ರಬಾಕಾವಿಬನಹಟ್ಟಿ

ಪುಸ್ತಕಗಳು ನಿಜವಾದ ಗೆಳೆಯರು: ಶಿಕ್ಷಣಾಧಿಕಾರಿ ಬಸಣ್ಣವರ

ಪುಸ್ತಕಗಳು ನಿಜವಾದ ಗೆಳೆಯರು: ಶಿಕ್ಷಣಾಧಿಕಾರಿ ಬಸಣ್ಣವರ

ರಬಕವಿ ಬನಹಟ್ಟಿ 13:  ಜ್ಞಾನ ಸಂಪತ್ತು ಶ್ರೇಷ್ಠವಾದದ್ದು. ಸತತ ಓದು, ನಿರಂತರ ಅಧ್ಯಯನದಿಂದ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಪುಸ್ತಕದಲ್ಲಿ ಎಲ್ಲವೂ ಇದೆ. ಸ್ನೇಹಿತರು ಕೈ ಬಿಡಬಹುದು, ಪುಸ್ತಕಗಳು ನಿಜವಾದ ಗೆಳೆಯರು. ಅವು ಎಂದಿಗೂ ಕೈ ಬಿಡುವುದಿಲ್ಲ. ಮಕ್ಕಳಲ್ಲಿ ಸಾಹಿತ್ಯದ ಬೀಜಗಳನ್ನು ಬಿತ್ತಿದಾಗ ಅವರು ಮುಂದೆ  ಹೆಮ್ಮರವಾಗಿ ಬೆಳೆಯಬಹುದು. ಆ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ರಬಕವಿ-ಬನಹಟ್ಟಿ ತಾಲೂಕ ಘಟಕ ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಎ. ಕೆ. ಬಸಣ್ಣವರ ಹೇಳಿದರು.  

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕು ಘಟಕ ರಬಕವಿ-ಬನಹಟ್ಟಿ, ಎಂ.ವ್ಹಿ. ಪಟ್ಟಣ ಬಾಲಿಕೆಯರ ಪ್ರೌಢಶಾಲೆಯ ಕುವೆಂಪು ಸಾಹಿತ್ಯ ಸಂಘ ರಬಕವಿ ಇವರ ಸಂಯುಕ್ತಾಶ್ರಯದಲ್ಲಿ  ಶಾಲೆಗಳೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ ಆಲಸ್ಯತನ ಬಿಟ್ಟು ಶ್ರದ್ಧೆ ಭಕ್ತಿಯಿಂದ ಓದಿದರೆ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಬೆಳೆಯುವುದು ಎಂದರು. ಬಾಲಿಕೆಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಪಿ.ಎಚ್‌. ಪ್ರತಾಪ ಅಧ್ಯಕ್ಷತೆ ವಹಿಸಿ ಸಮೃದ್ಧ ಸಾಹಿತ್ಯ ಕನ್ನಡದಲ್ಲಿದೆ. ಓದುವುದರ ಮೂಲಕ ಶಾಲಾ ಮಕ್ಕಳು ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದರು. 

ಕನ್ನಡ ಸಾಹಿತ್ಯದಲ್ಲಿ ಕುಮಾರವ್ಯಾಸನ ಕಾವ್ಯ ಕರ್ಣಾಟ ಭಾರತ ಕಥಾ ಮಂಜರಿ  ಕುರಿತು ಸರಕಾರಿ ಪದವಿ ಪೂರ್ವಕಾಲೇಜು, ಪ್ರೌಢ ವಿಭಾಗ ಬನಹಟ್ಟಿಯ ಸುರೇಶ ಘಡಾಲೋಟಿ ಗಮಕ ವಾಚನದೊಂದಿಗೆ ಉಪನ್ಯಾಸ ನೀಡಿ ಕನ್ನಡ ಸಾಹಿತ್ಯ ಅದ್ಬುತವಾದದ್ದು. ರಾಮಾಯಣ ನಾವು ಹೇಗಿರಬೇಕು ಎಂದು ಹೇಳಿದರೆ, ಮಹಾಭಾರತ ನಾವು ಹೇಗಿದ್ದೇವೆ ಎಂದು ಹೇಳುತ್ತದೆ. ಸರ್ವಕಾಲದಲ್ಲಿ ಸರ್ವರಿಗೂ ಹಿತವನ್ನು ಉಂಟು ಮಾಡುವುದೇ ಸಾಹಿತ್ಯ. ಅಂತಹ ಸಾಹಿತ್ಯವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು. 

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಘಟಕದ ಅಧ್ಯಕ್ಷರಾದ ಮ. ಕೃ. ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಾದ್ಯಂತ ಸಾಹಿತ್ಯದ ಚಟುವಟಿಕೆಗಳು ನಿರಂತರ ಹಮ್ಮಿಕೊಳ್ಳಲಾಗುತ್ತಿದ್ದು, ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆಗೆ ಕಸಾಪ ತಾಲೂಕು ಘಟಕ ಬದ್ಧವಾಗಿದೆ. ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುಲು ಈ ವಿನೂತನ ಕಾರ್ಯಕ್ರಮ ಗಮನ ಸೆಳೆಯುತ್ತಿದೆ ಎಂದರು.  

ಹಿರಿಯ ಸಾಹಿತಿ ಮೃತ್ಯುಂಜಯ ರಾಮದುರ್ಗ, ಪತ್ರಕರ್ತ ಬಸಯ್ಯ ವಸ್ತ್ರದ, ಕಸಾಪ ಗೌರವ ಕಾರ್ಯದರ್ಶಿ, ಶಿಕ್ಷಣ ಸಂಯೋಜಕ ಶ್ರೀಶೈಲ ಬುರ್ಲಿ ವೇದಿಕೆಯಲ್ಲಿದ್ದರು. 

 ಕುಮಾರಿ ವೈಷ್ಣವಿ ಸಣಕಲ್ ಪ್ರಾರ್ಥಿಸಿದರು. ಶಿಕ್ಷಕ ಶಿವಶರಣಪ್ಪ ಸ್ವಾಗತಿಸಿದರು. ಕನ್ನಡ ಭಾಷಾ ಶಿಕ್ಷಕ ವಿ.ಪಿ. ಮಾಳಿ ನಿರೂಪಿಸಿದರು. ತಾಲೂಕಾ ಕಸಾಪ ಪದಾಧಿಕಾರಿ ಶಿಕ್ಷಕ  ಯಶವಂತ ವಾಘ್ಮೋರೆ ವಂದಿಸಿದರು. ರಬಕವಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಬಾಬು ಡಿ.ಎನ್‌., ನಿಂಗಪ್ಪ ಪೂಜಾರಿ, ಬಿದರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