ಮಾನವನ ಪ್ರಾಣ ಉಳಿಸಲು ರಕ್ತ ಅತೀ ಅವಶ್ಯ: ಬುರಡಿಕಟ್ಟಿ
ರಾಣೇಬೆನ್ನೂರು 05: ಹಣ ಕೊಟ್ಟು ಉತ್ಪಾದನೆ ಮಾಡುವ ವಸ್ತು ರಕ್ತವಲ್ಲ. ಎಷ್ಟೇ ಹಣ ಕೊಟ್ಟರೂ ಅದು ಸಕಾಲಕ್ಕೆ ಸಿಗುವುದೂ ಇಲ್ಲ. ಹೀಗಾಗಿ ಸರ್ಕಾರ ಆರೋಗ್ಯ ಇಲಾಖೆಯಲ್ಲಿ ರಕ್ತ ಸಂಗ್ರಹ ಭಂಡಾರವನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಅತ್ಯಂತ ಸಹಕಾರಿಯಾಗಿದೆ. ಇದರಿಂದ ಅಪಘಾತಗಳು ಸೇರಿದಂತೆ ಮತ್ತಿತರೆ ಸಂದರ್ಭದಲ್ಲಿ ಅವಶ್ಯ ರಕ್ತವನ್ನು ಪಡೆದು ಪ್ರಾಣ ಉಳಿಸಲು ಸಹಕಾರಿಯಾದಂತಾಗಿದೆ. ಇಂತಹ ಕಾರ್ಯದಲ್ಲಿ ರಕ್ತದಾನಿಗಳು ಸ್ವಯಂ ಪ್ರೇರಿತವಾಗಿ ಧಾವಿಸಿ ದಾನಿಗಳಾಗಬೇಕು ಎಂದು ವಕೀಲರ ಸಂಘದ ಅಧ್ಯಕ್ಷ, ಸಾಮಾಜಿಕ ಚಿಂತಕ ಬಿ.ಹೆಚ್.ಬುರಡಿಕಟ್ಟಿ ಹೇಳಿದರು.
ಅವರು ಗುರುವಾರ ಇಲ್ಲಿನ ವಕೀಲರ ಸಂಘದ ಭವನದಲ್ಲಿ ತಮ್ಮ ಸಾಮಾಜಿಕ ಸೇವಾ ಯೋಜನೆಯಲ್ಲಿ ವಕೀಲರ ಸಂಘವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ವಕೀಲರ ಸಂಘವು ತನ್ನ ಇತಿಹಾಸದಿಂದಲೂ ಅನೇಕ ರೀತಿಯ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ನ್ಯಾಯಾಂಗ ಇಲಾಖೆಯ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಸಾರ್ವಜನಿಕರಿಗೆ ಮತ್ತು ಜನಸಾಮಾನ್ಯರಿಗೆ ತನ್ನ ಸೇವೆ ನೀಡುತ್ತ ಬಂದಿದೆ ಎಂದರು.
ಸಂಘವು ಸಾಮಾಜಿಕ ಸೇವೆಯ ಬಹುತೇಕ ವಿಭಾಗಗಳಲ್ಲಿ ನಮ್ಮ ಹಿಂದಿನ ಹಿರಿಯರು ಮಾಡುತ್ತ ಸೇವಾಮುಖಿಯಾಗಿ ಬಂದಿದ್ದಾರೆ. ಅದೇ ರೀತಿ ತಮಗೆ ಸಿಕ್ಕಿರುವ ಅವಕಾಶದಲ್ಲಿ ಎಲ್ಲರ ಮಾರ್ಗದರ್ಶನದ ಮೇರೆಗೆ ಹೊಸ ಹೊಸ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶ ಹೊಂದಲಾಗಿದೆ. ಇಂದು ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿ ಯಾವುದೇ ಮುನ್ಸೂಚನೆ ಮಾಹಿತಿ ಪ್ರಚಾರ ಇಲ್ಲದೆ ಇದ್ದರೂ ವಕೀಲರ ಸಂಘದ 50ಕ್ಕೂ ಹೆಚ್ಚು ನ್ಯಾಯವಾದಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಸಮಾಜಕ್ಕೆ ತಮ್ಮದೇಯಾದ ಕೊಡುಗೆ ನೀಡಿರುವುದು ಮತ್ತಷ್ಟು ಯೋಜನೆಗಳನ್ನು ರೂಪಿಸಲು ಪ್ರೇರಣೆ ಸಿಕ್ಕಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಪ್ರಧಾನ ಹಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ ಎಂ. ಕಮತೆ ಮತ್ತು ಅವರ ಧರ್ಮಪತ್ನಿ ಸಮೇತರಾಗಿ ರಕ್ತದಾನ ಮಾಡುವುದರ ಮೂಲಕ ಇತರರಿಗೆ ಮಾದರಿಯಾಗಿ, ರಕ್ತದಾನ ಶಿಬಿರಕ್ಕೆ ವಿಶೇಷ ಮೆರುಗು ತಂದರು.
