ಧಾರವಾಡ - ಹುಬ್ಬಳ್ಳಿ

ರಾಜ್ಯೋತ್ಸವ ಆಚರಣೆಯಷ್ಟೇ ಸಾಲದು, ಕನ್ನಡದ ಉಳಿವಿಗೆ ಬದ್ಧತೆ ಅಗತ್ಯ: ಶ್ರೀನಿವಾಸ ವಾಡಪ್ಪಿ

ರಾಜ್ಯೋತ್ಸವ ಆಚರಣೆಯಷ್ಟೇ ಸಾಲದು, ಕನ್ನಡದ ಉಳಿವಿಗೆ ಬದ್ಧತೆ ಅಗತ್ಯ: ಶ್ರೀನಿವಾಸ ವಾಡಪ್ಪಿ
Celebrating Rajyotsava alone is not enough; a commitment to the survival of Kannada is essential: Sr

           ಧಾರವಾಡ  24: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯೋತ್ಸವ ಆಚರಿಸಲು ಜನ ಹಿಂದೇಟು ಹಾಕುತ್ತಾರೆ. ಆದರೆ ಇಂದಿನ ಯುವಪೀಳಿಗೆ ಅನ್ನ, ನೀರು, ಸೂರು, ಬಟ್ಟೆ ಇತ್ಯಾದಿ ಕನ್ನಡದಿಂದಲೇ ಪಡೆದುಕೊಂಡು ರಾಜ್ಯಕ್ಕೆ ಮತ್ತು ದೇಶಕ್ಕೆ ಕಿಂಚಿತ್ತಾದರು.

             ಋಣ ಸಂದಾಯ ಮಾಡುವಲ್ಲಿ ಚಿಂತನೆಗಳನ್ನು ಮಾಡದೆ ವಿಮುಖರಾಗುತ್ತಿದ್ದಾರೆ.  ನೆಪಕ್ಕೆ ಮಾತ್ರ ರಾಜ್ಯೋತ್ಸವದ ದಿನದಂದು ಜನ ಸಮಾಗಮವಾಗಿ ಅನಗತ್ಯ ಕಾಲಹರಣ ಮಾಡುವ, ಕನ್ನಡದ ಕುರಿತು ಗಂಧ-ಗಾಳಿ ಅರಿವಿಲ್ಲದ ಜನರನ್ನು ನೋಡಿ ಬೇಸರವಾಗುತ್ತದೆ ಎಂದು ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಹೇಳಿದರು.  

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು 71 ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ, ನಾಡಹಬ್ಬ-2026 ರ ಅಂಗವಾಗಿ ನವೆಂಬರ್ 18 ರಿಂದ 29 ರವರೆಗೆ 12 ದಿನಗಳ ಕಾಲ ಆಯೋಜಿಸಿರುವ ನಾಟಕೋತ್ಸವದ ಆರನೇ ದಿನ ‘ಈದಿ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.   

ಇಂದಿನ ಕ್ಲಿಷ್ಟಕರ ದಿನಮಾನಗಳಲ್ಲಿ ತಂತ್ರಜ್ಞಾನದ ಕೊಡುಗೆಯಿಂದಾಗಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಏಚೆತ್ತವಾಗಿ ಬಳಕೆಯಾಗುತ್ತಿದೆ. ತುಂಬ ಎಚ್ಚರ ವಹಿಸಿ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅಗತ್ಯವಿದ್ದರೆ ಮಾತ್ರ ಬಳಸುವಂತಾಗಬೇಕು. 

            ಕನ್ನಡ, ನಾಡು, ನುಡಿ, ಸಂಸ್ಕೃತಿ ಸೇರಿ ಎಲ್ಲ ಪರಂಪರೆ ಉಳಿಸಿ ಬೆಳೆಸುವಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಚಟುವಟಿಕೆಗಳು ಗರಿಗೆದರಿವೆ. ವಿಶೇಷವಾಗಿ ರಂಗಭೂಮಿ ಕಲಾವಿದರಿಗೆ ಅನುಕೂಲಕ್ಕೆ ತಕ್ಕಂತೆ ನಾಟಕಗಳನ್ನು ಆಯೋಜನೆ ಮಾಡಿ, ಸಮಾಜದ ಸಾಮರಸ್ಯ ಮನೋಭಾವನೆ ಹೆಚ್ಚಿಸುವಲ್ಲಿ ನಿಷ್ಣಾತವಾಗಿದೆ ಎಂದರು.  

ಜಾನಪದ ಕಲಾವಿದ ದೇಗಾವಿ ಗ್ರಾಮದ ಶಿವಪುತ್ರ ವಸ್ತ್ರದ ಅವರಿಗೆ ರಂಗಕಲಾ ಸನ್ಮಾನ ಮಾಡಿ ಗೌರವಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಅವರು ತಮ್ಮ ಅನುಭವವನ್ನು ಹಂಚಿಕೊಂಡು, ತಾವು ಬೆಳೆದು ಬಂದ ರೀತಿ, ರಂಗಭೂಮಿ ಕ್ಷೇತ್ರ ಬದುಕು ಕಟ್ಟಿಕೊಟ್ಟಿದ್ದರ ಹಿನ್ನೆಲೆಯ ಕುರಿತು ಹೇಳಿದರು ಮತ್ತು ಸನ್ಮಾನಕ್ಕೆ ಸಂತಸ ವ್ಯಕ್ತಿಪಡಿಸಿ ಕೃತಜ್ಞತೆ ಸಲ್ಲಿಸಿದರು.  

ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಪ್ರೊ. ಧನವಂತ ಹಾಜವಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು. ಶಂಕರ ಹಲಗತ್ತಿ ವಂದಿಸಿದರು. ಭಿನ್ನವತ್ತಳೆ ಫಲಕ ವಾಚನವನ್ನು ಗುರು ಹಿರೇಮಠ ಮಾಡಿದರು.  

ಸಮೀರ ಸೂರ್ಯಕಾಂತ ಪೆಣ್ಕರ್ ನಾಟಕ ರಚನೆಯ, ಶ್ರೀಮತಿ ಜಯಶ್ರೀ ಇಡ್ಕಿದು ಕನ್ನಡ ಅನುವಾದದ,  ವಿದ್ದು ಉಚ್ಚಿಲ್ ನಿರ್ದೇಶನದ ‘ಈದಿ’ ನಾಟಕವನ್ನು ಉಡುಪಿಯ ಸುಮನಸಾ ಕೊಡವೂರು ಕಲಾಬಳಗದವರು ಮನೋಜ್ಞವಾಗಿ ಪ್ರಸ್ತುತಪಡಿಸಿ, ನೆರೆದ ಸಭಿಕರನ್ನು ರಂಜಿಸಿದರು.  

ಕಾರ್ಯಕ್ರಮದಲ್ಲಿ ಬಿ.ಆಯ್‌. ಈಳಿಗೇರ, ಡಾ. ಸದಾಶಿವ ಮರ್ಜಿ, ಕೊಟ್ರೇಶಪ್ಪ ಅಂಗಡಿ, ಕಿರಣ ಸಿದ್ಧಾಪುರ, ರವಿ ಕುಲಕರ್ಣಿ, ಮಲ್ಲಿಕಾರ್ಜುನ ಹಡಪದ, ರೇಖಾ ದೇಶಪಾಂಡೆ, ಶ್ರೀಧರ ಗಸ್ತಿ, ಶಿವ ಕುಲಕರ್ಣಿ ದಂಪತಿಗಳು ಸೇರಿದಂತೆ ಕಲಾಭಿಮಾನಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