ಯಲ್ಲಮ್ಮಾ ಶ್ರೀಕ್ಷೇತ್ರ ಅಭಿವೃದ್ಧಿಗೆ 100 ಕೋಟಿ ಅನುದಾನ ಸಿಎಂ ಭರವಸೆ
ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿಕೆ: ಸಪ್ತಪದಿ ಸಾಮೂಹಿಕ ಸರಳ ವಿವಾಹ ಸಮಾರಂಭ
ಸವದತ್ತಿ 14: ಶ್ರೀಕ್ಷೇತ್ರ ಯಲ್ಲಮ್ಮಾ ದೇವಸ್ಥಾನಕ್ಕೆ ಬರುವಂತ ಲಕ್ಷಾಂತರ ಭಕ್ತಾಧಿಗಳಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವಂತ ಅಭಿವೃದ್ಧಿ ಕಾಮಗಾರಿಗಳಿಗೆ 100 ಕೋಟಿ ರೂ.ಗಳ ಅನುದಾನವನ್ನು ಮುಖ್ಯಮಂತ್ರಿಗಳು ನೀಡುವದಾಗಿ ಭರವಸೆ ನೀಡಿದ್ದು, ಬರುವಂತ ದಿನಗಳಲ್ಲಿ ಕಾಮಗಾರಿಗಳನ್ನು ಅರಂಭಿಸಲಾಗುತ್ತಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ಶ್ರೀಕ್ಷೇತ್ರ ಯಲ್ಲಮ್ಮಾ ದೇವಸ್ಥಾನದಲ್ಲಿ ರವಿವಾರದಂದು ಧಾರ್ಮಿಕ ದತ್ತಿ ಇಲಾಖೆ ಹಾಗೂ ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಆಶ್ರಯದಲ್ಲಿ ಹಮ್ಮಿಕೊಂಡ ಸಪ್ತಪದಿ ಸಾಮೂಹಿಕ ಸರಳ ವಿವಾಹ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡತನ ರೇಖೆಗಿಂತ ಕೆಳಗಿರುವಂತ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಅವರ ಕಲ್ಯಾಣಕ್ಕಾಗಿ ಸರಕಾರವು ಸಪ್ತಪದಿ ಯೋಜನೆಯನ್ನು ಜಾರಿಗೆ ತಂದು ಸರಳ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ದೇವಸ್ಥಾನದ ಅಭಿವೃದ್ದಿ ಕಾರ್ಯಗಳಿಗೆ ಪ್ರತಿಯೊಬ್ಬರ ಸಹಕಾರ ಬಹುಮುಖ್ಯವಾಗಿದ್ದು, ಶ್ರೀಕ್ಷೇತ್ರ ಯಲ್ಲಮ್ಮಾ ದೇವಸ್ಥಾನದ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯವರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಕರ್ತವ್ಯ ನಿರ್ವಹಿಸಬೇಕಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸಿಬ್ಬಂದಿಗಳ ವರ್ತನೆ ಸರಿಯಾಗಿರದೆ ಆಡಳಿತಾತ್ಮಕ ಕೆಲಸಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇದನ್ನೆ ಮುಂದುವರೆಸಿದರೆ ಅಂತಹ ಸಿಬ್ಬಂದಿಯವರ ಮೇಲೆ ಕಠಿಣ ಕ್ರಮಕೈಗೊಳ್ಳಲೇ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಿಬ್ಬಂದಿಯವರು ಶ್ರೀ ಕ್ಷೇತ್ರಕ್ಕೆ ಆಗಮಿಸುವ ಲಕ್ಷಾಂತರ ಭಕ್ತರ ಕಡೆಗೆ ವಿಶೇಷ ಗಮನ ಹರಿಸುವದರ ಜೊತೆಗೆ ದೇವಸ್ಥಾನಕ್ಕೆ ಬರುವಂತ ಆದಾಯವನ್ನು ಪ್ರಾಮಾಣಿಕವಾಗಿ ಸಂಗ್ರಹಿಸುವಂತ ಕಾರ್ಯ ನಡೆಸಬೇಕೆಂದರು. ಸರಕಾರಕ್ಕೆ ರೈತ ಮತ್ತು ಸೈನಿಕ ಎರಡು ಕಣ್ಣುಗಳಂತಿದ್ದು, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಎರಡು ವರ್ಗದ ಜನರ ಬಗ್ಗೆ ನಾವೆಲ್ಲಾ ಗೌರವ ತೋರಬೇಕಿದೆ ಎಂದರು.
ಆಡಳಿತಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳಾದ ಶಶಿಧರ ಬಗಲಿ ಮಾತನಾಡಿ, ಸಪ್ತಪದಿ ಯೋಜನೆಯಡಿ 10 ಜೋಡಿಗಳ ಮದುವೆ ನಡೆಯುತ್ತಿದ್ದು, 40ಸಾವಿರ ರೂ.ಗಳಲ್ಲಿ ವಧುವಿಗೆ ಬಂಗಾರದ ತಾಳಿ ವರನಿಗೆ 5ಸಾವಿರ ರೂ.ಗಳಲ್ಲಿ ಬಟ್ಟೆಗಳನ್ನು ನೀಡಲಾಗುತ್ತಿದೆ ಎಂದರು.
ಯಲ್ಲಮ್ಮಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ ಮಾತನಾಡಿ, ದಿ.ಸಿ.ಎಮ್.ಮಾಮನಿಯವರು ತಮ್ಮ ಅವಧಿಯಲ್ಲಿ ಯಲ್ಲಮ್ಮಾ ದೇವಸ್ಥಾನಕ್ಕೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ದೇವಸ್ಥಾನದ ಅಭಿವೃದ್ದಿ ಶ್ರಮವಹಿಸಿದ್ದು, ಈಗ ಆನಂದ ಮಾಮನಿಯವರು ಸಹ ಕ್ಷೇತ್ರ ಅಭಿವೃದ್ದಿಗೆ ವಿಶೇಷ ಒತ್ತು ನೀಡುತ್ತಿರುವದರಿಂದ ಬರುವಂತ ದಿನಗಳಲ್ಲಿ ಯಲ್ಲಮ್ಮಾ ದೇವಸ್ಥಾನ ಒಂದು ಮಾದರಿ ಕ್ಷೇತ್ರವಾಗಲಿದೆ ಎಂದರು.
ನಿರ್ವಾಣೇಶ್ವರ ಮಠದ ಮಹಾಂತ ಮಹಾಸ್ವಾಮೀಜಿ, ದಂಡಪಾಣಿ ದೀಕ್ಷಿತರು, ಪ್ರಸನ್ನ ದೀಕ್ಷಿತರು, ರಾಮಾರೂಢ ಮಹಾಸ್ವಾಮೀಜಿ, ಅಜ್ಜಯ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ಪಿಎಲ್ಡಿ ಬ್ಯಾಂಕ ಅಧ್ಯಕ್ಷ ಜಗದೀಶ ಶಿಂತ್ರಿ, ಪುರಸಭೆ ಉಪಾಧ್ಯಕ್ಷ ದೀಪಕ ಜಾನ್ವೇಕರ, ಗ್ರಾಂ.ಪಂ ಅಧ್ಯಕ್ಷೆ ಜುಬೇದಾ ಬಾರಿಗಿಡದ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೊಳಪ್ಪಗೌಡ ಗಂದಿಗವಾಡ, ರಾಜೇಶ್ವರಿ ಚಂದರಗಿ, ಲಕ್ಷ್ಮೀ ಹೂಲಿ, ಯಲ್ಲಪ್ಪ ಕಾಳಪ್ಪನವರ, ರಮೇಶ ಗೋಮಾಡಿ, ಪುಂಡಲೀಕ ಮೇಟಿ, ಸುನೀಲ ಪೂಜಾರಿ ಭಾಗವಹಿಸಿದ್ದರು.
ದೇವಸ್ಥಾನದ ಎಇಓ ಅರವಿಂದ ಮಾಳಗಿ ಸ್ವಾಗತಿಸಿದರು. ಶಿವಾನಂದ ತಾರೀಹಾಳ ನಿರೂಪಿಸಿ ವಂದಿಸಿದರು.