ಐವರು ಭಾರತೀಯರನ್ನು ಹಸ್ತಾಂತರಿಸಿದ ಚೀನಾ
ನವದೆಹಲಿ,ಸೆಪ್ಟೆಂಬರ್ 12: ಭಾರತ - ಚೀನಾ ಗಡಿಯಲ್ಲಿ ಚೈನಾ ಯೋಧರ ಕೈಗೆ ಸಿಲುಕಿದ್ದ ಅರುಣಾಚಲ ಪ್ರದೇಶಕ್ಕೆ ಸೇರಿದ ಐವರು ಯುವಕರನ್ನು ಚೀನಾ ಭಾರತಕ್ಕೆ ಹಸ್ತಾಂತರಿಸಿದೆ.
ಚೀನಾ ಗಡಿಯಲ್ಲಿ ಯುವಕರನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದ್ದಾರೆ. ಅಪಹರಣಕ್ಕೆ ಒಳಗಾಗಿದ್ದಾರೆ ಎಂದು ಭಾವಿಸಲಾಗಿದ್ದ ಅರುಣಾಚಲ ಪ್ರದೇಶದ ಈ ಐವರನ್ನು ಪತ್ತೆ ಹಚ್ಚಿರುವ ಚೀನಾ ಶುಕ್ರವಾರ ಹಸ್ತಾಂತರಿಸಲಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜೂ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದರು.
ಹಸ್ತಾಂತರದ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ ಐವರು ಭಾರತೀಯ ನಾಗರೀಕರನ್ನು ಚೈನಾ ಬಿಡುಗಡೆಗೊಳಿಸಿದೆ.
ಈ ಐವರು ಬೇಟೆಯಾಡಲು ಅರಣ್ಯಕ್ಕೆ ತೆರಳಿದ್ದಾಗ ದಾರಿ ತಪ್ಪಿ ವಾಸ್ತವ ನಿಯಂತ್ರಣ ರೇಖೆ ದಾಟಿದ್ದರು ಎಂದು ಭಾರತೀಯ ಸೇನೆ ಹೇಳಿತ್ತು.
ಅವರೊಂದಿಗೆ ಅರಣ್ಯ ಪ್ರದೇಶಕ್ಕೆ ತೆರಳಿದ್ದ ಇಬ್ಬರು ಈ ವಿಷಯವನ್ನು ಅವರ ಕುಟುಂಬಗಳಿಗೆ ತಿಳಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿತ್ತು, ನಂತರ ಎರಡೂ ದೇಶಗಳ ನಡುವೆ ಮಾತುಕತೆ ನಡೆದು ಅವರ ಹಸ್ತಾಂತರಕ್ಕೆ ಸಮ್ಮತಿಸಿದ್ದವು.
ಮೊದಲು ತಮಗೆ ನಾಪತ್ತೆಯಾದವರು ಪತ್ತೆಯಾಗಿಲ್ಲ ಎಂದಿದ್ದ ಎಂದ ಚೀನಾ ನಂತರ ಅವರು ನಮ್ಮ ಭೂ ಪ್ರದೇಶದಲ್ಲಿದ್ದಾರೆ ಎಂದು ಪ್ರಕಟಿಸಿ ಬಿಡುಗಡೆಗೊಳಿಸಿದೆ.