ಸೌಂದತ್ತಿ

ಶಾಂತ ರೀತಿಯಿಂದ ಹೋಳಿ ಆಚರಿಸಿ: ಸಿಪಿಐ ಕರುಣೇಶಗೌಡ

ಶಾಂತ ರೀತಿಯಿಂದ ಹೋಳಿ ಆಚರಿಸಿ: ಸಿಪಿಐ ಕರುಣೇಶಗೌಡ

ಲೋಕದರ್ಶನ ವರದಿ 

ಸವದತ್ತಿ 06: ತಾಲೂಕಿನಾದ್ಯಂತ ಮಾ.7ಮತ್ತು 8ರಂದು ನಡೆಯುವ ಹೋಳಿ ಹಬ್ಬವನ್ನು ಎಲ್ಲರೂ ಶಾಂತ ರೀತಿಯಿಂದ ಆಚರಿಸುವದರ ಜೊತೆಗೆ ಕಾನೂನು ಸುವ್ಯವಸ್ಥೆಗೆ ಸಹಕಾರ ನೀಡಬೇಕೆಂದು ಸಿಪಿಐ ಕರುಣೇಶಗೌಡ ಹೇಳಿದರು. 

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. 

ಆರೋಗ್ಯದ ದೃಷ್ಠಿಯಿಂದ ನೈಸರ್ಗಿಕವಾಗಿ ಹೋಳಿ ಆಟಕ್ಕೆ ಬಳಕೆ ಮಾಡಬೇಕಾದಂತ ಬಣ್ಣಗಳನ್ನು ಮಾತ್ರ ಬಳಕೆ ಮಾಡುವ ಮೂಲಕ ರಸಾಯನಿಕ ಮಿಶ್ರಣದ ಬಣ್ಣಗಳ ಬಳಕೆಗೆ ಕಡಿವಾಣ ಹಾಕಬೇಕೆಂದರು.  

ಎಲ್ಲ ಧರ್ಮೀಯರು ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಿರುವದರಿಂದ ಪ್ರತಿಯೊಬ್ಬರು ಶಾಂತಿ ಸಂಯಮದೊಂದಿಗೆ ಹಬ್ಬದ ಆಚರಣೆ ಮಾಡಿ ಸಾಂಪ್ರದಾಯಕವಾಗಿ ಕಾಮದಹನ ಕ್ರಿಯೆಯನ್ನು ಪರಿಪೂರ್ಣಗೊಳಿಸಬೇಕೆಂದರು. ಹೋಳಿ ಹಬ್ಬದ ದಿನದಂದು ಮದ್ಯ ಮಾರಾಟವನ್ನು ನಿಷೇಧ ಮಾಡಲಾಗಿದ್ದು, ಅನಾವಶ್ಯಕವಾಗಿ ಕುಡಿದು ಅಹಿತಕರ ಘಟನೆಗೆ ಕಾರಣರಾಗುವಂತ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. 

ಶಂಕರಗೌಡ ಪಾಟೀಲ ಮತ್ತು ಕೆ.ಕೆ.ಪುಣೇದ ಮಾತನಾಡಿ, ಪಟ್ಟಣದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಇಲ್ಲಿಯವರೆಗೆ ಯಾವುದೆ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಎಲ್ಲರೂ ಒಗ್ಗೂಡಿಕೊಂಡು ಹೋಳಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದರು. ಆನಿ ಅಗಸಿಯ ಕಾಮಣ್ಣನಿಗೆ ಅನಾದಿ ಕಾಲದಿಂದಲೂ ಹಿರೇಮಸೂತಿಯ ಮುಲ್ಲಾನ ಪೈಜಾಮ ತೊಡಿಸಿ ಕಾಮದಹನ ಮಾಡಿಕೊಂಡು ಬರಲಾಗುತ್ತಿದ್ದು, ಈ ಕಾಮಣ್ಣ ಹಿಂದೂ ಮುಸ್ಲಿಂ ಬಾಂಧವರ ಭಾವೈಕ್ಯತೆಯ ಪ್ರತೀಕವಾಗಿದ್ದಾನೆ ಎಂದರು 

ಯಲ್ಲಪ್ಪ ಗೊರವನಕೊಳ್ಳ ಮಾತನಾಡಿ, ಆನಿ ಅಗಸಿ ಕಾಮಣ್ಣ ಪಟ್ಟಣದ ಪ್ರಮುಖ ಕಾಮಣ್ಣವಾಗಿದ್ದು, ಈ ಕಾಮಣ್ಣನಿಗೆ ಗೌಡರ ಮನೆಯಿಂದ ನೈವೇದ್ಯ ತರುವುದು ವಾಡಿಕೆಯಾಗಿದೆ. ಈ ಸಂದರ್ಭದಲ್ಲಿ ಗೌಡರ ಮನೆಯಿಂದ ಹೆಣ್ಣು ಮಕ್ಕಳೊಂದಿಗೆ ನೈವೇದ್ಯ ತರುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯವರು ರಕ್ಷಣೆ ನೀಡಬೇಕೆಂದರು. 

ಪುರಸಭೆ ಸದಸ್ಯರಾದ ಅರ್ಜುನ ಅಮ್ಮೋಜಿ, ಲಕ್ಷ್ಮಣರಾವ್ ಕುಲಕರ್ಣಿ,  ಮೌಲಾಸಾಬ ತಬ್ಬಲಜಿ, ದಿಲಾವರ ಫೀರಖಾನ, ನೀಲಪ್ಪ ಬರಿಗಾಲ ಸೇರಿದಂತೆ ವಿವಿಧ ಗಲ್ಲಿಗಳ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು. 


ಸುದ್ದಿ ಓದಿ