ಬಿಹಾರದಲ್ಲಿ ಹೊಸ ಏಮ್ಸ್ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ನವದೆಹಲಿ, ಸೆಪ್ಟೆಂಬರ್ 15: ಬಿಹಾರದ ದರ್ಬಂಗಾದಲ್ಲಿ 1,264 ಕೋಟಿ ರೂ. ವೆಚ್ಚದಲ್ಲಿ ಹೊಸ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದ್ದು, ಯೋಜನೆ 48 ತಿಂಗಳೊಳಗೆ ಪೂರ್ಣಗೊಳ್ಳಲಿದೆ.
ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್ಎಸ್ವೈ) ಅಡಿಯಲ್ಲಿ ಬಿಹಾರ ಏಮ್ಸ್ ಸ್ಥಾಪಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಂಸ್ಥೆಗೆ ನಿರ್ದೇಶಕರ ಒಂದು ಹುದ್ದೆಯನ್ನು ರೂಪಿಸಲು ಅನುಮೋದನೆ ನೀಡಲಾಗಿದೆ
ಬಿಹಾರದಲ್ಲಿ ಮತ್ತು ನೆರೆಯ ಪ್ರದೇಶಗಳಲ್ಲಿ ಆರೋಗ್ಯ ರಕ್ಷಣೆ ಮೂಲಸೌಕರ್ಯ ಮತ್ತು ಗುಣಮಟ್ಟದ ವೈದ್ಯಕೀಯ ಶಿಕ್ಷಣವನ್ನು ಹೊಸ ಏಮ್ಸ್ ಒದಗಿಸಲಿದೆ. ಅಲ್ಲದೆ, ಬಡವರಿಗೆ ಮತ್ತು ನಿರ್ಗತಿಕರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಒದಗಿಸಲಿದೆ. ಮಾತ್ರವಲ್ಲದೆ, ಆರೋಗ್ಯ ಸಚಿವಾಲಯದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಮತ್ತು ಇತರ ಆರೋಗ್ಯ ಕಾರ್ಯಕ್ರಮಗಳಿಗೆ ವೈದ್ಯಕೀಯ ಮಾನವ ಸಂಪನ್ಮೂಲವನ್ನು ಒದಗಿಸಲಿದೆ.
ಹೊಸ ಸಂಸ್ಥೆಯು ತರಬೇತಿ ಪಡೆದ ಬೋಧನಾ ಸಿಬ್ಬಂದಿ ಮತ್ತು ತಜ್ಞ ವೈದ್ಯರನ್ನು ಒಳಗೊಂಡಿರುತ್ತದೆ. ಕೇಂದ್ರ ಸರ್ಕಾರ ಹೊಸ ಏಮ್ಸ್ ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚಗಳನ್ನು ಸಂಪೂರ್ಣವಾಗಿ ಭರಿಸುತ್ತದೆ.