ಗೋ ರಕ್ಷಣೆಗೆ ಗೋಶಾಲೆ ತೆರೆದು ಯಶಸ್ವಿ ಗೋಪಾಲಕನಾದ ಬೆಂಗಳೂರು ಯುವಕ
ವಿಶೇಷ ವರದಿ: ಹಮೀದ್ ಮಠ
ಬೆಂಗಳೂರು, ಜ.4 : ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿ ಕೈತುಂಬ ವೇತನ ಪಡೆಯುತ್ತಿದ್ದ ಯುವಕನೊಬ್ಬ ಗೋವುಗಳ ಸಂರಕ್ಷಣೆಗಾಗಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಬೆಂಗಳೂರಿಗೆ ಬಂದು ದೇಶೀ ತಳಿಗಳ ಹಸುವಿನ ಹೈನುಗಾರಿಕೆ ನಡೆಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ಡೆಂಕಣಿಕೋಟೆ ಗಡಿಗ್ರಾಮ ಹಿರಿದಾಳ ನಿವಾಸಿ ಡಾ. ಪ್ರಾಣೇಶ್ ಗೋವುಗಳ ಸಂರಕ್ಷಣೆಯ ಜೊತೆಗೆ ಹೈನೋದ್ಯಮವನ್ನು ಉದ್ಯಮವಾಗಿಸಿಕೊಂಡಿರುವ ಯುವಕ. ದೇಸಿ ತಳಿಗಳ ಹಸುಗಳನ್ನು ಸಂರಕ್ಷಿಸಬೇಕು ಎಂಬ ಉದ್ದೇಶದಿಂದ ಆರಂಭಿಸಿದ ಅವರ ಫಾರಂ ಹೌಸ್ ನಲ್ಲಿ ಇಂದು 300ಕ್ಕೂ ಅಧಿಕ ವಿವಿಧ ದೇಸಿ ತಳಿಗಳ ಹಸುಗಳಿವೆ. ಸುಮಾರು 25 ಎಕರೆ ಪ್ರದೇಶದಲ್ಲಿ ಮಾತೃಕಾ ಗೋಶಾಲೆ ತೆರೆದಿರುವ ಪ್ರಾಣೇಶ್, ರಾಜ್ಯ ಸರ್ಕಾರ ಹೊಸದಾಗಿ ಜಾರಿಗೆ ತರುತ್ತಿರುವ ಗೋ ಹತ್ಯೆ ನಿಷೇಧದ ಹಿನ್ನೆಲೆಯಲ್ಲಿ ಮುಂದಾಲೋಚನೆಯಿಂದ ಅನುಗ್ರಹ ಟ್ಟಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಗೋವುಗಳ ರಕ್ಷಣೆಗೆ ಪಣತೊಟ್ಟಿದ್ದಾರೆ.
ವಯಸ್ಸಾದ ಹಸು, ಗಾಯಗೊಂಡ ಹಸುಗಳ ಸಂರಕ್ಷಣೆಗಾಗಿಯೇ ಇದನ್ನು ಸ್ಥಾಪಿಸಲಾಗಿದೆ. ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತಿರುವ ಸಂದರ್ಭದಲ್ಲಿ ಗೋವುಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುವುದು ಇದರ ಉದ್ದೇಶವಾಗಿದೆ ಎಂದು ಪ್ರಾಣೇಶ್ ಹೇಳುತ್ತಾರೆ.
