ಚಿಕ್ಕೋಡಿ

ಚಿಕ್ಕೋಡಿ ಗಡಿ ಭಾಗದ ಜನರು ಎಚ್ಚರಿಕೆ ವಹಿಸಿ

ಚಿಕ್ಕೋಡಿ ಗಡಿ ಭಾಗದ ಜನರು ಎಚ್ಚರಿಕೆ ವಹಿಸಿ

ಚಿಕ್ಕೋಡಿ 07: ಕೊರೊನಾ ಮೂರನೆ ಅಲೆಯಿಂದ ಚಿಕ್ಕೋಡಿ ಭಾಗದ ಜನ ಎಚ್ಚರಿಕೆಯಿಂದ ಇರಬೇಕು. ಅನಾವಶ್ಯಕವಾಗಿ ಜನದಟ್ಟನೆ ಪ್ರದೇಶದಲ್ಲಿ ಸಂಚಾರ ಮಾಡದೇ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿ ಇರಬೇಕೆಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಮನವಿ ಮಾಡಿದ್ದಾರೆ. 

ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ ಅವರು, ದಿನದಿಂದ ದಿನಕ್ಕೆ ಕೊರೊನಾ ಮೂರನೆ ಅಲೆಯು ರಾಜ್ಯದಲ್ಲಿ ತೀವ್ರವಾಗಿ ಹರಡುತ್ತಿದೆ, ಮೊದಲನೆ ಹಾಗೂ ಎರಡನೇ ಅಲೆಯ ಚಿತ್ರಣ ಇನ್ನೂ ಕಣ್ಣ ಮುಂದೆ ಹಚ್ಚ ಹಸಿರಾಗಿ ಇರುವಾಗಲೇ ಮೂರನೇ ಅಲೆಯನ್ನು ನಾವೆಲ್ಲರೂ ಕೂಡಿ ಎದುರಿಸಬೇಕಾಗಿದೆ.ಹಾಗಾಗಿ ಯಾರೂ ಕೂಡ ಆರೋಗ್ಯದ ಕಡೆ ನಿರ್ಲಕ್ಷ್ಯ ವಹಿಸದೇ ಕಾಳಜಿ ವಹಿಸಿ, ಎಚ್ಚರಿಕೆಯಿಂದ ಇರಬೇಕು ಎಂದರು. 

 ಮುಖ್ಯವಾಗಿ 18 ವರ್ಷ ಮೇಲ್ಪಟ್ಟವರು ಕೊವಿಡ್‌ನ  ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಿ,ಈಗಾಗಲೇ ಮೊದಲನೆ ಲಸಿಕೆ ಹಾಕಿಸಿಕೊಂಡು ಎರಡನೇ ಲಸಿಕೆ ಅವಧಿ ಬಂದರೂ ನಿರ್ಲಕ್ಷ್ಯ ತೋರಿದವರು ಕೂಡಲೇ ಲಸಿಕೆ ಹಾಕಿಸಿಕೊಳ್ಳಿ,ಹಾಗೂ 15 ರಿಂದ 18 ವರ್ಷ ಒಳಗಿನ ಮಕ್ಕಳ ಲಸಿಕಾಕರಣ ಶುರುವಾಗಿದ್ದು ಪೋಷಕರು ಇದರ ಬಗ್ಗೆ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. 

ಮುನ್ನೆಚ್ಚರಿಕಾ ಕ್ರಮಗಳಾದ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು ಅನಿವಾರ್ಯವಾಗಿದೆ, ಮನುಕುಲಕ್ಕೆ ಮಾರಕವಾಗಿ ಬಂದಿರುವ ಈ ರೋಗವನ್ನು ನಾವು ಎಲ್ಲರೂ ಕೂಡಿ ಎದುರಿಸಬೇಕಿದ್ದು ನಿರ್ಲಕ್ಷ್ಯ ತೋರದೇ ಆರೋಗ್ಯ ಕಡೆ ಕಾಳಜಿ ವಹಿಸಬೇಕೆಂದು ಗಡಿ ಭಾಗದ ಜನರಿಗೆ ಮನವಿ ಮಾಡಿದರು. 


ಸುದ್ದಿ ಓದಿ