ಕೆರೆಗಳನ್ನು ತುಂಬಿಸುವ 230 ಕೋಟಿ ಯೋಜನೆಗೆ ಸಂಪುಟದಲ್ಲಿ ಮಂಜೂರು ; ಕಾಗವಾಡದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳಿಂದ ವಿಜಯೋತ್ಸವ
ಲೋಕದರ್ಶನ ವರದಿ
ಅಥಣಿ 21: ಕಾಗವಾಡ ಮತಕ್ಷೇತ್ರದ ಬರಗಾಲ ಪೀಡಿತ ಪ್ರದೇಶದ ಅಭಿವೃದ್ಧಿಗಾಗಿ 23 ಕೆರೆಗಳನ್ನು ತುಂಬಿಸುವ 230 ಕೋಟಿ ಅನುದಾನ ಬಿಡುಗಡೆ ಮಾಡಲು ಕಾರಣರಾದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರನ್ನು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅಭಿನಂದಿಸಿದರು. ಅವರು ದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಮಳೆ ಕೊರತೆಯಿಂದ ಕಾಗವಾಡ ಕ್ಷೇತ್ರದ ಶೇ.80 ಗ್ರಾಮಗಳು ನೀರಿನ ಕೊರತೆ ಎದುರಿಸುತ್ತಿದ್ದವು. ಈ ಪ್ರದೇಶದಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ರೈತರ ಬೇಡಿಕೆಯಾಗಿತ್ತು. ಆದರೆ 20 ವರ್ಷಗಳಿಂದ ಇಂದಿನವರೆಗೂ ಇದು ಸಾಧ್ಯವಾಗಿರಲಿಲ್ಲ ಎಂದ ಅವರು ನಾನು ಶಾಸಕನಾದ ದಿನದಿಂದಲೂ ಈ ಕೆರೆ ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ಪ್ರಾರಂಭಿಸಿ ಮುಖ್ಯಮಂತ್ರಿಗಳನ್ನು ಭೇಟಿಯಾದಾಗಲೊಮ್ಮೆ ಒತ್ತಡ ಹೇರುತ್ತಿದ್ದೆ ಇದರ ಪರಿಣಾಮ ಮುಖ್ಯಮಂತ್ರಿಗಳು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 23 ಕೆರೆಗಳನ್ನು ತುಂಬಿಸುವ 230 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದಾರೆ ಎಂದರು.
ಕೆರೆ ತುಂಬಿಸುವ ಯೋಜನೆಯ ಜೊತೆಗೆ ಈಗಾಗಲೇ ಮುಕ್ತಾಯದ ಹಂತದಲ್ಲಿರುವ ಖಿಳೆಗಾಂವ ಬಸವೇಶ್ವರ ಏತನೀರಾವರಿ ಯೋಜನೆ ಪೂರ್ಣಗೊಳ್ಳಲು ಬೇಕಾದ ಅನುದಾನ ಬಿಡುಗಡೆಗೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದು, ಡಿಸೆಂಬರ್ ತಿಂಗಳ ಅಂತ್ಯದೊಳಗಾಗಿ ಈ ಯೋಜನೆಯೂ ಕೂಡ ಅಂತಿಮ ಹಂತ ತಲುಪಲಿದೆ. ಡಿಸೆಂಬರ್ ತಿಂಗಳಲ್ಲಿ ಸಿ ಎಂ ಬಸವರಾಜ ಬೊಮ್ಮಾಯಿ ಕಾಗವಾಡ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಕೆರೆ ತುಂಬುವ ಯೋಜನೆಯನ್ನು ಉದ್ಘಾಟಿಸುವರು ಮತ್ತು ಕೆರೆ ತುಂಬುವ ಯೋಜನೆಗೆ ಭೂಮಿ ಪೂಜೆ ಕೂಡ ನೆರವೇರಿಸಲಿದ್ದಾರೆ ಎಂದರು.
