ಬೆಳಗಾವಿ

ರಕ್ತವು ಇನ್ನೊಬ್ಬರ ಜೀವ ಉಳಿಸುವ ಅಮೂಲ್ಯ ಕೊಡುಗೆ: ನವೀನ್ ಎನ್‌.

ರಕ್ತವು ಇನ್ನೊಬ್ಬರ ಜೀವ ಉಳಿಸುವ ಅಮೂಲ್ಯ ಕೊಡುಗೆ: ನವೀನ್ ಎನ್‌.

ಲೋಕದರ್ಶನ ವರದಿ 

ಬೆಳಗಾವಿ 23: ರಕ್ತದಾನವು ಮಹಾನ್ ಸೇವೆಯಾಗಿದೆ. ನಾವು ನೀಡುವ ರಕ್ತವು ಇನ್ನೊಬ್ಬರ ಜೀವ ಉಳಿಸುವ ಅಮೂಲ್ಯ ಕೊಡುಗೆಯಾಗುತ್ತದೆ. ರಕ್ತದ ಅವಶ್ಯಕತೆ ಇರುವ ಸಂದರ್ಭದಲ್ಲಿ ಯಾವುದೇ ವ್ಯಕ್ತಿಗೂ ಸಮಯಕ್ಕೆ ಸರಿಯಾಗಿ ರಕ್ತ ದೊರೆಯುವಂತೆ ಪ್ರತಿಯೊಬ್ಬ ಅರ್ಹ ನಾಗರಿಕರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಬೇಕು ಎಂದು ಯಳ್ಳೂರ ರಸ್ತೆಯಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋದನಾ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಎನ್‌. ಹೇಳಿದರು. 

ಯಳ್ಳೂರು ರಸ್ತೆಯಲ್ಲಿರುವ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋದನಾ ಕೇಂದ್ರದಲ್ಲಿ  ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ದಾದಿ ಡಾ. ಪ್ರಕಾಶಮಣಿ ಅವರ 19ನೇ ಪುಣ್ಯಸ್ಮರಣೆಯ ಅಂಗವಾಗಿ ನಡೆದ ರಕ್ತದಾನ ಶಿಬಿರನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ರಕ್ತದಾನ ಶಿಬಿರ ಆಯೋಜಿಸುವಲ್ಲಿ ಬ್ರಹ್ಮಕುಮಾರಿ ಸಂಸ್ಥೆ ವಹಿಸಿರುವ ಕಾಳಜಿಯನ್ನು ಶ್ಲಾಘಿಸಿದ ಅವರು, ಶಿಬಿರಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಈ ಆಸ್ಪತ್ರೆಯಲ್ಲಿ ಲಭ್ಯವಿರುವ ಸುಧಾರಿತ ವೈದ್ಯಕೀಯ ಸೇವೆಗಳ ಕುರಿತು ಮಾಹಿತಿ ನೀಡಿದ ಅವರು, ಇತ್ತೀಚೆಗೆ ಆರಂಭಗೊಂಡಿರುವ ‘ಪರಿವರ್ತನ’ ಪುನರ್ವಸತಿ ಮತ್ತು ವ್ಯಸನಮುಕ್ತಿ ಘಟಕದ ಬಗ್ಗೆಯೂ ಪ್ರಸ್ತಾಪಿಸಿದರು. ಅಗತ್ಯವಿರುವವರಿಗೆ ಸಮಗ್ರ ಪುನರ್ವಸತಿ ಹಾಗೂ ಬೆಂಬಲ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಈ ಘಟಕ ಕಾರ್ಯನಿರ್ವಹಿಸುತ್ತಿದೆ, ಇದರ ಸದುಪಯೋಗ ಸಾರ್ವಜನಿಕರು ಪಡೆದುಕೋಳ್ಳಬೇಕೆಂದು ತಿಳಿಸಿದರು. 

ರಾಜಯೋಗಿನಿ ಬ್ರಹ್ಮಕುಮಾರಿ ವಿದ್ಯಾ ಮಾತನಾಡಿ ಆಸ್ಪತ್ರೆ ಹಾಗೂ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹನಾಧಿಕಾರಿ ನವೀನ್ ಎನ್‌. ಅವರಿಗೆ ಶಿಬಿರ ಆಯೋಜಿಸಲು ನೀಡಿದ ಸಹಕಾರಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಬ್ರಹ್ಮಕುಮಾರಿ ಸಂಸ್ಥೆಯ ಉದ್ದೇಶಗಳು ಹಾಗೂ ಸಮಾಜಮುಖಿ ಚಟುವಟಿಕೆಗಳ ಕುರಿತು ವಿವರಿಸಿದ ಅವರು, ಆರೋಗ್ಯ, ಮಾನಸಿಕ ನೆಮ್ಮದಿ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಉತ್ತೇಜಿಸುವ ಸೇವಾ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು. 


ಸುದ್ದಿ ಓದಿ