ಕೊವಿಡ್-19 ಹಡರಡುವಿಕೆ ಭಾರತದಲ್ಲಿ ಇಳಿಮುಖ: 3,370 ಹೊಸ ಪ್ರಕರಣಗಳು, 670 ಸಾವು ವರದಿ
ನವದೆಹಲಿ, ಅ 24: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 53,370 ಹೊಸ ಕೊವಿಡ್-19 ಪ್ರಕರಣಗಳು ಮತ್ತು 650 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.ಹೊಸ ಪ್ರಕರಣಗಳೊಂದಿಗೆ ವಿಶ್ವದ ಎರಡನೇ ಅತಿ ಹೆಚ್ಚು ಪ್ರಕರಣಗಳಿರುವ ಭಾರತದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 78,14,682 ಕ್ಕೆ ಏರಿದ್ದರೆ, ಸಾವಿನ ಸಂಖ್ಯೆ 1,17,956 ಕ್ಕೆ ತಲುಪಿದೆ.
ಆಶಾದಾಯಕ ಬೆಳವಣಿಗೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏಳು ಲಕ್ಷಕ್ಕಿಂತ ಕಡಿಮೆ ಇದ್ದು, ಸದ್ಯ, ಈ ಸಂಖ್ಯೆ 6,80,680ರಷ್ಟಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಾಹಿತಿಯಂತೆ, ಕಳೆದ 24 ಗಂಟೆಗಳಲ್ಲಿ 10,13,82,564 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಮಹಾರಾಷ್ಟ್ರ 16,32,544 ಕೋವಿಡ್ -19 ಪ್ರಕರಣಗಳು ಮತ್ತು 43,514 ಸಾವುಗಳೊಂದಿಗೆ ತೀವ್ರ ಬಾಧಿತ ರಾಜ್ಯವಾಗಿ ಮುಂದುವರೆದಿದೆ. ಆಂಧ್ರಪ್ರದೇಶದಲ್ಲಿ 6,544 ಸಾವುಗಳು ಸೇರಿದಂತೆ 8,00,684 ಪ್ರಕರಣಗಳು ಈವರೆಗೆ ವರದಿಯಾಗಿವೆ. ಉಳಿದಂತೆ, ಮೂರನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 7,93,907 ಪ್ರಕರಣಗಳು ಮತ್ತು 10,840 ಸಾವುಗಳು ವರದಿಯಾಗಿವೆ.
ಹಬ್ಬಗಳು ಮತ್ತು ಚಳಿಗಾಲದಿಂದಾಗಿ ಮುಂದಿನ ಮೂರು ತಿಂಗಳು ನಿರ್ಣಾಯಕವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಎಚ್ಚರಿಸಿದ್ದಾರೆ.ಈ ಮಧ್ಯೆ, ಪ್ರಮುಖ ಔಷಧ ತಯಾರಿಕಾ ಕಂಪೆನಿಯಾದ ಅಸ್ಟ್ರಾಜೆನೆಕಾ ತನ್ನ ಲಸಿಕೆ ಪ್ರಯೋಗವನ್ನು ಬ್ರಿಟನ್ನ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದೊಂದಿಗೆ ಅಮೆರಿಕದಲ್ಲಿ ನಡೆಸಿದೆ. ಆರು ವಾರಗಳ ಹಿಂದೆ ಪ್ರಯೋಗಕ್ಕೊಳಗಾದ ವ್ಯಕ್ತಿ ತೀವ್ರ ಅಸ್ವಸ್ಥನಾದ್ದರಿಂದ ಅಮೆರಿಕದಲ್ಲಿ ಲಸಿಕೆ ಪ್ರಯೋಗವನ್ನು ಸ್ಥಗಿತಗೊಳಿಸಲಾಗಿತ್ತು. 84,218 ಹೊಸ ಪ್ರಕರಣಗಳ ತೀವ್ರ ಏರಿಕೆಯೊಂದಿಗೆ ಅಮೆರಿಕದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.