ನಗರ ದೇವತೆಗಳ ಜಾತ್ರೆಗೆ ಕೊರೊನಾ ಕರಿ ನೆರಳು: ಸಾಂಪ್ರದಾಯಿಕ ಆಚರಣೆಗೆ ಆದೇಶ
ರಾಣೇಬೆನ್ನೂರ 11: ಉತ್ತರ ಕರ್ನಾಟಕದ ಹೆಬ್ಬಾಗಿಲು ಅಂದಿನ ಇತಿಹಾಸದ ರಾಣಿಬಿದನೂರು ಇಂದಿನ ನಗರ ದೇವತೆ ರಾಣೇಬೆನ್ನೂರು ವಾಣಿಜ್ಯ ನಗರದ ಗಂಗಾಜಲ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವಕ್ಕೆ 500ಕ್ಕೂ ಹೆಚ್ಚು ವರ್ಷಗಳ ಭವ್ಯ ಇತಿಹಾಸ ಪರಂಪರೆಯಿದೆ ಎಂದು ಹೇಳಲಾಗುವ ಈ ಬಹು ದೊಡ್ಡ ಜಾತ್ರೆಗೆ ಕೊರೊನಾ ಮಹಾಮಾರಿ ವೈರಸ್ ರೋಗದ ಛಾಯೆ ಆವರಿಸಿದ್ದು, ಕೋವಿಡ್-19 ದೇವಾನು ದೇವತೆಗಳಿಗೂ ಸಹ ಕೈ ಬಿಟ್ಟಿಲ್ಲ ಎನ್ನುವುದಕ್ಕೆ ಪ್ರಸ್ತುತ ನಡೆಯಬೇಕಾಗಿದ್ದ ಗಂಗಾಜಲ ಮತ್ತು ತುಂಗಾಜಲ ಚೌಡೇಶ್ವರಿ ದೇವಿಯ ಜಾತ್ರೆಗೆ ಬ್ರೇಕ್ ಬಿದ್ದಿದ್ದು ಸೋಮವಾರ ನಡೆದ ಶಾಂತಿ ಸಭೆಯಲ್ಲಿ ಇದಕ್ಕೆ ಬಹುತೇಕ ಸಾಕ್ಷಿಯಾದಂತಾಗಿದೆ.
ರಾಣೇಬೆನ್ನೂರಿನ ಈ ಜಾತ್ರೆಯು ತಾಲೂಕಿನ ಎಲ್ಲ ಗ್ರಾಮೀಣ ಪ್ರದೇಶಗಳೂ ಸೇರಿದಂತೆ ಜಿಲ್ಲೆಯ ಮತ್ತು ನಾಡಿನ ಭಕ್ತರು ಈ ವಿಶೇಷ ಬಹುದೊಡ್ಡ ಜಾತ್ರೆಯನ್ನು ನೋಡಲೆಂದೇ ಬರುವ ಪರಂಪರೆ ಇದರ ವಿಶೇಷತೆಯಾಗಿದೆ. ಕೇವಲ ಜಾತ್ರೆಗಷ್ಟೇ ಸೀಮಿತವಾಗದೆ ಇದರ ಹಿನ್ನೆಲೆಯಲ್ಲಿ ನೂರಾರು ಅಂಗಡಿ ಮುಂಗಟ್ಟುಗಳು ಜಾತ್ರೆಗಾಗಿ ದಾವಿಸುವುದು, ತಿಂಗಳುಗಟ್ಟಲೆ ಬೀಡು ಬಿಟ್ಟು ತಮ್ಮ ವ್ಯಾಪಾರ-ವಹಿವಾಟು ನಡೆಸಿ ಜಾತ್ರಾ ಮುಕ್ತಾಯದಲ್ಲಿ ಎಲ್ಲರೂ ದೇವಿಗೆ ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಿಸಿ ಅವರವರ ಊರುಗಳಿಗೆ ತೆರಳುವುದು ವ್ಯಾಪಾರಿಗಳ ವಾಡಿಕೆ.
ಆದರೆ, ಕೋವಿಡ್-19 ಪರಿಣಾಮವಾಗಿ ಕಳೆದೆರಡು ವರ್ಷಗಳಿಂದ ಹಾಗೋ ಹೇಗೋ ಜಾತ್ರೆ ನಡೆದಿದ್ದು ದೇವಿಯ ಪವಾಡವೆನ್ನಬಹುದು. ಆದರೆ, ಈ ಬಾರಿ ಸರಕಾರ ಜಾರಿಗೆ ತಂದಿರುವ ಬಿಗಿ ನಿಯಂತ್ರಣ ಆದೇಶದ ಪರಿಣಾಮವಾಗಿ ಜಾತ್ರೆ ಆವರಣದಲ್ಲಿ ಯಾವುದೇ ಅಂಗಡಿ, ಮುಂಗಟ್ಟುಗಳು ಹಾಕಲು ಅವಕಾಶವಿಲ್ಲವೆಂದು ಜಿಲ್ಲಾಡಳಿತ ಸ್ಪಷ್ಟ ಆದೇಶ ನೀಡಿದೆ. ಇದರಿಂದ ಈ ಬಾರಿ ಈ ಬಹುದೊಡ್ಡ ಜಾತ್ರೆಗೆ ಯಾವುದೇ ವ್ಯಾವಹಾರಿಕ ಅಂಗಡಿ ಮುಂಗಟ್ಟುಗಳು ಇರದೆ ಇರುವುದು ಈ ಜಾತ್ರೆಗೆ ಮೆರುಗಿನ ಕಳೆ ಇಲ್ಲದಂತಾಗಿದೆ. ಜಾತ್ರೆ ಎನ್ನುವ ವಾತಾವರಣವೇ ಇರಲಾರದು ಎನ್ನುವ ಅಭಿಪ್ರಾಯಗಳು ಎಲ್ಲರಲ್ಲಿಯೂ ಕೇಳಿ ಬರುತ್ತಿರುವುದು ಸಾಮಾನ್ಯ ಮಾತಾಗಿದೆ.
