ಚಾರ್ಟರ್ಡ್ ಅಕೌಂಟೆಂಟ್ಗಳು ದೇಶದ ಅಭಿವೃದ್ಧಿಯ ಪಾಲುದಾರರು
ಸಚಿವ ಬಿ.ನಾಗೇಂದ್ರ ಅಭಿಮತ: ಬಳ್ಳಾರಿಯಲ್ಲಿ ಅಂತರಾಷ್ಟ್ರೀಯ ಎಂಎಸ್ಎಂಇ ದಿನಾಚರಣೆ
ಬಳ್ಳಾರಿ,ಜೂ.28: ವಾಣಿಜ್ಯ ಮತ್ತು ವಹಿವಾಟು ಕ್ಷೇತ್ರದಲ್ಲಿ ದೇಶದ ಅಭಿವೃದ್ಧಿಗೆ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯು ತನ್ನದೇ ಆದ ವಿಶಿಷ್ಟ ಪಾತ್ರ ಹೊಂದಿದೆ. ಕೃಷಿ ಕ್ಷೇತ್ರ ಮತ್ತು ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯು ಭಾಗಿತ್ವ ಹೊಂದಿದರೆ ರೈತರ ಆದಾಯ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಯುವಜನ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದರು.
ಭಾರತ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನ ಬಳ್ಳಾರಿ ಶಾಖೆ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಹಯೋಗದಲ್ಲಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಬಿಡಿಎಎ ಪುಟ್ಬಾಲ್ ಮೈದಾನದ ವೇದಿಕೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್ಎಂಇ) ಅಂತಾರಾಷ್ಟ್ರೀಯ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆಯ ಈ ಕಾರ್ಯಕ್ರಮವನ್ನು ಶ್ಲಾಘಿಸುತ್ತಾ ಮುಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಸಮರ್ಕ ಅನುಷ್ಠಾನಕ್ಕೆ ಸಹಕಾರ ನೀಡುವಂತೆ ಸಲಹೆ ನೀಡಿದರು.
ಬಳ್ಳಾರಿ ಜಿಲ್ಲಾ ಕೈಗಾರಿಕೋದ್ಯಮ ಮತ್ತು ವಾಣಿಜ್ಯ ಸಂಘದ ಸದಸ್ಯರು ಈ ದಿಶೆಯಲ್ಲಿ ಸಹಕಾರ ನೀಡಬೇಕು. ರಾಜ್ಯದ ಹಾಗೂ ದೇಶದ ಬೊಕ್ಕಸಕ್ಕೆ ತೆರಿಗೆ ಸಂಗ್ರಹಿಸುವಲ್ಲಿ ಚಾರ್ಟರ್ಡ್ ಅಕೌಂಟೆಂಟ್ಗಳ ಪಾತ್ರ ಬಹಳ ಮಹತ್ತರವಾದದ್ದು ಮತ್ತು ಅವರು ದೇಶದ ಅಭಿವೃದ್ಧಿಯ ಪಾಲುದಾರರು ಎಂದು ಶ್ಲಾಘಿಸಿದರು.
ಸರಕಾರ ಹೊಸ ಯೋಜನೆ ಜಾರಿಗೆ ತಂದಂತಹ ಸಂದರ್ಭದಲ್ಲಿ ಕೆಲವೊಂದು ನ್ಯೂನತೆಗಳು ಮತ್ತು ಅಡಚಣೆಗಳನ್ನು ಇರುತ್ತವೆ. ಅದನ್ನು ಸರಿಪಡಿಸುವುದಕ್ಕೆ ಕಾಲಾವಕಾಶ ನೀಡಬೇಕೆಂದರು.
ಅಂತರಾಷ್ಟ್ರೀಯ ಎಂಎಸ್ಎಮ್ಇ ದಿನಾಚರಣೆಯ ಬಗ್ಗೆ ಹೆಚ್ಚು ಜನರಿಗೆ ತಿಳಿದೇ ಇರಲಿಲ್ಲ ಈ ಕಾರ್ಯಕ್ರಮದ ಮೂಲಕ ಕೈಗಾರಿಕೋದ್ಯಮಿಗಳು ಹಾಗೂ ಕೃಷಿಕರಿಗೆ ಕೈಗಾರಿಕೋದ್ಯಮಗಳಿಂದ ಆಗುವ ಅನುಕೂಲತೆಗಳ ಬಗ್ಗೆ ತಿಳಿಸಿಕೊಡುವ ಮಹತ್ತರವಾದ ಕೆಲಸವನ್ನು ಮಾಡುತ್ತಿರುವುದಕ್ಕೆ ಧನ್ಯವಾದ ಹೇಳಿದರು.