ಪಿಎಲ್ಡಿ ಬ್ಯಾಂಕ ಅಧ್ಯಕ್ಷ, ಬಿಜೆಪಿ ಧುರೀಣ ಶೀತಲ್ ಪಾಟೀಲ ಮಾತನಾಡಿ, ಖಿಳೆಗಾಂವ ಬಸವೇಶ್ವರ ಏತ ನೀರಾವರಿ ಹಾಗೂ ಬರಪೀಡಿತ ಪ್ರದೇಶಕ್ಕೆ ನೀರಾವರಿ ಒದಗಿಸುವಂತಹ 23 ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಶಾಸಕ ಶ್ರೀಮಂತ ಪಾಟೀಲರು ಬರದ ನಾಡಿನ ಭಗೀರಥ ಎಂದ ಅವರು ಶಾಸಕರು ತಮ್ಮ 8 ಆಪ್ತ ಸಹಾಯಕರ ಮೂಲಕ ಸರಕಾರಿ ಸೌಲಭ್ಯಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದಾರೆ ಇದು ನಮ್ಮ ಶಾಸಕರ ಹೆಗ್ಗಳಿಕೆ ಎಂದರು.
ಅನಂತಪುರ ಬಿಜೆಪಿ ಮುಖಂಡ ರಾಜೇಂದ್ರ ದಾದಾ ಶಿಂಧೆ ಮಾತನಾಡಿ, ಖಿಳೆಗಾಂವ ಬಸವೇಶ್ವರ ನೀರಾವರಿ ಹಾಗೂ 23 ಕೆರೆಗಳನ್ನು ತುಂಬಿಸುವ ಈ ಯೋಜನೆ ಬರಗಾಲ ಪೀಡಿತ ಅನಂತಪುರ, ಮದಭಾವಿ, ಮಂಗಸೂಳಿ, ಭಾಗದ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ ಎಂದರು.
ಐನಾಪುರ ಬಿಜೆಪಿ ಮುಖಂಡ ರಾಜೇಂದ್ರ ಪೋದ್ದಾರ ಮಾತನಾಡಿ, ಇದೇ ಪ್ರಥಮ ಬಾರಿಗೆ ಅಭಿವೃದ್ಧಿ ವಂಚಿತ ಕಾಗವಾಡ ಕ್ಷೇತ್ರಕ್ಕೆ ಈ ಯೋಜನೆಯ ಅನುಷ್ಠಾನದಿಂದ ಮತ್ತೆ ಹೊಸ ಅಭಿವೃದ್ಧಿಯ ಕನಸು ನನಸಾಗುತ್ತಿದೆ, ಶ್ರೀಮಂತ ಪಾಟೀಲರಂತಹ ಕ್ರಿಯಾ ಶೀಲ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ನೂರಾರು ಬಾರಿ ಮುಖ್ಯಮಂತ್ರಿಗಳ ಕಡೆಗೆ ತಮ್ಮ ಮನವಿಯನ್ನು ನೀಡಲು ಅಲೆದಾಡಿದ್ದಾರೆ, ಇದೆಲ್ಲದರ ಪರಿಣಾಮವಾಗಿ 230 ಕೋಟಿಯ ಈ ಯೋಜನೆ ಮಂಜೂರಾಗಿದೆ ಎಂದರು.
ಬಿಜೆಪಿ ಧುರೀಣರಾದ ದಾದಾ ಪಾಟೀಲ, ತಮ್ಮಣ್ಣ ಪಾರಶೆಟ್ಟಿ ಮಾತನಾಡಿದರು. ಅನಂತಪುರ ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಹಬಗೊಂಡೆ, ಖಿಳೆಗಾಂವ ಗ್ರಾಮ ಪಂಚಾಯತ ಅಧ್ಯಕ್ಷ ರವಿ ನಾಗೊಳ, ಮಲಾಬಾದ ಗ್ರಾಮ ಪಂಚಾಯತ ಅಧ್ಯಕ್ಷ ಬೀರ್ಪ ಉಗಾರೆ, ಧುರೀಣರಾದ ಧರೆಪ್ಪ ಹೊನ್ನಾಗೋಳ, ಸುನೀಲ ಚೌಗಲೆ, ಸಂಭಾಜಿ ವೀರ, ಅಬಾ ಚವ್ಹಾಣ, ರಾಜು ಚವ್ಹಾಣ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.