ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಶಿಲಾನ್ಯಾಸ
ಸವದತ್ತಿ: ತಾಲೂಕಿನಲ್ಲಿ ನೂತನವಾಗಿ ಜಾರಿಯಾದ ಸತ್ತಿಗೇರಿ ಏತ ನೀರಾವರಿ ಯೋಜನೆಗೆ ಆನಂದ ಮಾಮನಿ ಏತ ನೀರಾವರಿ ಯೋಜನೆಯೆಂದು ನಾಮಕರಣಗೊಳಿಸಿ ಘೋಷಿಸುವದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸ್ಥಳೀಯ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಿನ ಸತ್ತಿಗೇರಿ ಏತ ನೀರಾವರಿ ಯೋಜನೆ, ಪಟ್ಟಣದಲ್ಲಿ 24/7 ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ನೂತನ ತರಕಾರಿ ಮಾರುಕಟ್ಟೆ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಸತ್ತಿಗೇರಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳ್ಳಲು ಆನಂದ ಮಾಮನಿಯವರ ಪಾತ್ರ ಬಹುಮುಖ್ಯವಾಗಿದ್ದು, ತಾಲೂಕಿನ ಅಭಿವೃದ್ಧಿ ಹಾಗೂ ರಾಜಕೀಯ ದೃಷ್ಠಿಕೋನದಲ್ಲಿ ನನ್ನೊಂದಿಗೆ ರಾಜಣ್ಣ ಮಾಮನಿ ಮತ್ತು ಆನಂದ ಮಾಮನಿಯವರ ಸ್ನೇಹ ಸಂಭಂದವನ್ನು ನಾವು ಮರೆಯುವಂತಿಲ್ಲ ಎಂದರು.
ಸಾಧಕನಿಗೆ ಸಾವು ಅಂತ್ಯವಲ್ಲದಾಗಿದ್ದು, ಸಾವಿನ ನಂತರವು ಅವರ ಬದುಕು ಸಾಗುತ್ತದೆ ಎನ್ನುವದಕ್ಕೆ ಆನಂದ ಮಾಮನಿ ಸಾಕ್ಷಿಯಾಗಿದ್ದಾರೆ. 341 ಕೋಟಿ ರೂ.ಗಳಲ್ಲಿ 1 ಟಿಎಮ್ಸಿ ನೀರನ್ನು 16ಸಾವಿರ ಎಕರೆಗೆ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ಈ ಸತ್ತಿಗೇರಿ ಏತ ನೀರಾವರಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, 18 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.
ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದಲ್ಲಿ ಬರುವಂತ ಚುನಾವಣೆಗೆ ಸ್ಪರ್ಧಿಸಲು ಯಾರಿಗೆ ಟಿಕೆಟ್ ನೀಡಬೇಕೆಂದು ಪಕ್ಷವು ತೀರ್ಮಾನ ತೆಗೆದುಕೊಳ್ಳಲಿದ್ದು, ನಾನು ಎಲ್ಲ ಆಕಾಂಕ್ಷಿತರನ್ನು ಕರೆದು ಮಾತನಾಡಿದ್ದೇನೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದಲ್ಲಿ ಮಾತ್ರ ನಮ್ಮ ಪಕ್ಷದ ಅಭ್ಯರ್ಥಿಗೆ ಗೆಲುವು ಸಾಧ್ಯ ಎಂದರು.
ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ರೈತರ ಮಕ್ಕಳು ವಿದ್ಯಾವಂತರಾಗಬೇಕೆಂಬ ಉದ್ದೇಶದಿಂದ ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತಂದಂತ ಮೊದಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಾಗಿದ್ದಾರೆ ಎಂದರು. ಮೀಸಲಾತಿ ವಿಷಯದಲ್ಲಿ ಐತಿಹಾಸಿಕ ನಿರ್ಣಯವನ್ನು ತೆಗೆದುಕೊಳ್ಳುವ ಮೂಲಕ ಅನೇಕ ಸಮುದಾಯಗಳಿಗೆ ಒಳ ಮೀಸಲಾತಿಯ ಅನುಕೂಲ ಕಲ್ಪಿಸಿಕೊಟ್ಟ ಸರಕಾರ ಬೊಮ್ಮಾಯಿಯವರ ನೇತೃತ್ವದ ಸರಕಾರವಾಗಿದ್ದು ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದರು.
ಪ್ರಾದೇಶಿಕ ಆಯುಕ್ತ ಎಮ್.ಜಿ.ಹಿರೇಮಠ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಆಕಾಂಕ್ಷಿತರಾದ ರತ್ನಾ ಮಾಮನಿ, ವಿರುಪಾಕ್ಷ ಮಾಮನಿ, ರುದ್ರಣ್ಣ ಚಂದರಗಿ, ಬಸವರಾಜ ಪಟ್ಟಣಶೆಟ್ಟಿ, ಅಜಿತಕುಮಾರ ದೇಸಾಯಿ ಸೇರಿದಂತೆ ಅಧಿಕಾರಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಎಫ್.ಎಸ್. ಸಿದ್ದನಗೌಡರ ನಿರೂಪಿಸಿದರು.