ಬೆಳಗಾವಿ

ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ ನಾಯ್ಕರ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಆಶೀರ್ವಚನ

ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ ನಾಯ್ಕರ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಆಶೀರ್ವಚನ

ಲೋಕದರ್ಶನ ವರದಿ 

  ಬೆಳಗಾವಿ  21: ಪುಟ್ಟಪರ್ತಿಯ ಭಗವಾನ್ ಶ್ರೀ ಸಾಯಿ ಬಾಬಾ ಅವರ ಅನುಯಾಯಿ, ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ನಾಯ್ಕರ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ “ನಾನು ಏಕೆ ಹುಟ್ಟಿದ್ದೇನೆ? ನನ್ನ ಜೀವನದ ಉದ್ದೇಶವೇನು?” ಎಂಬುದನ್ನು ಅರಿತುಕೊಂಡು, ಜೀವನದ ಪ್ರತಿಕ್ಷಣವನ್ನು ಸಾರ್ಥಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ತಮ್ಮ ಗುರಿಯನ್ನು ಸ್ಪಷ್ಟವಾಗಿ ಹೊಂದಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ತಮ್ಮಿಂದ ಸಮಾಜಕ್ಕೆ ಸಾಧ್ಯವಾದಷ್ಟು ಸೇವೆ ಸಲ್ಲಿಸುವ ಮೂಲಕ ಜನ್ಮವನ್ನು ಸಾರ್ಥಕಗೊಳಿಸಬೇಕು ಎಂದು ಸಲಹೆ ನೀಡಿದರು.  

ನಾಯ್ಕರ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆದ ಹಲವು ವಿದ್ಯಾರ್ಥಿಗಳು ವೈದ್ಯರು ಹಾಗೂ ಸರ್ಕಾರಿ ಅಧಿಕಾರಿಗಳಾಗಿ ಸಮಾಜ ಸೇವೆಯಲ್ಲಿ ತೊಡಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಬೇಕು ಎಂದು ಆಶೀರ್ವದಿಸಿದರು.  

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕೃತ ಡಾ. ಸಿ.ಎನ್‌. ನಾಯ್ಕರ್ ಅವರು ಸದ್ಗುರುಗಳನ್ನು ಸ್ವಾಗತಿಸಿ ಸಂಸ್ಥೆಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಥೆಯ ಮುಂದಿನ ಯೋಜನೆಗಳಾದ ನಾಯ್ಕರ್ ಪ್ಯಾರಾ ಮೆಡಿಕಲ್ ಕಾಲೇಜು, ನಾಯ್ಕರ್ ಸಿಬಿಎಸ್‌ಇ ಶಾಲೆ ಹಾಗೂ ನಾಯ್ಕರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಗ್ರಾಮೀಣ ಪ್ರದೇಶದಲ್ಲಿ ಆರಂಭಿಸುವ ಉದ್ದೇಶವನ್ನು ವಿವರಿಸಿದರು.  

ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶ್ವೇತಾ ಸಿ. ನಾಯ್ಕರ್, ಕಾರ್ಯದರ್ಶಿ ಶ್ರೀ ಶಿವಪ್ಪ ಎಸ್‌. ಅಣ್ಣಿಗೇರಿ, ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶ್ರೀ ಜೆ.ಕೆ. ಆದಪ್ಪನವರ, ಶ್ರೀ ಮಹೇಂದ್ರ ಸಿಂಗ್, ಸಂಭಾಜಿ ಕಲಾಲ್, ನಿವೃತ್ತ ಅಧಿಕಾರಿಗಳಾದ ಶ್ರೀ ಚನ್ನಬಸಪ್ಪ ಕೊಡ್ಲಿ ಹಾಗೂ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶ್ರೀ ಮಂಜುನಾಥ ಮುನವಳ್ಳಿ ಸೇರಿದಂತೆ ಗಣ್ಯರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. 


ಸುದ್ದಿ ಓದಿ