ವಿಜಯಪುರದಲ್ಲಿ ಇಬ್ಬರ ಮೃತದೇಹ ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾನ; ಪತ್ರಕರ್ತ ಬಾಬು ಮುರಾಳ ಸೇರಿ ಕುಟುಂಬಸ್ಥರಿಂದ ಮಾನವೀಯ ಸೇವೆ
ವಿಜಯಪುರ 05 : ನಗರದ ಬಿ.ಎಲ್.ಡಿ.ಇ ಆಸ್ಪತ್ರೆಗೆ ಪತ್ರಕರ್ತ ಸೇರಿದಂತೆ ಇತ್ತೀಚೆಗೆ ನಿಧನರಾದ ಇಬ್ಬರ ಮೃತದೇಹಗಳನ್ನು ಕುಟುಂಬಸ್ಥರು ದಾನ ಮಾಡುವ ಮೂಲಕ ಮಾನವೀಯ ಸೇವೆಗೆ ಮಾದರಿಯಾಗಿದ್ದಾರೆ. ಬಸವನ ಬಾಗೇವಾಡಿಯ ಹಿರಿಯ ಪತ್ರಕರ್ತ ಬಾಬು ಬಸಪ್ಪ ಮುರಾಳ ಅವರು ಮಂಗಳವಾರ ನಿಧನರಾದ ಬಳಿಕ, ಅವರ ಜೀವಿತಾವಧಿಯ ಇಚ್ಛೆಯಂತೆ ಕುಟುಂಬದವರು ಮೃತದೇಹವನ್ನು ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾನ ಮಾಡಿದರು.
ಅದೇ ರೀತಿ, ವಿಜಯಪುರ ನಗರದ ಗುರುಬಾಯಿ ಗುರುಸಿದ್ದಪ್ಪ ಕೊಣ್ಣೂರ ಅವರೂ ಇತ್ತೀಚೆಗೆ ನಿಧನರಾಗಿದ್ದು, ಅವರ ಕುಟುಂಬ ಸದಸ್ಯರು ಸೋಮವಾರ ಮೃತದೇಹವನ್ನು ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜಿನ ಅಂಗರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಆರ್. ಎಸ್. ಬುಲಗೌಡ ಅವರು ಪಾರ್ಥಿವ ಶರೀರಗಳನ್ನು ಸ್ವೀಕರಿಸಿ, ಕುಟುಂಬಸ್ಥರ ಈ ಮಾನವೀಯ ನಿರ್ಧಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಮೃತದೇಹ ದಾನದಿಂದ ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಸಂಶೋಧನೆಗೆ ಮಹತ್ವದ ನೆರವಾಗಲಿದೆ ಎಂದು ಅವರು ತಿಳಿಸಿದರು.