ಹಸುವಿನ ಉಪಯೋಗ ಮುಗಿದ ನಂತರ ಅಥವಾ ವಯಸ್ಸಾದಾಗ ರೈತರಿಗೆ ಅವುಗಳನ್ನು ಸಾಕಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಅವರು ಗೋಶಾಲೆಗಳಿಗೆ ನೀಡಬಹುದು. ಗೋದಾನ ಮಾಡುವವರು ವಯಸ್ಸಾದ ಹಸುವನ್ನು ಗೋಶಾಲೆಗಳಿಗೆ ದಾನ ಮಾಡಿದರೆ ತಮ್ಮ ಉದ್ದೇಶ ಈಡೇರುವುದರ ಜೊತೆಗೆ ಗೋಶಾಲೆಗೂ, ರೈತರಿಗೂ ಸಹಾಯ ಮಾಡಿದಂತಾಗುತ್ತದೆ ಎಂದು ಅನುಗ್ರಹ ಫೌಂಡೇಶನ್ ಟ್ರಸ್ಟಿಯೂ ಆಗಿರುವ ಪ್ರಾಣೇಶ್ ಹೇಳುತ್ತಾರೆ
ಗೋದಾನ ಮಾಡುವ ಸಾರ್ವಜನಿಕರು ನಂತರದ ದಿನಗಳಲ್ಲಿ ತಾವು ನೀಡಿದ ಗೋವು ಯಾವ ಪರಿಸ್ಥಿತಿಯಲ್ಲಿದೆ ಎಂಬುದನ್ನು ಗಮನಿಸುವುದಿಲ್ಲ. ಆದರೆ ನಮ್ಮ ಗೋಶಾಲೆಗೆ ಮಾಡಿದ ಗೋದಾನದ ಹಸುವನ್ನು ಅತ್ಯಂತ ಸುಸಜ್ಜಿತವಾದ ಸ್ಥಳದಲ್ಲಿ ಕಾಳಜಿಯಿಂದ ಬೆಳೆಸಲಾಗುತ್ತದೆ, ದಾನ ಮಾಡಿದ ಸಾರ್ವಜನಿಕರು ಯಾವಾಗ ಬೇಕಾದರೂ ಬಂದು ಅದರ ಸ್ಥಿತಿಗತಿಯನ್ನು ನೋಡಿಕೊಂಡು ಹೋಗಬಹುದು. ಮಾತವಲ್ಲ ಅವುಗಳಿಗೆ ಆಹಾರವನ್ನು ತಂದು ಸ್ವತಃ ಅವರೇ ನೀಡಬಹುದು ಎನ್ನುತ್ತಾರೆ ಪ್ರಾಣೇಶ್.
ಬಹುತೇಕ ಗೋಶಾಲೆಗಳು ಇಕ್ಕಟ್ಟಾಗಿದ್ದು, ಕಾಂಕ್ರೀಟ್ ಕಟ್ಟಡಗಳಲ್ಲಿರುತ್ತವೆ. ಸಣ್ಣ ಕೊಠಡಿಗಳಲ್ಲಿ ಗೋವುಗಳನ್ನು ಇರಿಸಲಾಗುತ್ತದೆ. ಅವುಗಳಿಗೆ ಅಲ್ಲಿ ಓಡಾಡಲು ಸ್ಥಳಾವಕಾಶವಿರುವುದಿಲ್ಲ. ಹಸುವಿಗೆ ವಯಸ್ಸಾದಂತೆ ಉತ್ತಮ ಗಾಳಿಯ ವಾತಾವರಣ, ಹಸಿ ಹುಲ್ಲು ಬೇಕಾಗುತ್ತದೆ. ಹಾಗಿದ್ದರೆ ಮಾತ್ರ ಅವುಗಳು ಆರೋಗ್ಯವಂತವಾಗಿರಲು ಸಾಧ್ಯ. ಈ ಹಿನ್ನೆಲೆಯಲ್ಲಿ ಗೋದಾನ ಅಥವಾ ಗೋ ಸೇವೆ ಮಾಡುವವರು ಇವುಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಉತ್ತಮ ವಾತಾವರಣದಲ್ಲಿರುವ ಗೋಶಾಲೆಗಳಿಗೆ ಮಾತ್ರ ಗೋದಾನ ಮಾಡಬೇಕು. ಇದರಿಂದ ಅವರ ಉದ್ದೇಶ ಪೂರ್ಣವಾಗುತ್ತದೆ ಎಂದು ಅವರು ಪ್ರಾಣೇಶ್ ಹೇಳುತ್ತಾರೆ.
