ನಿರುಪಯುಕ್ತ ಬಜೆಟ್ : ಕೆ.ನಾಗರತ್ನಮ್ಮ ಆರೋಪ
ಹೊಸಪೇಟೆ ಮಾ.21: ದಲಿತರಿಗೆ ಕಳೆದ ಬಾರಿಗಿಂತ 4000 ಕೋಟಿ ಕಡಿಮೆ ಮಾಡಿದ್ದು, 2021-22ರ ಬಜೆಟ್ ನಿರುಪಯುಕ್ತವಾಗಿದೆ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಗೌರವಾಧ್ಯಕ್ಷೆ ಕೆ.ನಾಗರತ್ನಮ್ಮ ಆರೋಪಿಸಿದರು.ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘವು ರಾಜ್ಯ ಬಜೆಟ್ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಂಡು, ತಹಶೀಲ್ದಾರರ ಕಛೇರಿ ಮುಂದೆ ಧರಣಿ ನಡೆಸಿತು. ಈ ಸಂದರ್ಭದಲ್ಲಿ ಮಾತನಾಡಿದ ನಾಗರತ್ನಮ್ಮ, ಈ ಸಾಲಿನ ಬಜೆಟ್ ಜನರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಬದಲು ಸಂಕಷ್ಟಕ್ಕೆ ತಳ್ಳಿದೆ. ಕೃಷಿ ವಲಯವನ್ನು ಆಧುನೀಕರಣಗೊಳಿಸುತ್ತಿರುವುದರಿಂದ ಕೂಲಿ ಕೆಲಸ ನಂಬಿ ಜೀವನ ಸಾಗಿಸುತ್ತಿರುವ ದಲಿತರನ್ನು ಅತ್ಯಂತ ತೀವ್ರವಾಗಿ ಬಾಧಿಸುತ್ತದೆ. ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ದುಡಿಮೆ ಇಲ್ಲದಂತಾಗಿದೆ. ಬ್ಯಾಕ್‍ಲಾಗ್ ಹುದ್ದೆಗಳನ್ನು ಸಹ ಸರ್ಕಾರಗಳು ತುಂಬುತ್ತಿಲ್ಲ ಎಂದರು..ಸಂಘದ ಕಾರ್ಯದರ್ಶಿ ಎಸ್.ಯಲ್ಲಮ್ಮ ಮಾತನಾಡಿ, ಕಳೆದ ಮೂರು ವರ್ಷಗಳಿಂದ ದೇವದಾಸಿ ಮಹಿಳೆಯರಿಗೆ 500 ರೂ.ಗಳ ಪಿಂಚಣಿ ಹೆಚ್ಚಳ ಮಾಡುತ್ತೇವೆ ಎಂದು ಹೇಳುತ್ತಾ ಬರುತ್ತಿರುವ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ ಯಾವುದೇ ಹಣವನ್ನು ಮೀಸಲಿಡದೇ ಮೋಸ ಮಾಡಿದೆ. ದಲಿತ ಕುಟುಂಬಗಳಿಗೆ ಭೂಮಿ ಮತ್ತು ಬೋರ್‍ವೆಲ್‍ಗಳಿಗೆ ಅನುದಾನ ಹೆಚ್ಚು ಮಾಡಿಲ್ಲವೆಂದು ಆರೋಪಿಸಿದರು.ಧರಣಿಯನ್ನು ಉದ್ದೇಶಿಸಿ ಕೆ.ಹಂಪಮ್ಮ ಮಾತನಾಡಿ, ಒಂದು ಕಡೆ ದಲಿತರಿಗೆ ರಾಜ್ಯ ಸರ್ಕಾರ ಅನ್ಯಾಯವೆಸಗಿದ್ದರೆ, ಕೇಂದ್ರ ಸರ್ಕಾರದ ಭೂ ಸುಧಾರಣಾ ನೀತಿ, ಸಾರ್ವಜನಿಕ ವಲಯಗಳ ಖಾಸಗೀಕರಣವು ಮತ್ತಷ್ಟು ಆತಂಕಕ್ಕೆ ಈಡು ಮಾಡಿವೆ ಎಂದರು. ಧರಣಿಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.