ಕಾರವಾರ

ಸಿಐಟಿಯು ಬೃಹತ್ ಪ್ರತಿಭಟನೆ: ರೂ. 36 ಸಾವಿರ ಕನಿಷ್ಠ ವೇತನ ಹಾಗೂ ಕಾರ್ಮಿಕ ಸಂಹಿತೆ ತಿದ್ದುಪಡಿಗೆ ಆಗ್ರಹ

ಸಿಐಟಿಯು ಬೃಹತ್ ಪ್ರತಿಭಟನೆ: ರೂ. 36 ಸಾವಿರ ಕನಿಷ್ಠ ವೇತನ ಹಾಗೂ ಕಾರ್ಮಿಕ ಸಂಹಿತೆ ತಿದ್ದುಪಡಿಗೆ ಆಗ್ರಹ

ಕಾರವಾರ 30:  ಮಾಸಿಕ ಸರಾಸರಿ 36 ಸಾವಿರ ರೂಪಾಯಿ ಕನಿಷ್ಠ ವೇತನ ನಿಗದಿಪಡಿಸುವುದು, ಕೇಂದ್ರದ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ರಾಜ್ಯ ಸರ್ಕಾರ ಕಾರ್ಮಿಕ ಪರ ತಿದ್ದುಪಡಿ ತರುವುದು ಹಾಗೂ ಖಾಯಂಯೇತರ ಮತ್ತು ಯೋಜನಾ ಕಾರ್ಮಿಕರ ಸನ್ಮಾನಕ್ಕಾಗಿ ಶಾಸನ ರೂಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರವಾರ  ನಗರದಲ್ಲಿ ಶನಿವಾರ ಪ್ರತಿಭಟನಾ ಪ್ರದರ್ಶನ ನಡೆಯಿತು. ನಗರದ ಪ್ರಮುಖ ರಸ್ತೆಗಳ ಮೂಲಕ ಜಾಗೃತಿ ಮೆರವಣಿಗೆ ನಡೆಸಿದ ನೂರಾರು ಕಾರ್ಮಿಕರು, ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡು ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತುತ ಮಾರುಕಟ್ಟೆಯ ಬೆಲೆ ಏರಿಕೆ ಮತ್ತು ಜೀವನ ನಿರ್ವಹಣಾ ವೆಚ್ಚಕ್ಕೆ ಅನುಗುಣವಾಗಿ, ಎಲ್ಲಾ ಕಾರ್ಮಿಕರಿಗೂ ವೈಜ್ಞಾನಿಕ ಆಧಾರದ ಮೇಲೆ ಕನಿಷ್ಠ ವೇತನ ನಿಗದಿಪಡಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಒತ್ತಾಯಿಸಿದರು. ರಾಜ್ಯ ಸರ್ಕಾರವು ಮೇ 22ರಂದು ಹೊರಡಿಸಿರುವ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಸಿಐಟಿಯು ಸ್ವಾಗತಿಸಿದೆಯಾದರೂ, ಅದರಲ್ಲಿರುವ ಗಂಭೀರ ನೂನ್ಯತೆಗಳನ್ನು ತಕ್ಷಣವೇ ಸರಿಪಡಿಸಬೇಕು ಎಂದು ಆಗ್ರಹಿಸಿದೆ. ಇಂದಿನ ಅಗತ್ಯತೆಗಳಿಗೆ ತಕ್ಕಂತೆ ಮಾಸಿಕ ಸರಾಸರಿ 36 ಸಾವಿರ ರೂಪಾಯಿ ಕನಿಷ್ಠ ವೇತನ ನಿಗದಿಯಾಗಬೇಕು ಎಂಬುದು ಕಾರ್ಮಿಕರ ಪ್ರಮುಖ ಆಗ್ರಹವಾಗಿದೆ. ಕೈಮಗ್ಗ ಸೇರಿದಂತೆ 19 ಪ್ರಮುಖ ಉದ್ದಿಮೆಗಳನ್ನು ಈ ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಖಂಡನೀಯ.

ಇದರಿಂದಾಗಿ ರಾಜ್ಯದ ಲಕ್ಷಾಂತರ ಮಹಿಳಾ ಕಾರ್ಮಿಕರು ವೇತನ ಹೆಚ್ಚಳದ ಸೌಲಭ್ಯದಿಂದ ವಂಚಿತರಾಗಲಿದ್ದು, ತಕ್ಷಣವೇ ಈ 19 ಉದ್ದಿಮೆಗಳಿಗೂ ಹಾಗೂ ಸ್ಟೀಂ ನೌಕರರಿಗೂ ವೇತನ ಹೆಚ್ಚಳ ವಿಸ್ತರಿಸಿ ಹೊಸ ಆದೇಶ ಹೊರಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಅಲ್ಲದೆ, ಮಾಲೀಕರ ಯಾವುದೇ ಒತ್ತಡಕ್ಕೆ ಮಣಿಯದೆ ಈ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಲಾಯಿತು. ಯೋಜನಾ ಕಾರ್ಮಿಕರನ್ನು ಖಾಯಂಗೊಳಿಸಲು ಪ್ರತ್ಯೇಕ ಶಾಸನ ರೂಪಿಸಬೇಕು ಎಂದು ಒತ್ತಾಯಿಸಲಾಯಿತು. ಪ್ರತಿಭಟನೆಯ ಅಂತ್ಯದಲ್ಲಿ ಸಿಐಟಿಯು ಮುಖಂಡರು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ತಮ್ಮ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಿದರು. 


ಸುದ್ದಿ ಓದಿ