ಚಿಕ್ಕೋಡಿ ಬಿಜೆಪಿಯಲ್ಲಿ ಮೇಜರ್ ಸರ್ಜರಿ ಅಗತ್ಯ: ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ
ಚಿಕ್ಕೋಡಿ 20: ಬೆಳಗಾವಿ ಜಿಲ್ಲೆಯ ಎರಡು ಲೋಕಸಭಾ ಕ್ಷೇತ್ರದಲ್ಲಿ ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ಇತ್ತು. ಆದರೆ ದುರದೃಷ್ಟವಶಾತ್ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಕೈ ತಪ್ಪಿದ್ದು, ಚಿಕ್ಕೋಡಿ ಬಿಜೆಪಿಯಲ್ಲಿ ದೊಡ್ಡ ಸರ್ಜರಿ ಅಗತ್ಯವಿದೆ ಎಂದು ಚಿಕ್ಕೋಡಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಚಿಕ್ಕೋಡಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಫಲಿತಾಂಶದಬಗ್ಗೆ ಭಯವಿತ್ತು. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಶೇ.100 ರಷ್ಟು ಆಯ್ಕೆಯಾಗುವ ವಿಶ್ವಾಸವಿತು. ಆದರೆ ಫಲಿತಾಂಶ ವಿಭಿನ್ನವಾಗಿತ್ತು. ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಆದರೆ ದುರದೃಷ್ಟವಶಾತ್ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿದೆ. ಈ ಸೋಲು ನಮ್ಮೆಲ್ಲ ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ ಎಂದರು.
ಪಕ್ಷದಲ್ಲಿ ಎಲ್ಲಿ ಲೋಪವಾಗಿದೆ, ಏನು ಮಾಡಬೇಕು, ಎಲ್ಲಿ ಹಾನಿಯಾಗಿದೆ ಎಂಬುದನ್ನು ಚಿಂತನೆ ಮಾಡಬೇಕು. ಇದಕ್ಕೆ ಪಕ್ಷದಲ್ಲಿ ಮೇಜರ್ ಸರ್ಜರಿ ಆಗಬೇಕು, ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ನಷ್ಟ ಅನುಭವಿಸಬೇಕಾಗುತ್ತದೆ. ಅದಕ್ಕಾಗಿ ಎಲ್ಲರೂ ಭಿನ್ನಾಭಿಪ್ರಾಯ ಮರೆತು ಪಕ್ಷಕ್ಕಾಗಿ ದುಡಿಯಬೇಕಿದೆ. ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಅವರು ಮಾಡಿರುವ ಕೆಲಸಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಮೂಲಕ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕಾ ಪಂಚಾಯಿತಿ ಚುನಾವಣೆಯತ್ತ ಗಮನಹರಿಸಬೇಕಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಇಂದು ರಾಜ್ಯದಲ್ಲಿ ಭರವಸೆ ಯೋಜನೆಗಳಿಂದ ಶಾಸಕರಿಗೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಸಿಗುತ್ತಿಲ್ಲ, ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಆರೋಪಿಸಿದರು.
ಶಾಸಕ ದುರ್ಯೋಧನ ಐಹೊಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಮಾಜಿ ಜಿಲ್ಲಾಧ್ಯಕ್ಷ ರಾಜೇಶ್ ನೇರ್ಲಿ ಮಾತನಾಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಾಂಭವಿ ಅಶ್ವತಪುರ, ಜಿಲ್ಲಾ ಸಹ ಪ್ರಭಾರಿ ಬಸವರಾಜ ಯಕ್ಕಂಚಿ, ಉಜ್ವಲಾ ಬಡವಾನಾಚೆ,ದುಂಡಪ್ಪ ಬೆಂಡವಾಡೆ, ಬಸವರಾಜ ಹುಂದ್ರಿ, ಜಿಲಾ ಪ್ರಧಾನ ಕಾರ್ಯದರ್ಶಿ ಅಮೃತ ಕುಲಕರ್ಣಿ, ಶಿವಾನಂದ ನವಿನಾಳೆ, ಸದಾನಂದ ಹಳಿಂಗಳೆ, ಜಿಲ್ಲಾ ವಕ್ತಾರ ಗೋಪಾಲ ಚನಗೌಡರ್, ಅಪ್ಪಾಸಾಹೇಬ ಚೌಗಲಾ,ದೀಪಕ ಪಾಟೀಲ, ಸಂಜು ಪಾಟೀಲ, ರಾವಸಾಹೇಬ ಕಮತೆ ಅಪ್ಪಾಸಾಹೇಬ ಚೌಗಲಾ, ಕೈಲಾಸ್ ಮಾಳಗೆ, ಜಿಲ್ಲಾ ಮೋರ್ಚಾ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲೆಯ ಎಲ್ಲಾ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.