ಲಂಚ: ಪೊಲೀಸ್ ಪೇದೆಗಳು ಎಸಿಬಿ ಬಲೆಗೆ
ಚಿಕ್ಕೋಡಿ 09: ಅನಧಿಕೃತ ಪಾನ್ ಮಸಾಲಾ ಕಾರ್ಖಾನೆ ನಡೆಸುತ್ತಿದ್ದೀರಿ ಎಂದು ಹೆದರಿಸಿ ಮಾಲಿಕನಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸದಲಗಾ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಇಬ್ಬರು ಪೊಲೀಸ್ ಪೇದೆಗಳು ಭೃಷ್ಟಾಚಾರ ನಿಗೃಹ ದಳ(ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಗುರುವಾರ ರಾತ್ರಿ ಠಾಣೆಯ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಪಿಎಸ್ಐ ಕುಮಾರ ಹಿತ್ತಲಮನಿ ಹಾಗೂ ಕಾನ್ಸಟೆಬಲ್ ಮಾಯಪ್ಪಾ ಗಡ್ಡೆ ಮತ್ತು ಶ್ರೀಶೈಲ ಮಂಗಿ ಅವರನ್ನು ರೂ.40 ಸಾವಿರ ಲಂಚ ಪಡೆಯುವಾಗ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಸರ್ಕಾರದ ಅಗತ್ಯ ಪರವಾನಗಿ ಪಡೆದು ಗಡಿಗ್ರಾಮ ಬೋರಗಾಂವದಲ್ಲಿ ಪಾನ್ ಮಸಾಲಾ ಕಾರ್ಖಾನೆ ನಡೆಸುತ್ತಿದ್ದ ಇಚಲಕರಂಜಿ ಮೂಲದ ರಾಜು ಪಾಶ್ಚಾಪುರೆ ಅವರನ್ನು ಹೆದರಿಸಿದ್ದ ಪಿಎಸ್ಐ ಮತ್ತು ಪೇದೆಗಳು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕಾರ್ಖಾನೆ ಮಾಲಿಕ ಎಸಿಬಿಗೆ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಠಾಣೆಯ ಮೇಲೆ ದಾಳಿ ನಡೆಸಿದರು.
ಎಸಿಬಿ ಎಸ್ಪಿ ಬಿ.ಎಸ್.ನ್ಯಾಮಗೌಡರ ಮಾರ್ಗದರ್ಶನ ಮತ್ತು ಡಿವೈಎಸ್ಪಿ ಜೆ.ಎಂ.ಕರುಣಾಕರ ಶೆಟ್ಟಿ ನೇತೃತ್ವದಲ್ಲಿ ಇನ್ಸಪೆಕ್ಟರ್ ಗಳಾದ ಹೆಚ್ ಸುನಿಲಕುಮಾರ, ಎ.ಎಸ್.ಗುದಿಗೊಪ್ಪ, ಧಾರವಾಡದ ಅಲಿ ಶೇಖ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.