ಕುಡಿಯುವ ನೀರು ಪೂರೈಕೆಯಲ್ಲಿ ನಿಷ್ಕಾಳಜಿ ಸಹಿಸಲ್ಲ
ಶಾಸಕ ಜಗದೀಶ ಗುಡಗುಂಟಿ ಖಡಕ್ ಎಚ್ಚರಿಕೆ: ತಾಲೂಕಾ ಮಟ್ಟದ ಅಧಿಕಾರಿಗಳ ಟಾಸ್ಕ್ ಫೋರ್ಸ ಸಭೆ
ಜಮಖಂಡಿ 19: ತಾಲೂಕಿನಲ್ಲಿ ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಅಧಿಕಾರಿಗಳು ಹಗಲಿರುಳು ಶ್ರಮಿಸಬೇಕು. ಯಾವೊಬ್ಬ ಅಧಿಕಾರಿ ಕುಡಿಯುವ ನೀರು ಪೂರೈಕೆ ಕಾರ್ಯದಲ್ಲಿ ನಿಷ್ಕಾಳಜಿ ತೋರಿಸಬಾರದೆಂದು ಶಾಸಕ ಜಗದೀಶ ಗುಡಗುಂಟಿ ಖಡಕ್ ಎಚ್ಚರಿಕೆ ನೀಡಿದರು.
ನಗರದ ತಹಸೀಲ್ದಾರ ಕಚೇರಿಯ ಸಭಾಭವನದಲ್ಲಿ ನಡೆದ ತಾಲೂಕಾ ಮಟ್ಟದ ಅಧಿಕಾರಿಗಳ ಟಾಸ್ಕ್ ಫೋರ್ಸ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಕೃಷ್ಣಾ ನದಿ ಬತ್ತಿ ಹೋಗಿದ್ದು, ನದಿ ತೀರದ ಎಡ-ಬಲ ದಂಡೆಯ ಗ್ರಾಮಗಳ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ದಿನೇದಿನೇ ಅಧಿಕವಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಅತೀ ಅವಶ್ಯವಿರುವ ಕಡೆ ಶೀಘ್ರದಲ್ಲೇ ಕೊಳವೆ ಭಾವಿ ಕೊರೆದು ನೀರು ಪೂರೈಕೆಗೆ ಅಧಿಕಾರಿಗಳು ಹಿಂದೇಟು ಹಾಕಬಾರದು. ಈಗಾಗಲೇ ತಾಲೂಕಿನ ಕೆಲವು ಗ್ರಾಮಗಳಲ್ಲಿ ಬೋರ್ವೆಲ್ಗಳನ್ನು ಕೊರೆಸಿ ನೀರು ನೀಡಲಾಗಿದೆ. ಹಾಗೇನಾದರೂ ನೀರು ಪೂರೈಕೆಗೆ ಹೆಚ್ಚಿನ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿಕೊಂಡು ಬರುವುದಾಗಿ ಅವರು ಸಭೆಯಲ್ಲಿ ತಿಳಿಸಿದರು.
ಜಮಖಂಡಿ ನಗರಸಭೆ ಆಧೀನದಲ್ಲಿ ಈಗಾಗಲೇ 216 ಬೋರ್ವೆಲ್ಗಳು ಕಾರ್ಯ ನಿರ್ವಹಿಸುತ್ತಿದ್ದು, 16 ಶುದ್ದ ಕುಡಿವ ನೀರು ಘಟಕಗಳಲ್ಲಿ 8 ಮಾತ್ರ ಸುಸ್ಥಿತಿಯಲ್ಲಿದ್ದು, ಇನ್ನೂ 8 ಘಟಕಗಳನ್ನು ಇನ್ನೆರಡು ದಿನಗಳಲ್ಲಿ ದುರಸ್ತಿ ಮಾಡಿಸಿ, ನಾಗರೀಕರಿಗೆ ಶುದ್ಧ ನೀರು ನೀಡಲು ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ ಅವರಿಗೆ ಸೂಚಿಸಿದರು. ಅಲ್ಲದೇ ನಗರದಲ್ಲಿರುವ ಸುಮಾರು 34 ಭಾವಿಗಳ ಸ್ಥಿತಿ-ಗತಿಗಳ ಬಗ್ಗೆ ಹಾಗೂ ಅವುಗಳನ್ನು ಪರೀಶೀಲಿಸಿ ವರದಿ ನೀಡುವಂತೆ ಆದೇಶಿಸಲಾಯಿತು.
ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರು ಪೂರೈಕೆ ಮಾಡುವ ಬಹುಗ್ರಾಮಗಳ ಕುಡಿವ ನೀರು ಪೂರೈಕೆ ಯೋಜನೆಯಡಿ ಇನ್ನೂ ಕೆಲವು ಗ್ರಾಮಗಳಲ್ಲಿ ಕಾಮಗಾರಿ ಅಪೂರ್ಣ ಗೊಂಡಿದ್ದು, ಅವುಗಳನ್ನು ಕೂಡಲೇ ಮುಗಿಸುವಂತೆ ಅಧಿಕಾರಿ ಪಂಚಾಳ ಅವರಿಗೆ ಸೂಚಿಸಲಾಯಿತು.
ಕಡಿಮೆ-
ತಾಲೂಕಿನ ಹಿಪ್ಪರಗಿ ಬ್ಯಾರೇಜ್ದಲ್ಲಿ ಸದ್ಯ ಕೇವಲ ಅರ್ಧ ಟಿಎಂಸಿಯಷ್ಟು ನೀರು ಸಂಗ್ರಹವಿದ್ದು(ಡೆಡ್ ಸ್ಟೋರೇಜ್) ಇದರಿಂದ ಜಮಖಂಡಿ ಪಟ್ಟಣಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತದೆ. ಈಗಾಗಲೇ ನಗರ ಪ್ರದೇಶಕ್ಕೆ ಮೂರು ದಿನಕ್ಕೊಮ್ಮೆ ನದಿ ನೀರನ್ನು ಬಿಡಲಾಗುತ್ತಿದ್ದು, ಇನ್ನು ಮುಂದೆ ಮಳೆಯಾಗಿ ಕೃಷ್ಣಾ ನದಿ ತುಂಬುವವರೆಗೆ ನದಿ ನೀರು ಬೀಡಲು ಸಾದ್ಯವಾಗುವುದಿಲ್ಲ. ತಾಲೂಕಿನಲ್ಲಿ ಸುಮಾರು 28 ಗ್ರಾಮಗಳಲ್ಲಿ ಬಹುಗ್ರಾಮಗಳ ಶುದ್ದ ಕುಡಿವ ನೀರು ಪೂರೈಕೆ ಯೋಜನೆಯಡಿ ನೀರು ಪೂರೈಕೆ ಮಾಡಲಾಗುತ್ತಿದ್ದು, ಗ್ರಾಮಸ್ಥರು ಕೂಡಾ ಕುಡಿವ ನೀರನ್ನು ನೀರಾವರಿಗೆ ಬಳಸದೇ ತಾಲೂಕಾಡಳಿತದೊಂದಿಗೆ ಸಹಕರಿಸಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ಮಿತವ್ಯಯ-
ಪಟ್ಟಣ ಪ್ರದೇಶದ ಜನತೆ ಸಾಧ್ಯವಾದಷ್ಟು ನೀರನ್ನು ಮಿತವ್ಯಯವಾಗಿ ಬಳಕೆ ಮಾಡಿಬೇಕು. ನೀರು ಕೂಡ ರಾಷ್ಟ್ರ ಸಂಪತ್ತು ಅದನ್ನು ಕಾಯ್ದಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ.ಬೇಸಿಗೆ ಕಾಲದಲ್ಲಿ ಜನತೆ ನೀರನ್ನು ಕಡಿಮೆ ಪ್ರಮಾಣದಲ್ಲಿ ಬಳಸುವಂತೆ ಶಾಸಕ ಕೋರಿಕೊಂಡರು.
ಸಭೆಯಲ್ಲಿ ತಹಸೀಲ್ದಾರ ಸದಾಶಿವ ಮಕ್ಕೋಜಿ, ತಾಪಂ ಈಓ ಬೆಳ್ಳುಂಡಗಿ, ಗ್ರಾಮೀಣ ಕುಡಿವ ನೀರು ಪೂರೈಕೆ ಅಧಿಕಾರಿ ಸುರೇಶ ಪಾಂಚಾಳ, ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ, ಎಇಇ ಸುಭಾಸ ಗೌಡರ, ಹೆಸ್ಕಾಂ ಎಇಇ ಬಿ.ಕೆ.ಹಿಪ್ಪರಗಿ, ಲೋಕೋಪಯೋಗಿ ಎಇಇ ಶಂಕರ ಬಂಡಿವಡ್ಡರ, ವೆಂಕಟೇಶ ಆದಾಪೂರ, ಬಿಈಓ ಅಶೋಕ ಬಸಣ್ಣವರ, ಸಿಡಿಪಿಒ ಅನುರಾಧಾ ಹಾದಿಮನಿ ಸೇರಿದಂತೆ ಅನೇಕರಿದ್ದರು.