ಗೋ ಹತ್ಯೆ ನಿಷೇಧ ಕಾನೂನು ಬರುತ್ತಿರುವುದರಿಂದ ಗೋ ಶಾಲೆಗಳ ಮಹತ್ವ ಹೆಚ್ಚಾಗಿದೆ. ಆದ್ದರಿಂದ ಇಲ್ಲಿ ಗೋಶಾಲೆ ಆರಂಭಿಸಲಾಗಿದೆ. ಸಾರ್ವಜನಿಕರ ಬೆಂಬಲ ಮತ್ತು ಸಹಕಾರದಿಂದ ಮಾತ್ರ ಗೋವುಗಳ ರಕ್ಷಣೆ ಸಾಧ್ಯ. ಕೇವಲ ಸರ್ಕಾರ ಅಥವಾ ಟ್ರಸ್ಟ್ ಗಳಿಂದ ಮಾತ್ರ ಇದು ಸಾಧ್ಯವಿಲ್ಲ. ವಯಸ್ಸಾದ ಹಸುವಿಗೂ ಪ್ರತಿ ದಿನ 100 ರೂಪಾಯಿ ಖರ್ಚು ಇರುತ್ತದೆ. ಆದ್ದರಿಂದ ಸಾರ್ವಜನಿಕರು ಹುಟ್ಟುಹಬ್ಬ, ಮದುವೆ, ತಿಥಿ ಸೇರಿದಂತೆ ಯಾವುದೇ ಪ್ರಮುಖ ಕಾರ್ಯಕ್ರಮಗಳ ಸಂದರ್ಭದಲ್ಲಿ ಗೋಶಾಲೆಗೆ ಗೋವು ದಾನ ಮಾಡಬೇಕು ಎಂಬುದು ತಮ್ಮ ಕಳಕಳಿಯ ಮನವಿಯಾಗಿದೆ ಎಂದು ಅನುಗ್ರಹ ಫೌಂಡೇಶನ್ ಟ್ರಸ್ಟೀ ಪ್ರಾಣೇಶ್ ತಿಳಿಸಿದ್ದಾರೆ.
ನಾಟಿ ಹಸುವಿನ ಹಾಲಿಗೆ ಬೇಡಿಕೆ ಹೆಚ್ಚಳ; ಮಾತೃಕಾ ಗೋಶಾಲೆಯಲ್ಲಿ ದೇಸಿಗೋವುಗಳನ್ನು ಸಾಕಣೆ ಮಾಡಲಾಗುತ್ತಿದೆ. ಅದರ ಜೊತೆಗೆ ದೇಸಿ ಹಸುವಿನ ಹಾಲನ್ನು ಮತ್ತು ಅದರ ಇತರ ಮೌಲ್ಯವರ್ಧಿತ ಉತ್ಪನ್ನಗಳನ್ನು ಕೂಡ ಮಾರಾಟ ಮಾಡಲಾಗುತ್ತಿದೆ. ಹಾಲಿನಲ್ಲಿರುವ ಪ್ರೋಟೀನ್ ಅಂಶಗಳನ್ನು ಎ1 ಮತ್ತು ಎ2 ಎಂದು ವಿಂಗಡಿಸಲಾಗುತ್ತಿದೆ. ಎ1 ಕೇಸಿನ್ ಪ್ರೋಟಿನ್ ಮಿಶ್ರತಳಿ ಹಸುಗಳಲ್ಲಿ ಕಂಡುಬರುತ್ತದೆ. ಎ2 ಕೇಸಿನ್ ಪ್ರೊಟೀನ್ ಸ್ಥಳೀಯ ತಳಿರಾಸುಗಳಲ್ಲಿ ಕಂಡುಬರುತ್ತದೆ. ಎ2 ಕೇಸಿನ್ ಪ್ರೊಟೀನ್ ಹೊಂದಿರುವ ಹಾಲು ಮೂಳೆಗಳ ಬೆಳವಣಿಗೆ, ರಕ್ತದೊತ್ತಡ, ಹಾಗೂ ಆರೋಗ್ಯಕರ ಹೃದಯಕ್ಕೆ ಸಹಕಾರಿಯಾಗಿದೆ. ಈ ಬಗ್ಗೆ ಸ್ವತಃ ಪ್ರಾಣೇಶ್ ಅವರು