ನು ಸುಡುತ್ತಾರೆ. ನೆರೆದಿದ್ದ ಜನರೆಲ್ಲರೂ ಅಲ್ಲಿಯ ಬೆಂಕಿಯನ್ನು ಮನೆಗೆ ತಂದು ಕಡಲೆ ಕಾಳು ಸುಟ್ಟು ತಿನ್ನುತ್ತಾರೆ. ಕಾಮ ಸುಟ್ಟ ಬೂದಿಯನ್ನು ರೈತಾಪಿ ಜನರು ತಮ್ಮ ಹೊಲದಲ್ಲಿ ಚೆಲ್ಲುತ್ತಾರೆ. ಇದರಿಂದ ಹೊಲ ಸಮೃದ್ಧಿಯಾಗುತ್ತದೆ ಎಂಬುದು ನಂಬಿಕೆ. ಕಾಮದಹನ ಪೂರ್ವದಿಂದಲೂ ಅಲ್ಪಸ್ವಲ್ಪ ಬಣ್ಣದೋಕುಳಿ ನಡೆಯುತ್ತಿರುತ್ತದೆ. ಆದರೆ ಕಾಮಸುಟ್ಟ ನಂತರ ಮಧ್ಯಾಹ್ನದವರೆಗೂ ತಂಡೋಪತಂಡವಾಗಿ ಯುವಕರು, ಮಧ್ಯಮ ವಯಸ್ಸಿನವರು, ಹುಡುಗಿಯರು, ಮಹಿಳೆಯರು ಮನೆ ಮನೆಗೆ ತೆರಳಿ ಬಣ್ಣದೋಕುಳಿಯಲ್ಲಿ ನಿರತರಾಗುತ್ತಾರೆ