ರಾಜ್ಯ ಸರ್ಕಾರದ ಕೃಷಿ ಇಲಾಖೆಯಿಂದ ಕೃಷಿಕರಿಗೆ ನೀಡುವ ಅನೇಕ ಸೌಲಭ್ಯಗಳ ಬಗ್ಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಆರ್.ಪಾಲಾಕ್ಷಗೌಡ ವಿವರಿಸಿದರು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಬಗ್ಗೆ ಹಗರಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಆಡಿ ಶಿಲ್ಪ.ಹೆಚ್ ಅವರು ವಿವರವಾಗಿ ವಿವರಿಸಿದರು.
ಕಲ್ಯಾಣ ಕರ್ನಾಟಕದ ಕೃಷಿಕರಿಗೆ ವಿಶೇಷವಾಗಿ ಬಳ್ಳಾರಿ ಜಿಲ್ಲೆಯ ರೈತರಿಗೆ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಇರುವ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು. ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ್, ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಉಪಮೇಯರ್ ಜಾನಕಿ, ಬಿಡಿಸಿಸಿ ಅಧ್ಯಕ್ಷ ಸಿ.ಶ್ರೀನಿವಾಸ್ ರಾವ್, ಬಿಡಿಸಿಸಿ ಕಾರ್ಯದರ್ಶಿ ಯಶವಂತ್ ರಾಜ್ ನಾಗಿರೆಡ್ಡಿ, ಪ್ರಾಂತೀಯ ಪರಿಷತ್ತಿನ ಅಧ್ಯಕ್ಷ ನಾಗನಗೌಡ, ಕಾರ್ಯದರ್ಶಿ ಪುರುಷೋತ್ತಮ ರೆಡ್ಡಿ ಸೇರಿದಂತೆ ವರ್ತಕರು ವಿದ್ಯಾರ್ಥಿಗಳು, ರೈತರು ಹಾಗೂ ಇತರರು ಉಪಸ್ಥಿತರಿದ್ದರು.
------
ಕಂಪ್ಲಿ ವಿವಿಧಡೆ ದಾಳಿ: ನಾಲ್ಕು ಕಿಶೋರ ಕಾರ್ಮಿಕರ ರಕ್ಷಣೆ
ಬಳ್ಳಾರಿ,ಜೂ.28: ಕಂಪ್ಲಿ ಪಟ್ಟಣದಲ್ಲಿ ಜಿಲ್ಲಾ ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ, ಕಾರ್ಮಿಕ ಇಲಾಖೆ, ಬಚಪನ್ ಬಚಾವೋ ಆಂದೋಲನ, ಪೋಲಿಸ್ ಇಲಾಖೆ,? ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ ಮತ್ತು ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಮಂಗಳವಾರದಂದು ಕಾರ್ಮಿಕ ನೀರೀಕ್ಷಕ ಎಂ.ಅಶೋಕ, ಬಚಪನ್ ಬಚಾವೋ ಆದೋಲನ ರಾಜ್ಶ ಸಮನ್ವಯಾಧಿಕಾರಿ ಬೀನು ವರ್ಗೀಸ, ಕ್ಷೇತ್ರಾಧಿಕಾರಿ ಪಿ.ಎಂ ಈಶ್ವರಯ್ಯ ಮತ್ತು ಇತರ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿ 04 ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ.
ಪಟ್ಟಣದ ವಿವಿಧೆಡೆ ಗ್ಯಾರೇಜ್, ಬೇಕರಿ, ಶಾಮಿಯಾನ ಸಪ್ಲೆಯರ್ಸ್, ಮೆಕ್ಯಾನಿಕ್ ಶಾಪ್ ಇತ್ಯಾದಿ ಅಂಗಡಿ ಉದ್ದಿಮೆಗಳ ಮೇಲೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) 1986 ಕಾಯ್ದೆ ಉಲ್ಲಂಘನೆ ಮಾಡಿದ ಉದ್ದಿಮೆಗಳ ಮೇಲೆ ಆಕಸ್ಮಿಕ ದಾಳಿ ನಡೆಸಿ 04 ಕಿಶೋರ ಕಾರ್ಮಿಕನ್ನು ಕೆಲಸದಿಂದ ಬಿಡುಗಡೆಗೊಳಿಸಿ 03 ಮಕ್ಕಳ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ವಿದ್ಯಾಭ್ಯಾಸವನ್ನು ಮುಂದುವರೆಸುವಂತೆ ಮನವೊಲಿಸಿ ಪೋಷಕರಿಗೆ ಒಪ್ಪಿಸಲಾಯಿತು. ಮಾಲೀಕರ ವಿರುದ್ದ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದೇ ಸಂದರ್ಭದಲ್ಲಿ ಕಾಯ್ದೆಯ ಕರಪತ್ರ ಮತ್ತು ಸ್ಟೀಕರ್ಸ್ ಹಂಚುವುದರ ಮೂಲಕ ಕಾನೂನು ಅರಿವು ಮೂಡಿಸಲಾಯಿತು ಎಂದು ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಓದುವುದರಿಂದ ಜ್ಞಾನ ವೃದ್ಧಿ: ನರಸಣ್ಣ
ಬಳ್ಳಾರಿ,ಜೂ.28: ಓದುವುದರಿಂದ ಜ್ಞಾನವು ಹೆಚ್ಚುತ್ತದೆ, ಜೊತೆಗೆ ಸಮಗ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಶಿಕ್ಷಣದಿಂದ ಎಲ್ಲವನ್ನು ಸಾಧಿಸಬಹುದು ಎಂದು ನಗರದ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನರಸಣ್ಣ ಅವರು ಹೇಳಿದರು.
