ಅಥಣಿ

ನರೇಂದ್ರ ಮೋದಿ, ಬಿಜೆಪಿ ಗ್ಯಾರಂಟಿಗಳ ಮೇಲೆ ಮೂರು ರಾಜ್ಯಗಳಲ್ಲಿ ಮತದಾರರು ಬಿಜೆಪಿಗೆ ಭಾರಿ ಗೆಲುವು: ಅವತಾಡೆ

ನರೇಂದ್ರ ಮೋದಿ, ಬಿಜೆಪಿ ಗ್ಯಾರಂಟಿಗಳ ಮೇಲೆ ಮೂರು ರಾಜ್ಯಗಳಲ್ಲಿ ಮತದಾರರು ಬಿಜೆಪಿಗೆ ಭಾರಿ ಗೆಲುವು: ಅವತಾಡೆ

ಅಥಣಿ 05: ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ಬಿಜೆಪಿ ಗ್ಯಾರಂಟಿಗಳ ಮೇಲೆ  ಐದು ರಾಜ್ಯಗಳ ಚುನಾವಣೆಯಲ್ಲಿ ಮೂರು ಮಹತ್ವದ ರಾಜ್ಯಗಳ ಮತದಾರರು ಭಾರೀ ಬಹುಮತದಿಂದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಎಂದು ಕೆ.ಎಮ್‌.ಎಫ್ ನಿರ್ದೇಶಕ ಮತ್ತು ಬಿಜೆಪಿ ಹಿರಿಯ ಮುಖಂಡ ಅಪ್ಪಾಸಾಹೇಬ ಅವತಾಡೆ ಹೇಳಿದರು.  

ಅವರು ಅಥಣಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.  ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತಿಸ ಘಡ ರಾಜ್ಯಗಳಲ್ಲಿ  ಕಾಂಗ್ರೆಸ್ ಪಕ್ಷ ಸ್ಥಳೀಯವಾಗಿ ಅನೇಕ ಗ್ಯಾರಂಟಿಗಳನ್ನು ಮತ್ತು ಜಾತಿ ಗಣತಿ ಘೋಶಿಸುವ ಮೂಲಕ ರಾಜ್ಯದ ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡಿತ್ತು ಆದರೆ ಈ ರಾಜ್ಯಗಳಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಗೊಡ್ಡು ಗ್ಯಾರಂಟಿಗಳನ್ನು ಧಿಕ್ಕರಿಸಿ ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರಂಟಿಗೆ ಮಣೆ ಹಾಕಿದ್ದಾರೆ ಎಂದು ಹೇಳಿದರು.  

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಕೇವಲ ಭಾರತದಲ್ಲಿ ಮಾತ್ರ ಅಲ್ಲ ಅಮೇರಿಕಾ, ಯುರೋಪ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಮೆಚ್ಚಿಕೊಂಡಿದ್ದು, ಇಂತಹ ವಿಶ್ವ ಮೆಚ್ಚಿದ ನಾಯಕ ನರೇಂದ್ರ ಮೋದಿಯವರು ಸತತ ಎರಡು ಬಾರಿ ಪ್ರಧಾನಿಯಾಗಿ ದೇಶದ ಜನರ ಸೇವೆ ಮಾಡುತ್ತಿರುವುದೇ ನಮ್ಮ ಸೌಭಾಗ್ಯ ಎಂದರು.  

ಪಂಚರಾಜ್ಯಗಳಲ್ಲಿ ನಡೆದ ಈ ಚುನಾವಣೆ 2024 ರ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಭಾವಿಸಲಾಗಿತ್ತು ಹೀಗಾಗಿ 2024 ರ ಲೋಕಸಭಾ ಚುನಾವಣೆಯಲ್ಲಿ  350 ಕ್ಕೂ ಹೆಚ್ಚು ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಮೂರನೇ ಬಾರಿ ಮೋದಿಯವರು ಪ್ತಧಾನಿಯಾಗಲಿದ್ದಾರೆ ಎಂದ ಅವರು ರಾಜ್ಯದಲ್ಲಿ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಸ್ಥಗಿತಗೊಂಡಿದೆ ಮತ್ತೊಂದೆಡೆ ಘೋಷಿಸಿದ ಗ್ಯಾರಂಟಿಗಳು ಜನರನ್ನು ತಲಪುತ್ತಿಲ್ಲ ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಉಂಟಾಗಿದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ದೀಪಕ್ ಪಾಟೀಲ ಉಪಸ್ಥಿತರಿದ್ದರು. 


ಸುದ್ದಿ ಓದಿ