ನಗರ ದೇವತೆ ಶ್ರೀ ಗಂಗಾಜಲ ಚೌಡೇಶ್ವರಿ ದೇವಿಯ ಜಾತ್ರೆ ಮತ್ತು ಅದೇ ರೀತಿ ಮಾರುತಿ ನಗರದ (ಬೆಂಚಿ ಮರಡಿ) ಶ್ರೀ ತುಂಗಾಜಲ ಜಾತ್ರೆಗಳು ಅತ್ಯಂತ ಸರಳವಾಗಿ ಮತ್ತು ಸಾಂಪ್ರದಾಯಿಕವಾಗಿ ನೆರವೇರಿಸುವುದರ ಮೂಲಕ ಸರಕಾರದ ನಿಯಮಾವಳಿಗಳನ್ನು ಪಾಲಿಸಬೇಕೆನ್ನುವುದು ಜಿಲ್ಲಾಡಳಿತದ ಸ್ಪಷ್ಟ ಆದೇಶವಾಗಿದೆ. ಹೀಗಾಗಿ ನಗರದಲ್ಲಿ ನಡೆಯುವ ಈ ಎರಡೂ ಬಹು ದೊಡ್ಡ ಜಾತ್ರೆಗಳು ಕೇವಲ ಸಾಂಪ್ರದಾಯಕಕ್ಕೆ ಮಾತ್ರ ಮೀಸಲಾಗಿರುವುದು ಲಕ್ಷಾಂತರ ಭಕ್ತರಲ್ಲಿ ನಿರಾಸೆ ಭಾವ ಮೂಡಿರುವುದು ಸುಳ್ಳಲ್ಲ. ಯಾವುದೇ ಜಾತಿ-ಧರ್ಮ, ಮತ-ಪಂಥ, ಬೇಧ-ಭಾವ ಕಾಣದ ಅತ್ಯಂತ ಸಡಗರ ಸಂಭ್ರಮದಿಂದ ಜರುಗಬೇಕಾಗಿದ್ದ ಈ ಜಾತ್ರೆಗೆ ಬೀಗರು-ಬಿಜ್ಜರು ಬರುವುದಕ್ಕೆ ಸರ್ಕಾರದ ಆದೇಶದಿಂದ ಬ್ರೇಕ್ ಬಿದ್ದಂತಾಗಿದೆ.
ಬಗೆ-ಬಗೆಯ ತರಹದ ವ್ಯಾಪಾರಿಗಳು ಈ ಜಾತ್ರೆಗಾಗಿಯೇ ಜಾತಕ ಪಕ್ಷಿಯಂತೆ ತಮ್ಮತಮ್ಮ ವ್ಯವಹಾರಿ ಅಂಗಡಿಗಳನ್ನು ತೆರೆಯಲು ಸ್ಪರ್ಧಾತ್ಮಕವಾಗಿ ಮುಂಚಿತವಾಗಿಯೇ ಮುಂದಾಗುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಕರಿ ನೆರಳು ಶ್ರೀ ಗಂಗಾಜಲ ಚೌಡೇಶ್ವರಿ ದೇವಿಯ ಜಾತ್ರೆಯ ಮೇಲೆ ಬಿದ್ದಿರುವುದರಿಂದ ನೂರಾರು ವ್ಯಾಪಾರಿಗಳ ಕುಟುಂಬಗಳ ಸಾವಿರಾರು ಸದಸ್ಯರೂ ಸಹ ಜಾತ್ರೆಯಿಂದ ಹೊರಗುಳಿಯುವಂತಾಗಿದೆಯಲ್ಲದೆ, ಆರ್ಥಿಕವಾಗಿಯೂ ಇವರು ಸಂಕಷ್ಟವನ್ನು ಎದುರಿಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ನಮ್ಮೂರ ಈ ದೇವಿಯ ಜಾತ್ರೆ ನಮಗೆ ಬಹು ದೊಡ್ಡ ಹೆಮ್ಮೆ. ಜಾತ್ರೆಗಾಗಿಯೇ ಪ್ರತಿ ವರ್ಷ ನಮ್ಮೆಲ್ಲ ಬೀಗರು ಬಿಜ್ಜರಿಗೆ ಕರೆಯಿಸುವ ಸಂಪ್ರದಾಯ ನಾನು ಕಂಡಂತೆ 40 ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಯಾವ ಕಾರಣಕ್ಕೂ ಈ ದೇವಿಯ ಜಾತ್ರೆ ನಿಲ್ಲುವುದಿಲ್ಲ. ನಡೆದೇ ನಡೆಯುತ್ತದೆ ಎನ್ನುವ ವಿಶ್ವಾಸ ಹೊಂದಿದ್ದ ನನ್ನ ಬಹು ದೊಡ್ಡ ನೀರೀಕ್ಷೆ ಹುಸಿಯಾಗಿದೆ. ಅಷ್ಟೇ ನಿರಾಸೆಯಾಗಿದೆ.
-ದುರಗಪ್ಪ, ಸ್ಥಳೀಯ ನಿವಾಸಿ