ಹೊಸಪೇಟೆ

ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಕರೆ

ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಕರೆ

ಹೊಸಪೇಟೆ(ವಿಜಯನಗರ) 22: ಅಜಾದಿ ಕಾ ಅಮೃತ್ ಮಹೋತ್ಸವದ ನಿಮಿತ್ತ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ ವತಿಯಿಂದ ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದಲ್ಲಿ ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ್ ಯೋಜನೆ, ಪಿ.ಎಂ ಆವಾಸ್ ಯೋಜನೆ, ಫಿಟ್ ಇಂಡಿಯಾ ಸೇರಿದಂತೆ ವಿವಿಧ ಮಹತ್ವಾಕಾಂಕ್ಷಿ ಯೋಜನೆಗಳು ಹಾಗೂ ಅಂತರಾಷ್ಟ್ರೀಯ ಯೋಗ ಕುರಿತು ಜಾಗೃತಿ ಕಾರ್ಯಕ್ರಮ ಬುಧವಾರ ನಡೆಯಿತು. 

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ರೈತರ ಕಲ್ಯಾಣಕ್ಕಾಗಿ ಜಾರಿಗೆ ತಂದ ವಿವಿಧ ಯೋಜನೆಗಳ ಸಶಕ್ತ ಕಿಸಾನ್ ಸಮೃದ್ಧ ಭಾರತ,ಪಿಎಂ ಸ್ವನಿಧಿ ಯೋಜನೆ-ವ್ಯಾಪಾರಿಗಳಿಗೆ ಸುಲಭ ಸಣ್ಣ ಸಾಲ, ಪ್ರಧಾನಮಂತ್ರಿ ವಸತಿ ಯೋಜನೆ, ಸೌಭಾಗ್ಯ(ಪ್ರಧಾನಮಂತ್ರಿ ಸಹಜ್ ಬಿಜ್ಲಿ ಹರ್‌ಘರ್ ಯೋಜನೆ) ಸೇರಿದಂತೆ ಕಳೆದ 8 ವರ್ಷಗಳಲ್ಲಿ ಕೇಂದ್ರ ಸರಕಾರ ಜಾರಿಗೆ ತಂದ ವಿವಿಧ ಯೋಜನೆಗಳ ಕುರಿತು ಈ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಲಾಯಿತು. 

ಹರಿದ್ವಾರ ಪತಂಜಲಿ ಯೋಗ ಪೀಠದ ಹನುಮಾನ್ ದೇವ್ ಜೀ ಅವರು ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯೋಗದಲ್ಲಿ ಎಲ್ಲಾ ಕಾಯಿಲೆಗಳಿಗೆ ಪರಿಹಾರವಿದೆ. ಯೋಗವು ಮಾನಸಿಕ ನೆಮ್ಮದಿ ಆರೋಗ್ಯ ನೀಡುತ್ತದೆ. ದೇಶದ ಭಾವೈಕ್ಯತೆಯನ್ನು ಯೋಗದಿಂದ ಗಳಿಸಬಹುದು. ಯೋಗವನ್ನು ಭಾರತವು ವಿಶ್ವಕ್ಕೆ ಪರಿಚಯಿಸಿದೆ, ಯುವಕರು ದುಶ್ಚಟಗಳನ್ನು ದೂರವಿಟ್ಟು ಭಾರತವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಬೇಕು ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ವಿಜಯನಗರ ಮಹಾವಿದ್ಯಾಲಯದ ಅಧ್ಯಕ್ಷರಾದ ಅಸುಂಡಿ.ಬಿ ನಾಗರಾಜಗೌಡ ಅವರು ಮಾತನಾಡಿ, ಭಾರತವು ಅಭಿವೃದ್ಧಿ ಪತದತ್ತ ಸಾಗುತ್ತಿದೆ, ಈ ದೆಸೆಯಲ್ಲಿ ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ನೆರೆ ಹೊರೆಯವರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.  

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ ಉಪನಿರ್ದೇಶಕರಾದ ಡಾ.ಜಿ.ಡಿ.ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಹರಿದ್ವಾರದ ಪತಂಜಲಿ ಯೋಗ ಪೀಠದ ಆಚಾರ್ಯ ಚಂದ್ರಮೋಹನ್ ಜೀ ಜೊತೆಗೂಡಿ ಯೋಗದ ಆಸನಗಳನ್ನು ವಿದ್ಯಾರ್ಥಿಗಳಿಗೆ  ಮನವರಿಕೆ ಮಾಡಿದರು. 

ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ರಸಪ್ರಶ್ನೆ ಹಾಗೂ ಭಾಷಣ ಸ್ಪರ್ಧೆ ವೀಜೆತರಿಗೆ ಬಹುಮಾನಗಳನ್ನು ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಚಂದ್ರಶೇಖರ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಗೌಡ, ಸಹ ಪ್ರಾಧ್ಯಾಪಕರಾದ ಡಾ.ಮೃತ್ಯಂಜಯ ರುಮಾಲೆ ಅವರು ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಇತರರು ಇದ್ದರು. 


ಸುದ್ದಿ ಓದಿ