ಅಧ್ಯಯನ ನಡೆಸಿ ಭಾರತೀಯ ವಿಜ್ಞಾನ ಕಾಂಗ್ರೆಸ್ ನಲ್ಲಿ ಎ2 ಕೇಸಿನ್ ಪ್ರೊಟೀನ್ ಬಗ್ಗೆ ಪ್ರಬಂಧ ಮಂಡಿಸಿದ್ದಾರೆ. ವಿಜ್ಞಾನಿಗಳಿಂದ ಪ್ರಮಾಣೀಕೃತ ಎ2 ಕೇಸಿನ್ ಹಾಲನ್ನು ಪ್ರಾಣೇಶ್ ಪೂರೈಸುತ್ತಿದ್ದಾರೆ. ಈ ಹಾಲಿನ ಮಹತ್ವವನ್ನು ಅರಿತಿರುವ ಸಾರ್ವಜನಿಕರಿಂದ ಹಾಲಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಬೆಂಗಳೂರಿನ ಯಾವುದೇ ಕಡೆಯಿಂದ ಬೇಡಿಕೆಯ ಕರೆ ಬಂದರೂ ಹಾಲು ಮತ್ತು ಅದರ ಉತ್ಪನ್ನ ಪೂರೈಸುವ ಮಾರುಕಟ್ಟೆ ವ್ಯವಸ್ಥೆಯನ್ನೂ ಅವರು ಹೊಂದಿದ್ದಾರೆ. ಒಂದು ಲೀಟರ್ ಹಾಲಿಗೆ 100 ರೂ., ಬೆಣ್ಣೆಗೆ 1200 ರೂ., ತುಪ್ಪಕ್ಕೆ 1600 ರೂ. ಹಾಗೂ ಮೊಸರಿಗೆ 130 ರೂ. ನಿಗದಿ ಪಡಿಸಿದ್ದಾರೆ. ದರ ಸ್ವಲ್ಪ ಹೆಚ್ಚಾಗಿರುವಂತೆ ಕಂಡರೂ ಆರೋಗ್ಯದ ದೃಷ್ಟಿಯಿಂದ ಜನರು ಇದನ್ನು ಕೊಂಡುಕೊಳ್ಳುತ್ತಿದ್ದಾರೆ. ದಿನದಿಂದ ದಿನಕ್ಕೆ ದೇಸಿ ಹಾಲಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಮಾತ್ರವಲ್ಲ ಪ್ರಾಣೇಶ್ ಅವರ ಫಾರಂಗೆ ಪ್ರವಾಸಿಗರು ಕೂಡ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದು, ಇದೀಗ ಅವರ ಫಾರಂ ಪಿಕ್ ನಿಕ್ ತಾಣವೂ ಆಗಿದೆ ಎಂದರೆ ತಪ್ಪಾಗಲಾರದು.
ಡಾ.ಪ್ರಾಣೇಶ್ ಮೊಬೈಲ್ ಸಂಖ್ಯೆ: 9910988522
ವಿಳಾಸ; 23, ಶ್ರೀ ರಾಘವೇಂದ್ರ ಆರ್ಕೇಡ್, ಮಣಿಪಾಲ್ ಕೌಂಟಿ ರೋಡ್, ಸಿಂಗಸಂದ್ರ, ಬೆಂಗಳೂರು-560068
www.mathruka.com, www.gopalika.com