ಅಥಣಿ

ಮಕ್ಕಳಿಗೆ ವ್ಯವಹಾರಿಕ ಜ್ಞಾನವನ್ನೂ ಸಹ ಕೊಡುವುದಗತ್ಯ ; ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಸಲಹೆ: ಮಕ್ಕಳ ಶಾಲಾ ಸಂತೆ, ವಿಜ್ಞಾನ ಚಿತ್ರಗಳ ರಂಗೋಲಿ ಸ್ಪರ್ಧೆ

ಮಕ್ಕಳಿಗೆ ವ್ಯವಹಾರಿಕ ಜ್ಞಾನವನ್ನೂ ಸಹ ಕೊಡುವುದಗತ್ಯ ; ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಸಲಹೆ: ಮಕ್ಕಳ ಶಾಲಾ ಸಂತೆ, ವಿಜ್ಞಾನ ಚಿತ್ರಗಳ ರಂಗೋಲಿ ಸ್ಪರ್ಧೆ

ಲೋಕದರ್ಶನ ವರದಿ 


ಅಥಣಿ 15: ಮಕ್ಕಳಿಗೆ ಪುಸ್ತಕೀಯ ಜ್ಞಾನದೊಂದಿಗೆ ವ್ಯವಹಾರಿಕ ಜ್ಞಾನವನ್ನೂ ಸಹ ಕೊಡಬೇಕು ಎಂದು ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಹೇಳಿದರು. 

 ಅವರು ಕೌಲಗುಡ್ಡದ ಸಿದ್ಧಶ್ರೀ ಸಂಸ್ಥೆಯ ಕರಿಯೋಗಸಿದ್ಧ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮಕ್ಕಳ ಶಾಲಾ ಸಂತೆ ಹಾಗೂ ವಿಜ್ಞಾನ ಚಿತ್ರಗಳ ರಂಗೋಲಿ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. 

            ಮಕ್ಕಳು ಶಾಲಾ ವಾತಾವರಣದಲ್ಲಿ ಸಾಮಾನ್ಯವಾಗಿ ಪುಸ್ತಕೀಯ ಜ್ಞಾನ ಹಾಗೂ ತಮ್ಮ ಪಠ್ಯಕ್ಕೆ ಸಂಬಂಧ ಪಟ್ಟಂತಹ ಮಾಹಿತಿಗಳನ್ನು ಪಡೆಯುತ್ತಾರೆ. ಹೀಗೆ ಪಡೆದಂತಹ ಮಾಹಿತಿಯನ್ನು ನಿಜ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಇಂದು ಆಯೋಜಿಸಿದ ಮಕ್ಕಳ ಸಂತೆಯ ಮೂಲಕ ತಿಳಿಯುತ್ತಿದ್ದಾರೆ. ಮಕ್ಕಳಿಗೆ ತಮ್ಮ ನಿತ್ಯ ಜೀವನದಲ್ಲಿ ಪ್ರತಿದಿನ ಬಂದು ಹೋಗುವ ವ್ಯವಹಾರಗಳು, ಸುತ್ತ ಮುತ್ತಲಿನ ವಾತಾವರಣ, ನ್ಯಾಯಾಲಯ, ಬ್ಯಾಂಕುಗಳು, ಪೋಲಿಸ್ ಇಲಾಖೆ, ಅಂಚೆ ಇಲಾಖೆಯ ಕಾರ್ಯ ಹೀಗೆ ಎಲ್ಲವುಗಳನ್ನೂ ತಿಳಿಸಿದ್ದೇ ಆದಲ್ಲಿ ಅವರಲ್ಲಿ ಈ ಎಲ್ಲ ಕಾರ್ಯಗಳ ಬಗೆಗೆ ಆಸಕ್ತಿ ಮೂಡುವುದರೊಂದಿಗೆ ಅವುಗಳ ಅಳವಡಿಕೆಯ ಬಗೆಗಿರುವ ಭಯ ಕಡಿಮೆಯಾಗುತ್ತದೆ ಎಂದರು.  

ಮಕ್ಕಳನ್ನು ಉತ್ತಮ ಪ್ರಜ್ಞಾವಂತ ನಾಗರಿಕನನ್ನಾಗಿಸುವಂತಹ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿರುವ ಶಾಲಾ ಮಂಡಳಿಯ ಹಾಗೂ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದರು. 

           ಗ್ರಾಮ ಲೆಕ್ಕಾಧಿಕಾರಿ ಮಾಹಾದೇವ ಮಾಳಿ, ಕೆಂಪವಾಡ ಸಿ ಆರ್ ಸಿಸಿ.ಎಸ್‌.ಕುಂಬಾರ, ಗ್ರಾಮ ಪಂಚಾಯತ ಸದಶ್ಯ ದೇವಪ್ಪ ಮಾನಗಾವೆ, ಶಾಲಾ ಮುಖ್ಯೋಪಾಧ್ಯಾಯ ಬಿ.ಕೆ.ಖೋತ, ಶೇಖರ ಮೋಟೆ, ಶ್ರೀಶೈಲ ಸಂಭೋಜಿ, ಹಣಮಂತ ಸಂಭೋಜಿ, ಮಲ್ಲಪ್ಪ ಕನವಾಡೆ ಮುಂತಾದವರು ಉಪಸ್ಥಿತರಿದ್ದರು.  

          ನಂತರ ಮಕ್ಕಳು ತರಕಾರಿಗಳನ್ನು ಮಾರುವುದು, ತೂಕ ಮಾಡುವುದು, ಹಣ ಕೊಡುವ ತೆಗೆದುಕೊಳ್ಳುವ ವಿಧಾನ ಎಲ್ಲವನ್ನೂ ವಿವರಿಸಿದರು. ಬಂದಂತಹ ಪಾಲಕರೂ ಸಹ ಮಕ್ಕಳ ಶಾಲಾ ಸಂತೆಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ಇದರೊಂದಿಗೆ ವಿಜ್ಞಾನಕ್ಕೆ ಸಂಬಂಧಿಸಿದ ರಂಗೋಲಿಗಳ ಪ್ರದರ್ಶನವೂ ಸಹ ಜರುಗಿತು. 


ಸುದ್ದಿ ಓದಿ