ಚೈನಾ ಪಡೆಗಳು ಇನ್ನೂ ಅಲ್ಲೇ ಇವೆ: ಚಿದಂಬರಂ
ನವದೆಹಲಿ, ಜುಲೈ 18: ಭಾರತದ ಒಂದಂಗುಲ ಭೂ ಭಾಗವನ್ನು ಅಕ್ರಮಿಸಲು ಜಗತ್ತಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ ಎಂಬ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗೆ, ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಶನಿವಾರ ತಿರುಗೇಟು ನೀಡಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಾಕ್ಚಾತುರ್ಯಕ್ಕೆ ಇದೊಂದು ನಿದರ್ಶನ ಎಂದು ವ್ಯಂಗ್ಯವಾಡಿದ್ದಾರೆ. ಭದ್ರತಾ ಸಂಸ್ಥೆಗಳ ಅಂದಾಜಿನ ಪ್ರಕಾರ ಚೈನಾ ಪಡೆಗಳು ಇನ್ನೂ ವಾಸ್ತವ ನಿಯಂತ್ರಣ ಪ್ರದೇಶ( ಎಲ್ ಎ ಸಿ)ದೊಳಗೆ ಭಾರತ ಭೂ ಪ್ರದೇಶದಲ್ಲಿಯೇ ಇವೆ ಎಂದು ಅವರು ಹೇಳಿದ್ದಾರೆ.
ಚೈನಾ ಸೇನಾ ಪಡೆಗಳು ಈಗಲೂ ವಾಸ್ತವ ನಿಯಂತ್ರಣ ರೇಖೆ ಗುಂಟ ೧.೫ ಕಿಲೋ ಮೀಟರ್ ಭಾರತೀಯ ಭೂಪ್ರದೇಶದಲ್ಲಿವೆ ಎಂದು ಭಾರತೀಯ ಭದ್ರತಾ ಸಂಸ್ಥೆಗಳು ಅಂದಾಜಿಸಿವೆ .
ಕಳೆದ ಮೇ ತಿಂಗಳಲ್ಲಿ ಚೀನಾದ ಪಡೆಗಳು ೫ ಕಿಮೀ ನಷ್ಟು ಭಾರತದೊಳಕ್ಕೆ ನುಸುಳಿದ್ದವು ಎಂದು ಚಿದಂಬರಂ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಭಾರತೀಯ ಭೂ ಭಾಗವನ್ನು ಅತಿಕ್ರಮಿಸುವ ಶಕ್ತಿ ಜಗತ್ತಿನ ಯಾರಿಗೂ ಇಲ್ಲ ಎಂಬ ರಕ್ಷಣಾ ಸಚಿವರ ಹೇಳಿಕೆ ಆಡಂಬರದ ಮಾತಾಗಿದೆ, ಸರ್ಕಾರ ವಾಸ್ತವ ಸ್ಥಿತಿಯನ್ನು ಒಪ್ಪಿಕೊಳ್ಳುವವರೆಗೂ ಯಥಾಸ್ಥಿತಿ ಎಂಬುದು ಮರೀಚಿಕೆಯಾಗಲಿದೆ ಎಂದು ಚಿದಂಬರಂ ಸ್ಪಷ್ಟಪಡಿಸಿದ್ದಾರೆ.