ಬಳ್ಳಾರಿ

ಶಿಕ್ಷಣದ ಜೊತೆಗೆ ಕ್ರೀಡೆಗಳಿಗೂ ಮಕ್ಕಳು ಆದ್ಯತೆ ನೀಡಲಿ: ರಾಘವೇಂದ್ರ ಕುಲಕರ್ಣಿ

ಶಿಕ್ಷಣದ ಜೊತೆಗೆ ಕ್ರೀಡೆಗಳಿಗೂ ಮಕ್ಕಳು ಆದ್ಯತೆ ನೀಡಲಿ: ರಾಘವೇಂದ್ರ ಕುಲಕರ್ಣಿ

ಬಳ್ಳಾರಿ:ಏ 03  ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡೆಗಳಿಗೂ ಮಕ್ಕಳು ಆದ್ಯತೆ ನೀಡಬೇಕು ಎಂದು ಜೋತಿಷಿ ರಾಘವೇಂದ್ರ ಕುಲಕರ್ಣಿ ಅವರು ಹೇಳಿದರು.  

ನಗರದ ಎಸ್‌.ಎನ್‌.ಪೇಟೆ, ಗಣೇಶ ಕಾಲೋನಿಯಲ್ಲಿ ಜ್ನಾನಶ್ರೀ ಪ್ರತಿಷ್ಠಾನ, ಶ್ರೀಪಾಂಡುರಂಗ ಯಾತ್ರಾ ಪ್ರವಾಸ ಅವರ ಆಶ್ರಯದಲ್ಲಿ ಕಳೆದ14 ವರ್ಷಗಳಿಂದ ಮಕ್ಕಳಿಗಾಗಿ ಆಯೋಜಿಸಲಾಗುತ್ತಿರುವ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  ಶ್ಲೋಕಗಳಿಂದ ಮಕ್ಕಳ ಜ್ಞಾನ ವೃದ್ಧಿಯಾಗಲಿದೆ, ಮಕ್ಕಳು ಶ್ಲೋಕದ ಜೊತೆಗೆ ಕರಾಟೆ ತರಬೇತಿಯನ್ನು ಪಡೆದುಕೊಳ್ಳಲು ಮುಂದಾಗಬೇಕು. ಕರಾಟೆ ಪಟು, ಪ್ರತಿಷ್ಠಾನದ ವಿಜಯ ವಿಠಲ ಅವರು, 1ನೇ ತರಗತಿಯಿಂದ ಡಿಗ್ರಿ ಓದುವ ಹೆಣ್ಣು ಮಕ್ಕಳಿಗೆ ಶಿಬಿರದಲ್ಲಿ ಉಚಿತವಾಗಿ ಕರಾಟೆ ಕಲಿಸಲು ಮುಂದಾಗಿರುವುದು ಸಂತಸ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೋಬ್ಬ ಹೆಣ್ಣು ಮಕ್ಕಳು ಕರಾಟೆ ತರಬೇತಿ ಪಡೆಯುವುದು ಅಗತ್ಯವಾಗಿದೆ ಎಂದರು.  

ಪತ್ರಕರ್ತ ನರಸಿಂಹ ಮೂರ್ತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಗುಣಮಟ್ಟದ ಶಿಕ್ಷಣ ಪಡೆಯುವುದು ಅಗತ್ಯವಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಶಾಲೆಗಳಲ್ಲಿ ವರ್ಷ ಪೂರ್ತಿ ಮಕ್ಕಳಿಗೆ ಸಾಕಷ್ಟು ಹೊರೆಯಾಗುವ ರೀತಿಯಲ್ಲಿ ಶಿಕ್ಷಣ ಪದ್ದತಿ ಮುಂದುವರೆದಿದೆ. ಅದರಲ್ಲೂ ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳ ಗೋಳು ಹೇಳತೀರದಾಗಿದೆ. ನಿರಂತರ ಶಿಕ್ಷಣದ ಒತ್ತಡಕ್ಕೆ ಸಿಲುಕಿದ ಮಕ್ಕಳಿಗೆ ವಿಶ್ರಾಂತಿಯೂ ಅಗತ್ಯವಿದೆ.  ಹಾಗೆಂದು ಮಕ್ಕಳನ್ನು ಪೂರ್ಣ ಫ್ರೀಯಾಗಿ ಬಿಡದೇ ಇಂತಹ ಬೇಸಿಗೆ ತರಬೇತಿ ಶಿಬಿರಗಳಲ್ಲಿ ಸೇರಿಸಲು ಪಾಲಕರು ಮುಂದಾಗಬೇಕು. ಕಳೆದ 14 ವರ್ಷಗಳಿಂದ ಕರಾಟೆ ಪಟು ವಿಜಯ ವಿಠಲ ಅವರು ಉಚಿತ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿದ್ದು, ಸಂತಸ ವಿಷಯ. ಮಕ್ಕಳು ಇದರ ಸದುಪಯೋಗ ಪಡೆದು ಕೊಳ್ಳಬಹುದು ಎಂದರು.  

ಪಾಂಡುರಂಗ ಯಾತ್ರಾ ಪ್ರವಾಸದ ಮುಖ್ಯಸ್ಥ ವಿಜಯವಿಠಲ ಮಾತನಾಡಿ, ಏ.1ರಿಂದ ಮೇ.7ರ ವರೆಗೆ ಮಕ್ಕಳಿಗಾಗಿ ಬೇಸಿಗೆ ಉಚಿತ ಶಿಬಿರವನ್ನು ಹಮ್ಮಿಕೊಂಡಿದ್ದು, ಶಿಬಿರದಲ್ಲಿ ಕರಾಟೆ, ಯೋಗ ತರಬೇತಿ, ಚಿತ್ರಕಲೆ, ಶ್ಲೋಕ ಪಠಣ ಸೇರಿದಂತೆ ಇತ್ಯಾದಿಗಳನ್ನು ಹೇಳಿಕೊಡಲಾಗುವುದು. ಅಗತ್ಯಬಿದ್ದ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣೆ ವ್ಯವಸ್ಥೆ ಮಾಡಿಸಲಾಗುವುದು ಎಂದರು.  

ಈ ಸಂದರ್ಭದಲ್ಲಿ  ಪತ್ರಕರ್ತರಾದ ವೆಂಕಟೇಶ ದೇಸಾಯಿ, ವೆಂಕಟೇಶ ಕುಲಕರ್ಣಿ, ಡಿ.ಗೀರೀಶ್ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು. 


ಸುದ್ದಿ ಓದಿ