ಕಾರ್ಯಕ್ರಮದಲ್ಲಿ ಶಿರಸ್ತೆದಾರರಾದ ಸುಧೀರ ಹೊಸೂರ, ಶಿವರಾಜ ದುಂದೂರ, ಬಸವರಾಜ ಹುಬ್ಬಳ್ಳಿ, ಹಿರಿಯ ವಕೀಲರಾದ ಸಿ.ಎನ್.ಶಿವಪೂಜಿ, ಕೆ.ಶಿವಲಿಂಗಪ್ಪ, ಸಿ.ಬಿ.ದಾವಣಗೇರಿ, ಕೆ.ಎನ್.ದೇಶಪಾಂಡೆ, ಪಿ.ಆರ್.ಹಿತ್ತಲಮನಿ, ಎಸ್.ಡಿ.ದಳವಾಯಿ, ವಿಠ್ಠಲ ಪುಠಾಣಿಕರ, ಆರ.ಬಿ.ಸೊರಟೂರ, ಕೆ.ಎಸ್.ಮಾಗನೂರ, ಎಲ್.ಎಫ್.ಕೆಂಗೊಂಡ, ಆರ್.ಪಿ.ಪಾಟೀಲ, ಆರ್.ಸಿ.ಪಾಟೀಲ, ಎಸ್.ಬಿ.ಶಿಗ್ಗಾಂವಿ, ಉಪಾಧ್ಯಕ್ಷ ಕುಮಾರ ಮಡಿವಾಳರ, ಕಾರ್ಯದರ್ಶಿ ಜಿ.ಕೆ.ಮುಂಡಾಸದ, ಸಹಕಾರ್ಯದರ್ಶಿ ದೀಲೀಪ್ ಅರಳಿಹಳ್ಳಿ, ಮಲ್ಲಿಕಾರ್ಜುನ ಹರವಿ, ಮಂಜನಗೌಡ ಹೊಸಗೌಡ್ರ, ಸಂಜೀವಕುಮಾರ ಚನ್ನಗೌಡ್ರ, ಪ್ರಭು ಶಿರಗಂಬಿಯವರ, ರಾಜು ಬಿದರಿ, ಪ್ರಶಾಂತ ಯಕನಳ್ಳಿ, ನಬಿ ಹಿರೇಬಿದರಿ, ಸವಿತಾ ಮೋಹರೆ, ಹೆಚ್.ಡಿ.ಹೊನ್ನಕ್ಕಳವರ, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಮುಂಜಾನೆಯಿಂದ ಸಂಜೆಯವರೆಗೆ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಮುಂಚೂಣಿಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಡಾ. ಬಸವರಾಜ ತಳವಾರ, ಬಸವರಾಜ ಕಮತದ, ರಾಜಶೇಖರ ಚೂರಿ, ಸಂತೋಷ ಕಲಾಲ, ಶ್ರೀನಿವಾಸ ಎಸ್. ಮಧು, ರೋಜಾ, ಸೀಮಾ ಮೊದಲಾದವರು ತಮ್ಮ ವೈದ್ಯಕೀಯ ಸೇವೆ ಸಲ್ಲಿಸಿದರು.