ಭಾರತ ಸರ್ಕಾರದ ಸಾಂಸ್ಕೃತಿಕ ಮಂತ್ರಾಲಯ ಆಶಯದಂತೆ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು ಇವರ ನಿರ್ದೇಶನದಂತೆ, ಕೇರಳದ ಗ್ರಂಥಾಲಯ ಮತ್ತು ಸಾಕ್ಷರತಾ ಆಂದೋಲನದ ಪಿತಾಮಹರಾದ ಪಿ.ಎನ್. ಫಣಿಕ್ಕರ್ರವರ ಪುಣ್ಯ ಸ್ಮರಣೆ ಅಂಗವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಬಳ್ಳಾರಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಮಂಗಳವಾರದಂದು ಹಮ್ಮಿಕೊಂಡಿದ್ದ ಓದುವ ದಿನ/ಓದುವ ತಿಂಗಳು ಕಾರ್ಯಕ್ರಮ ನಿಮಿತ್ತ ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಜೂನ್ 19 ರಿಂದ ಜುಲೈ 18 ರವರೆಗೆ ದೇಶಾದ್ಯಾಂತ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ಅಂಗವಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅದರಲ್ಲಿ ಪುಸ್ತಕ ಪ್ರದರ್ಶನ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಕಥೆ ಹೇಳುವುದು, ಚರ್ಚಾ ಸ್ಪರ್ಧೆ ಹೀಗೆ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಲ್ಲಾ ಓದುಗರು ಗ್ರಂಥಾಲಯದ ಪುಸ್ತಕಗಳನ್ನು ಓದಬೇಕು ಮತ್ತು ತಮ್ಮ ತಮ್ಮ ಮನೆಗಳಲ್ಲಿ ಹಾಗೂ ಸುತ್ತಮುತ್ತಲಿನ ಸ್ನೇಹಿತರಿಗೆ, ಸಂಬಂಧಿಕರಿಗೆ, ಮಕ್ಕಳಿಗೆ ಹಾಗೂ ಇತರರಿಗೆ ಪುಸ್ತಕಗಳನ್ನು ನೀಡಿ ಅವರಲ್ಲೂ ಓದುವ ಆಸಕ್ತಿ ಮೂಡಿಸಿ ಓದುವುದನ್ನು ಪ್ರೇರೇಪಿಸಬೇಕು. ಎಲ್ಲ್ಲರಿಗೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಸಾರ್ವಜನಿಕ ಡಿಜಿಟಲ್ ಗ್ರಂಥಾಲಯ ಕೇವಲ 03 ವರ್ಷಗಳ ಅವಧಿಯಲ್ಲಿ 3.50 ಕೋಟಿ ಸದಸ್ಯರನ್ನು ನೋಂದಾಯಿಸುವ ಮೂಲಕ ಇಡೀ ವಿಶ್ವದಲ್ಲಿ ಡಿಜಿಟಲ್ ಗ್ರಂಥಾಲಯ ಸದಸ್ಯತ್ವ ನೋಂದಣಿಯಲ್ಲಿ ಮುಂಚೂಣಿಯಲ್ಲಿದೆ ಎಂದರು.
ಬಳ್ಳಾರಿ ನಗರದಲ್ಲಿ 1.21 ಲಕ್ಷ ಸದಸ್ಯರನ್ನು ನೋಂದಾಯಿಸಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಳ್ಳಾರಿ ನಗರ ಕೇಂದ್ರ ಗ್ರಂಥಾಲಯದ ಡಿಜಿಟಲ್ ಗ್ರಂಥಾಲಯ ಸದಸ್ಯತ್ವ ಪಡೆದುಕೊಂಡು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಾರ್ವಜನಿಕ ಓದುಗರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ತೋಟಗಾರಿಕೆಯ ವಿವಿಧ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿ
ಬಳ್ಳಾರಿ,ಜೂ.28: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ 2023-24 ನೇ ಸಾಲಿಗೆ ತೋಟಗಾರಿಕೆಯ ವಿವಿಧ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿಕೊಳ್ಳಿ ಎಂದು ತೋಟಗಾರಿಕೆ ಉಪನಿರ್ದೇಶಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕೃತಿ ವಿಕೋಪಗಳು, ಹವಾಮಾನ ವೈಪರೀತ್ಯಗಳಾದ ಅತಿವೃಷ್ಟಿ, ಅನಾವೃಷ್ಟಿ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರವಾಹ, ಸಿಡಿಲಿನಿಂದ ಉಂಟಾಗುವ ಬೆಂಕಿ ಅವಘಡ ಇತ್ಯಾದಿ ಕಾರಣಗಳಿಂದ ಸಂಭವಿಸಬಹುದಾದ ಬೆಳೆಹಾನಿಯ ನಷ್ಟದ ಪರಿಹಾರವನ್ನು ಬೆಳೆ ವಿಮೆ ಘಟಕ (ಹಳ್ಳಿ, ಗ್ರಾಮ ಪಂಚಾಯಿತಿ, ಹೋಬಳಿ)ವಾರು ನಿರ್ಧರಿಸಿ ಬೆಳೆ ನಷ್ಟದ ಪರಿಹಾರವನ್ನು ನೀಡುವುದರ ಮೂಲಕ ರೈತರಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯು ನೆರವಾಗಲಿದೆ.
*ವಿಮಾ ಯೋಜನೆಯಡಿ ಒಳಪಡುವ ಬೆಳೆಗಳು:*
ಕೆಂಪು ಮೆಣಸಿನಕಾಯಿ(ನೀರಾವರಿ): ಬೆಳೆಯು ವಿಮಾ ಪ್ರದೇಶದಲ್ಲಿ ಒಳಪಡುವ ಹೋಬಳಿಗಳು ಕಂಪ್ಲಿ, ಕುರುಗೋಡು, ಕೋಳೂರು, ಬಳ್ಳಾರಿ, ಮೋಕಾ, ರೂಪನಗುಡಿ, ಕರೂರು, ತೆಕ್ಕಲಕೋಟೆ, ಸಿರುಗುಪ್ಪ, ಹಚ್ಚಳ್ಳಿ, ತೋರಣಗಲ್ಲು.
ಈರುಳ್ಳಿ(ನೀರಾವರಿ): ಈರುಳ್ಳಿ(ನೀರಾವರಿ) ಬೆಳೆಯು ಒಳಪಡುವ ಹೋಬಳಿಗಳು ಸಂಡೂರು, ಚೋರನೂರು, ತೋರಣಗಲ್ಲು ಪ್ರದೇಶಗಳು ಒಳಪಡಲಿವೆ.
*ವಿಮಾ ಕಂತು ಮತ್ತು ನೋಂದಣಿ ಅವಧಿ:*
ಕೆಂಪು ಮೆಣಸಿನಕಾಯಿ (ನೀ): ವಿಮಾ ಮೊತ್ತ ಪ್ರತಿ ಹೆಕ್ಟೇರ್ಗೆ ರೂ.1,07,500 ಹಾಗೂ ಪ್ರತಿ ಹೆಕ್ಟೇರ್ಗೆ ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ 5,375 ರೂ. ಆಗಿರುತ್ತದೆ. ವಿಮಾ ಮೊತ್ತ ಪಾವತಿಸಲು ಕೊನೆಯ ದಿನ ಜುಲೈ 31.
ಈರುಳ್ಳಿ (ನೀ): ವಿಮಾ ಮೊತ್ತ ಪ್ರತಿ ಹೆಕ್ಟೇರ್ಗೆ ರೂ.80,500 ಹಾಗೂ ಪ್ರತಿ ಹೆಕ್ಟೇರ್ಗೆ ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ 4,025 ರೂ. ಆಗಿರುತ್ತದೆ. ವಿಮಾ ಮೊತ್ತ ಪಾವತಿಸಲು ಕೊನೆಯ ದಿನ ಜುಲೈ 31.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಚೇರಿ ಅಥವಾ ಬಳ್ಳಾರಿ ಮತ್ತು ಕುರುಗೊಡು ತಾಲೂಕು ದೂ.08392-278177, ಮೊ.9480257282 ಹಾಗೂ ಸಂಡೂರು ದೂ.08395-260389, ಮೊ.9740934208 ಮತ್ತು ಸಿರುಗುಪ್ಪ ಮತ್ತು ಕಂಪ್ಲಿ ದೂ.08396-222066, ಮೊ.9448910277 ಗೆ ಸಂಪರ್ಕಿಸಿಬಹುದು.